Advertisement

ಬಾಗಲಕೋಟೆ: ಬಿಟಿಡಿಎ ಅಧಿಕಾರಿಗಳೊಂದಿಗೆ ರೈತರ ವಾಗ್ವಾದ

05:53 PM Jan 03, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ 3ನೇ ಯೂನಿಟ್‌ ಕಾಮಗಾರಿಗೆ ಗುತ್ತಿಗೆದಾರರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬೆಳೆದ ವಿವಿಧ ಬೆಳೆ ನಾಶಪಡಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಆಗಮಿಸಿದ ಬಿಟಿಡಿಎ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

Advertisement

ಹಳೆಯ ನಗರದಿಂದ ನವನಗರಕ್ಕೆ ತೆರಳುವ ಮಾರ್ಗದ ಅನುಷ್ಕಾ ಪೆಟ್ರೋಲ್‌ ಬಂಕ್‌ ಬಳಿ, ಬಿಟಿಡಿಎದಿಂದ ಸ್ವಾಧೀನಪಡಿಸಿಕೊಂಡ ಭೂ ಮಾಲೀಕರು, ತಮ್ಮ ಹೊಲದಲ್ಲಿ ಗೋಧಿ, ಕಬ್ಬು, ಮೆಣಸಿನಕಾಯಿ, ಜೋಳ ಹೀಗೆ ವಿವಿಧ ಬೆಳೆ
ಬೆಳೆದಿದ್ದಾರೆ. ಆದರೆ, ಸ್ವಾಧೀನಪಡಿಸಿಕೊಂಡು 5-6 ವರ್ಷಗೊಂಡಿದ್ದು, ನಿಯೋಜಿತ 3ನೇ ಯೂನಿಟ್‌ ಜಾಗೆಯಲ್ಲಿ ರೈತರು ಬೆಳೆ ಬೆಳೆಯದಂತೆ ಸೂಚನೆ ನೀಡಲಾಗಿತ್ತು.

ಹಿಂಗಾರು ಹಂಗಾಮಿಗೆ ಬೆಳೆದ ಬೆಳೆ ಕಟಾವು ಮಾಡುವವರೆಗೂ ರೈತರಿಗೆ ತೊಂದರೆ ಕೊಡದಂತೆ ರೈತರು ಖಡಕ್‌ ಎಚ್ಚರಿಕೆಯೂ
ನೀಡಿದ್ದರು. ಇದೆಲ್ಲದರ ಮಧ್ಯೆ ಯೂನಿಟ್‌-3 ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರರು, ಯಾವುದೇ ಮುನ್ಸೂಚನೆ ನೀಡದೇ ಗೋಧಿ ಬೆಳೆಯನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಿದ್ದರು.

ಇದರಿಂದ ಆಕ್ರೋಶಗೊಂಡ ರೈತರು, ಜೆಸಿಬಿ ತಡೆದು ಪ್ರತಿಭಟನೆ ನಡೆಸಿದರು. ಬಿಟಿಡಿಎ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ
ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಈ ವೇಳೆ ಬಿಟಿಡಿಎ ಕಾರ್ಯಪಾಲಕ ಎಂಜಿನಿಯರ್‌ ವಿಜಯಕುಮಾರ ಹೆಬ್ಬಳ್ಳಿ ನೇತೃತ್ವದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರೈತರ
ಮನವೊಲಿಸುವ ಪ್ರಯತ್ನ ಮಾಡಿದರು. ಕಳೆದ ಐದಾರು ವರ್ಷಗಳ ಹಿಂದೆಯೇ ನಿಮಗೆ ಪರಿಹಾರ ನೀಡಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ.

Advertisement

ನವನಗರ ಯೂನಿಟ್‌-3 ನಿರ್ಮಾಣಕ್ಕೆ ಟೆಂಡರ್‌ ಕೂಡ ಕರೆದಿದ್ದು, ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ಈ ಕಾರ್ಯಕ್ಕೆ ಅಡ್ಡಿಪಡಿಸಬೇಡಿ. ದಯವಿಟ್ಟು ಕಾಮಗಾರಿ ಕೈಗೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ರೈತ ಪ್ರಮುಖರು ಮಾತನಾಡಿ, ನಮಗೆ ಯೋಗ್ಯ ಪರಿಹಾರ ಸಿಕ್ಕಿಲ್ಲ. ಅಲ್ಲದೇ ನಮ್ಮ ಉಳಿದ ಭೂಮಿಯ ಪಹಣಿಯಲ್ಲಿ ಬಿಟಿಡಿಎ ಹೆಸರು ದಾಖಲಿಸಲಾಗಿದೆ. ಇದರಿಂದ ನಾವು ಸಾಲ ಪಡೆಯಲು ಆಗುತ್ತಿಲ್ಲ. ಬೇರೆಯವರಿಗೆ ಮಾರಾಟ ಮಾಡಲೂ ಆಗುತ್ತಿಲ್ಲ. ಬರದಲ್ಲೂ ಒಂದಷ್ಟು ಬೆಳೆ ಬೆಳೆದಿದ್ದು, ಅದನ್ನು ನಾಶಪಡಿಸಿದರೆ ರೈತರಿಗೆ ಹಾನಿಯಾಗುವುದಿಲ್ಲವೋ, ರೈತರ ಬಗ್ಗೆ
ಗುತ್ತಿಗೆದಾರರಿಗೆ ಕನಿಕರವೇ ಇಲ್ಲವೇ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪಹಣಿ ಪತ್ರದಲ್ಲಿರುವ ಸಮಸ್ಯೆ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಗೆಹರಿಸೋಣ. ಆದರೆ, ಕಾಮಗಾರಿಗೆ ತೊಂದರೆ ಕೊಡಬೇಡಿ ಎಂದು ಕೋರಿದರು. ಈ ವೇಳೆ ರೈತರು-ಅಧಿಕಾರಿಗಳ ಮಧ್ಯೆ ವಾಗ್ವಾದವೂ ನಡೆಯಿತು. ಬೆಳೆ ನೆಲಸಮಗೊಳಿಸಿದ್ದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ನೀಡಿದ ಭರವಸೆ ಬಳಿಕ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next