ಬಾಗಲಕೋಟೆ: ತಮ್ಮ ರಾಜಕೀಯ ಜೀವನದಲ್ಲಿ ಕಳೆದ 18 ವರ್ಷಗಳಿಂದ ಒಂದು ರೀತಿಯ ವನವಾಸ ಅನುಭವಿಸುತ್ತಿದ್ದ ಪಿ.ಎಚ್. ಪೂಜಾರ ಅವರು, ಇದೀಗ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ವನವಾಸದಿಂದ ಹೊರ ಬಂದಿದ್ದಾರೆ ಎಂಬ ಮಾತು ಅವರ ಬೆಂಬಲಿಗರಿಂದ ಕೇಳಿ ಬಂದಿದೆ.
ಹೌದು, ಎರಡು ಬಾರಿ ಬಾಗಲಕೋಟೆ ಶಾಸಕರಾಗಿದ್ದ ಪೂಜಾರ ಅವರು, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿದ ಹಿರಿಯರಲ್ಲಿ ಮೊದಲಿಗರೆಂದರೆ ತಪ್ಪಲ್ಲ. ಒಂದು ಬಾರಿ ಉಪ ಚುನಾವಣೆ ಹಾಗೂ 1999ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಪೂಜಾರ ಅವರು, 2004ರಲ್ಲಿ ಟಿಕೆಟ್ ತಪ್ಪಿತ್ತು. ಆಗ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು.
ಮುಂದೆ 2008ರಲ್ಲಿ ಜೆಡಿಎಸ್ ಅಭ್ಯರ್ಥಿಯೂ ಆಗಿದ್ದರು. ಆಗಲೂ ಜಯ ಸಿಗಲಿಲ್ಲ. ಕಟ್ಟಾ ಬಿಜೆಪಿಗರಾಗಿದ್ದ ಅವರನ್ನು ಮರಳಿ ಪಕ್ಷಕ್ಕೆ ಕರೆ ತರುವ ಪ್ರಯತ್ನ ನಡೆದಿತ್ತಾದರೂ ಈಡೇರಲಿಲ್ಲ. ಮುಂದೆ 2013ರ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನದ ಭರವಸೆ ಸಿಕ್ಕಿತ್ತಾದರೂ ಐದು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಯಾವುದೇ ಸ್ಥಾನಮಾನ ಕೊಡಲಿಲ್ಲ. ಹೀಗಾಗಿ ಪೂಜಾರ ಅವರಷ್ಟೇ ಅಲ್ಲ ಅವರ ಬೆಂಬಲಿಗರು ತೀವ್ರ ಬೇಸರಗೊಂಡಿದ್ದರು.
ಅದೇ ವೇಳೆಗೆ 2018ರ ಚುನಾವಣೆ ವೇಳೆಗೆ ಮೂಲ ಬಿಜೆಪಿಗರನ್ನು ಪುನಃ ಪಕ್ಷಕ್ಕೆ ಕರೆ ತರುವ ಪ್ರಯತ್ನ ರಾಷ್ಟ್ರ ಮಟ್ಟದಲ್ಲಿಯೇ ನಡೆಯಿತು. ಆಗ ಬಾಗಲಕೋಟೆಯ ಅಭ್ಯರ್ಥಿಯೂ ಆಗಿದ್ದ ಶಾಸಕ ಡಾ|ವೀರಣ್ಣ ಚರಂತಿಮಠ ಅವರು ಸ್ವತಃ ಪೂಜಾರ ಅವರ ನಿವಾಸಕ್ಕೆ ತೆರಳಿ, ಪಕ್ಷಕ್ಕೆ ಆಹ್ವಾನ ನೀಡಿದ್ದರು. ರಾಜ್ಯಮಟ್ಟದಲ್ಲೂ ಬಿ.ಎಸ್. ಯಡಿಯೂರಪ್ಪ ಸಹಿತ ಹಲವರು ಪೂಜಾರ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.
ಇದಾದ ಬಳಿಕ ಪ್ರಸ್ತುತ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಯಸಿದ್ದರು. ಎರಡೂ ಜಿಲ್ಲೆಯ ಶಾಸಕರು, ಸಂಸದರು ಹಾಗೂ ಪಕ್ಷದ ಹಿರಿಯರು, ಪೂಜಾರ ಅವರನ್ನು ಒಮ್ಮತದ ಅಭ್ಯರ್ಥಿ ಎಂದು ಆಯ್ಕೆ ಮಾಡಿದರು. ಪಕ್ಷ ಅದನ್ನು ಅಧಿಕೃತವಾಗಿ ಘೋಷಣೆ ಕೂಡ ಮಾಡಿತು. ಎರಡು ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಒಟ್ಟು ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಸಹಿತ ತ್ರಿಕೋನ ಸ್ಪರ್ಧೆ ಕಣದಲ್ಲಿತ್ತು.
ಕಾಂಗ್ರೆಸ್‌ನ ಸುನೀಲಗೌಡ ಪಾಟೀಲ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಜಯಶಾಲಿಯಾದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳಲ್ಲಿ ಪೂಜಾರ ಗೆಲುವು ಕಂಡರು. ಆ ಮೂಲಕ ಕಳೆದ 2004ರಿಂದ ರಾಜಕೀಯ ವನವಾಸ ಅನುಭವಿಸುತ್ತಿದ್ದ ಪೂಜಾರ ಅವರು, ಮತ್ತೆ ರಾಜಕೀಯ ಮುನ್ನೆಲೆಗೆ ಬಂದಿದ್ದಾರೆ.
ಎರಡೂ ಜಿಲ್ಲೆಯ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಅಲ್ಲದೇ ಎರಡೂ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರತಿಯೊಬ್ಬರೂ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಈ ಗೆಲುವು ಪಕ್ಷದ ಗೆಲುವು. ನನ್ನ ಅಧಿಕಾರ ಅವಧಿಯಲ್ಲಿ ಗ್ರಾ.ಪಂ. ಬಲಪಡಿಸುವ ಜತೆಗೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ.
ಪಿ.ಎಚ್. ಪೂಜಾರ, ವಿಧಾನಪರಿಷತ್ ನೂತನ ಸದಸ್ಯ