ಬಾಗಲಕೋಟೆ: ವಿದ್ಯುತ್ ಅಭಾವವನ್ನು ತಪ್ಪಿಸುವ ನಿಟ್ಟಿನಲ್ಲಿ ಕೇವಲ ಒಂದುವರೆ ವರ್ಷದಲ್ಲಿ 156 ಉಪವಿದ್ಯುತ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.
ಬೆನಕಟ್ಟಿ ಗ್ರಾಮದಲ್ಲಿ ಶುಕ್ರವಾರ 110-11 ಕೆವಿ ವಿದ್ಯುತ್ ಉಪ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ ಬಂದ ಮೇಲೆ ಕೇವಲ 127 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಲ್ಲಿ 156 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರಕಾರ ಗುಣಮಟ್ಟದ ವಿದ್ಯುತ್ ನೀಡಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಬೇರೆಯವರಿಗೂ ವಿದ್ಯುತ್ ನೀಡಲು ಶಸಕ್ತವಾಗಿದೆ ಎಂದರು.
ಬೆನಕಟ್ಟಿ ಗ್ರಾಮದಲ್ಲಿ 9.56 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ 110/11 ಕೆವಿ ವಿದ್ಯುತ್ ಉಪ ಸ್ಟೇಷನ್‌ಗೆ ಚಾಲನೆ ನೀಡಲಾಗಿದ್ದು, ಇದರಿಂದ ಬೆನಕಟ್ಟಿ ಸುತ್ತಮುತ್ತಲಿನ ಗ್ರಾಮಗಳಾದ ಶಿರೂರ, ಮನ್ನಿಕಟ್ಟಿ, ಕಿರಸೂರ, ಭಗವತಿ, ಹಳ್ಳೂರ, ಬೇವೂರ, ಬೈರಮಟ್ಟಿ, ನಾಗಸಂಪಿಗೆ, ಚೌಡಾಪೂರಗಳಿಗೆ ನಿರಂತರ ಗುಣಮಟ್ಟದ ವಿದ್ಯುತ್ ಪಡೆಯುವಂತಾಗಿದೆ. ಇದರ ಸದುಪಯೋಗ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಹಿಂದೆ ರಾತ್ರಿಯಾದರೆ ಸಾಕು ವಿದ್ಯುತ್ ಕಟ್ ಆಗುತ್ತಿತ್ತು. ಈ ಸ್ಟೇಷನ್‌ದಿಂದ ಬೇಸಿಗೆ ಮತ್ತು ಮಳೆಗಾಲದಲ್ಲಿಯೂ ವಿದ್ಯುತ್ ನಿರಂತರ ಇರಲಿದೆ ಎಂದರು. ನಿರಂತರ ಜ್ಯೋತಿ ಬಂದಾಗಿನಿಂದ ಜನರಿಗೆ ಅನುಕೂಲವಾಗಿದೆ. ಬರುವ ಮಾರ್ಚ 23ರಂದು ಸುತಗುಂಡಾರದಲ್ಲಿಯೂ ಸಹ 110 ಕೆವಿ ವಿದ್ಯುತ್ ಸ್ಟೇಷನ್‌ಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ರೋಷನ್, ಜಿ.ಪಂ ಸಿಇಒ ಟಿ.ಭೂಬಾಲನ್, ಹೆಸ್ಕಾಂ ಮುಖ್ಯ ಎಂಜಿನಿಯರ್ ಹಿರೇಮಠ, ಗ್ರಾಮ ಪಂಚಾಯತ ಅಧ್ಯಕ್ಷ ವಿ.ಪಿ.ಯಡಹಳ್ಳಿ ಮುಂತಾದವರು ಉಪಸ್ಥಿತರಿದ್ದರು.