Advertisement

ರೋಗಿಯ ಹಣವಲ್ಲ; ಸಾರ್ಥಕ ಸೇವೆ ಮುಖ್ಯ

01:15 PM Feb 06, 2020 | Naveen |

ಬಾಗಲಕೋಟೆ: ಯಾವುದೇ ಮನುಷ್ಯ ಅನಾರೋಗ್ಯಕ್ಕೆ ಒಳಗಾದರೆ ದೇವರು ಅಥವಾ ಸಂಬಂಧಿಕರನ್ನು ನೆನೆಯುವುದಿಲ್ಲ. ಬದಲಾಗಿ ವೈದ್ಯರನ್ನು ಸ್ಮರಿಸಿಕೊಳ್ಳುತ್ತಾರೆ. ರೋಗಿಯ ಪಾಲಿಗೆ ವೈದ್ಯರು ದೇವರಾದರೆ, ವೈದ್ಯರು ರೋಗಿಯನ್ನು ದೇವರ ಸ್ವರೂಪದಲ್ಲಿ ಕಾಣಬೇಕು. ರೋಗಿ ನೀಡುವ ಹಣವೇ ವೈದ್ಯರಿಗೆ ಮುಖ್ಯವಲ್ಲ. ರೋಗಿಯ ಮುಖದಲ್ಲಿ ಮಂದಹಾಸ ಕಾಣುವಂತಹ ಸಾರ್ಥಕ ಸೇವೆ ವೈದ್ಯರು ಮಾಡಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ನವನಗರದ ಬಿವಿವಿ ಸಂಘದ ಎಸ್‌. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿಗೆ ಭಾರತೀಯ ವೈದ್ಯಕೀಯ ಮಂಡಳಿ, 150ರಿಂದ 250 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದ ಪ್ರಯುಕ್ತ ನಡೆದ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನೆ ಕಟ್ಟಲು ಸಾವಿರಾರು ಜನರು ಸಿಗುತ್ತಾರೆ. ಕೆಟ್ಟು ಹೋದ ದೇಹ ದುರಸ್ತಿ ಮಾಡುವ ಜನರು ಸಿಗುವುದು ಅಪರೂಪ. ಅವರೇ ವೈದ್ಯರು. ಮಾನವ ಅನಾರೋಗ್ಯಕ್ಕೆ ಒಳಗಾದಾಗ ದೇವರು, ಕುಟುಂಬಸ್ಥರನ್ನು ಸ್ಮರಿಸಿಕೊಳ್ಳುವುದಿಲ್ಲ. ಮೊದಲು ವೈದ್ಯರನ್ನು ಸ್ಮರಿಸುತ್ತಾನೆ. ವೈದ್ಯರ ಮನಸ್ಸಿನಲ್ಲಿ ಆರೋಗ್ಯವಂತ ಜಗತ್ತು ನಿರ್ಮಾಣವಾಗಬೇಕು ಎಂದು ತಿಳಿಸಿದರು.

ವೈದ್ಯರಿಗೆ ಹಣವೇ ಮುಖ್ಯವಾಗಬಾರದು. ರೋಗಿ ನೀಡುವ ಹಣ ಕೊನೆವರೆಗೂ ಉಳಿಯಲ್ಲ. ಆತನ ಮುಖದಲ್ಲಿ ಕಾಣುವ ಮಂದಹಾಸ, ವೈದ್ಯರಿಗೆ ಆತ್ಮ ತೃಪ್ತಿ ನೀಡುತ್ತದೆ. ವೈದ್ಯರು ಭಿಕ್ಷಾಟನೆ ಮಾಡುತ್ತಿಲ್ಲ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು. ರೋಗಿಯ ಹೃದಯ ಗೆಲ್ಲಬೇಕು. ರೋಗ ಗುಣಪಡಿಸುವ ಪವಿತ್ರ ಕಾರ್ಯದ ಮಹತ್ವ ಅರಿಯಬೇಕು. ವೈದ್ಯರಿಗೆ ರೋಗ ಗುಣಮುಖ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಇದು ನಿಜವಾದ ಸೌಭಾಗ್ಯ, ಸಂಪತ್ತು ಎಂದು ಹೇಳಿದರು.

ವೈದ್ಯರನ್ನು ಸಮಾಜ ದೇವರಂತೆ ಕಾಣುತ್ತದೆ. ವೈದ್ಯರಾಗಿ, ನೂರಾರು ಜನರ ಪ್ರಾಣ ಉಳಿಸುವ ಯೋಗ ಎಲ್ಲರಿಗೂ ದೊರೆಯುವುದಿಲ್ಲ. ವೈದ್ಯರು, ತಮಗೆ ಸಿಕ್ಕ ಇಂತಹ ಸೌಭಾಗ್ಯ ಜನರ ಸೇವೆಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿ, ವೈದ್ಯರು ಹಣದ ವ್ಯಾಮೋಹದಿಂದ ದೂರಾಗಬೇಕು. ಉತ್ತಮ ಸೇವೆ, ಪ್ರತಿಯೊಬ್ಬ ವೈದ್ಯರ ಸಂಕಲ್ಪವಾಗಬೇಕು ಎಂದರು.

ಬಿವಿವಿ ಸಂಘದಿಂದ ಹೋಮಿಯೋಪಥಿ, ಫಿಜಿಯೋಥೆರಪಿ ಕಾಲೇಜು ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ವೈದ್ಯಕೀಯ ಸೇವೆ ವಿರಳ ಎಂಬ ಮಾತನ್ನು ದೂರ ಮಾಡುವ ನಿಟ್ಟಿನಲ್ಲಿ ಬಿವಿವಿ ಸಂಘದ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಉಚಿತ ಚಿಕಿತ್ಸೆ: ಬಾಗಲಕೋಟೆಯಲ್ಲಿ ಬಿವಿವಿ ಸಂಘದಿಂದ ವೈದ್ಯಕೀಯ ಕಾಲೇಜು ಆರಂಭಿಸುವ ಕನಸು ಬಹಳ ದಿನಗಳಿಂದ ಇತ್ತು. 2002ರಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಾಗ ಸಂಘದ ಖಾತೆಯಲ್ಲಿ ಕೇವಲ 1 ಲಕ್ಷ ರೂ. ಕೂಡಾ ಇರಲಿಲ್ಲ. 16 ವರ್ಷದಲ್ಲಿ 250 ವಿದ್ಯಾರ್ಥಿಗಳ ಪ್ರವೇಶಾತಿ ವರೆಗೆ ಕಾಲೇಜು ಬೆಳೆದಿದೆ. 1100 ಹಾಸಿಗೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಮುಂದಿನ ಯುಗಾದಿ ಹಬ್ಬದಿಂದ ನಿರಂತರವಾಗಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಘೋಷಿಸಿದರು.

ವೈದ್ಯಕೀಯ ಕಾಲೇಜಿನ ವೈದ್ಯರು, ಸಿಬ್ಬಂದಿ ವರ್ಗದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಆಡಳಿತ ಅಧಿಕಾರಿ ಎನ್‌.ಜಿ. ಕರೂರ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ|ಅಶೋಕ ಮಲ್ಲಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next