Advertisement

ಶ್ರಮಬಿಂದು ಸಾಗರ ತುಂಬಿಸಲು ರೈತರ ಶ್ರಮದಾನ

12:58 PM Mar 05, 2020 | Naveen |

ಬಾಗಲಕೋಟೆ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಕೊಳ್ಳುವ ಜತೆಗೆ ಕೃಷಿಗೂ ಅನುಕೂಲ ಕಲ್ಪಿಸಲು ಕೃಷ್ಣೆಯ ಒಡಲಿನ ರೈತರು ಮತ್ತೊಂದು ಶ್ರಮದಾನ ನಡೆಸುತ್ತಿದ್ದಾರೆ. ಒಂದು ತಿಂಗಳಲ್ಲಿ ಬರೋಬ್ಬರಿ 1.50 ಟಿಎಂಸಿ ಅಡಿ ನೀರು ಸಂಗ್ರಹಿಸಿ, ದಾಖಲೆ ಬರೆಯಲು ಸಜ್ಜಾಗಿದ್ದಾರೆ.

Advertisement

ನೀರು-ನೀರಾವರಿಗೆ ಆದ್ಯತೆ ನೀಡಿ, ರೈತರನ್ನು ಒಗ್ಗೂಡಿಸಿ ಬ್ಯಾರೇಜ್‌ ಕಟ್ಟಿದ ದಿ|ಸಿದ್ದು ನ್ಯಾಮಗೌಡರ ಪ್ರೇರಣೆಯ ಫಲವಾಗಿ ರೈತರು ಪ್ರತಿವರ್ಷ ಶ್ರಮದಾನ, ಹಣದಾನದೊಂದಿಗೆ ನೀರಿನಲ್ಲಿ ಸ್ವಾವಲಂಬನೆಯಾಗಿದ್ದಾರೆ. ಹಿನ್ನೀರನ್ನು ಎತ್ತಿ, ಬ್ಯಾರೇಜ್‌ ತುಂಬಿಸಿಕೊಂಡು ಬೇಸಿಗೆಯ ಬವಣೆ ನೀಗಿಸಿಕೊಳ್ಳಲಿದ್ದಾರೆ.

1989ರಲ್ಲಿ ಸಿದ್ದು ನ್ಯಾಮಗೌಡರ ನೇತೃತ್ವದಲ್ಲಿ ಕೃಷ್ಣಾ ನದಿಗೆ ಚಿಕ್ಕಪಡಸಲಗಿ ಬಳಿ ನಿರ್ಮಿಸಿದ್ದ ಬ್ಯಾರೇಜ್‌ ದೇಶಕ್ಕೆ ಮಾದರಿಯಾಗಿದೆ. ಈ ಬ್ಯಾರೇಜ್‌ ಒಟ್ಟು 430 ಮೀಟರ್‌ ಉದ್ದ, 8 ಮೀಟರ್‌ ಎತ್ತರ, 2.8 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿತ್ತು. ಇದರಿಂದ ನೀರಾವರಿ ಕ್ಷೇತ್ರ, ರೈತರ ಪಂಪ್‌ಸೆಟ್‌, ಕೃಷಿ ಬೆಳೆಯ ಪ್ರಮಾಣ ಎಲ್ಲವೂ ದ್ವಿಗುಣಗೊಂಡಿದೆ. ಹೀಗಾಗಿ ಮತ್ತೆ 2013-14ರಲ್ಲಿ ಅದೇ ಬ್ಯಾರೇಜ್‌ನ್ನು 1.5 ಮೀಟರ್‌ ಎತ್ತರಿಸಿದ್ದು, ಇದಕ್ಕಾಗಿ ರೈತರೇ 1.80 ಕೋಟಿ ಹಣ ಸಂಗ್ರಹಿಸಿದ್ದರು. ಬಳಿಕ ಸರ್ಕಾರ 10 ಕೋಟಿ ಅನುದಾನ ಬ್ಯಾರೇಜ್‌ ಎತ್ತರಿಸಲು ನೀಡಿದ್ದು, ಬ್ಯಾರೇಜ್‌ ಎತ್ತಿರಿಸುವ ಯೋಜನೆ ಪೂರ್ಣಗೊಂಡು, ಸದ್ಭಳಕೆಯಾಗುತ್ತಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಬಂದ ಪ್ರವಾಹದಿಂದ ಬ್ಯಾರೇಜ್‌ನ ಗೇಟ್‌ಗಳಿಗೆ ಹಾನಿಯಾಗಿದ್ದು, ಅವುಗಳನ್ನು ದುರಸ್ತಿಗೊಳಿಸಿ, 100 ಎಚ್‌ಪಿಯ 25 ವಿದ್ಯುತ್‌ ಪಂಪ್‌ಸೆಟ್‌ಗಳನ್ನು ಸುಧಾರಣೆಗೊಳಿಸಿ, ಇದೀಗ ಮತ್ತೆ ಬ್ಯಾರೇಜ್‌ ತುಂಬಿಸಲು ಅಣಿಯಾಗಿದ್ದಾರೆ. ಇದಕ್ಕೆ ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ, ಕೃಷ್ಣಾ ತೀರದ ರೈತ ಸಂಘದ ಅಧ್ಯಕ್ಷ ರಾಜುಗೌಡ ಪಾಟೀಲ ಸಹಿತ ಹಲವಾರು ಜನರು ಪಕ್ಷಾತೀತ, ಜಾತ್ಯತೀತವಾಗಿ, ರೈತ ಕುಲ ಒಂದೇ ಎಂಬ ಭಾವದೊಂದಿಗೆ ನೀರಿನ ಸದ್ಬಳಕೆಯ ಶ್ರಮದಾನ ಮಾಡುತ್ತಿದ್ದಾರೆ.

ತಿಂಗಳಲ್ಲಿ 1.50 ಟಿಎಂಸಿ ನೀರು ಸಂಗ್ರಹ: ಸಿದ್ದು ನ್ಯಾಮಗೌಡ ಶ್ರಮಬಿಂದು ಸಾಗರ (ಬ್ಯಾರೇಜ್‌)ನಲ್ಲಿ ನೀರು ಕಡಿಮೆಯಾಗಿದ್ದು, ಆಲಮಟ್ಟಿ ಜಲಾಶಯದ ಹಿನ್ನೀರ (ಬ್ಯಾರೇಜ್‌ ಕೆಳ ಭಾಗದ ನೀರು)ನ್ನು ಎತ್ತಿ ಪುನಃ ಬ್ಯಾರೇಜ್‌ ತುಂಬಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇದಕ್ಕಾಗಿ ಜಮಖಂಡಿ, ಅಥಣಿ ತಾಲೂಕಿನ ಸುಮಾರು 1,313ಕ್ಕೂ ಹೆಚ್ಚು ಜನ ರೈತರು, ಸ್ವಯಂ ವಂತಿಗೆ ಸಂಗ್ರಹಿಸಿ, ವಿದ್ಯುತ್‌ ಪಂಪ್‌ಸೆಟ್‌ ಬಿಲ್‌, ಗೇಟ್‌ಗಳ ದುರಸ್ತಿ ಹೀಗೆ ಎಲ್ಲವನ್ನೂ ತಾವೇ ಮಾಡುತ್ತಿದ್ದಾರೆ.

Advertisement

100 ಎಚ್‌ಪಿಯ 25 ಪಂಪ್‌ಸೆಟ್‌ಗಳು ಒಂದು ತಿಂಗಳ ಕಾಲ ನೀರು ಎತ್ತಲಿದ್ದು, ದಿನದ 22 ಗಂಟೆ ಕಾರ್ಯವೂ ನಿರ್ವಹಿಸಲಿವೆ. ಒಟ್ಟು 30 ದಿನಗಳಲ್ಲಿ 1.5 ಟಿಎಂಸಿ ಅಡಿ ನೀರನ್ನು ಬ್ಯಾರೇಜ್‌ಗೆ ತುಂಬಿಸಲಿದ್ದಾರೆ. ಇದರಿಂದ ಬರುವ ಬೇಸಿಗೆಯಲ್ಲಿ ಎರಡು ತಾಲೂಕಿನ ನೂರಾರು ಹಳ್ಳಿಗರಿಗೆ ನೀರಿನ ಬವಣೆ ತಪ್ಪಲಿದೆ. ಮುಖ್ಯವಾಗಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿ ಎಂದು ಬೇಡಿಕೊಳ್ಳುವ ಪ್ರಮೇಯ ತಪ್ಪಲಿದೆ.

ಈ ಕಾರ್ಯಕ್ಕೆ ನಮ್ಮ ತಂದೆ ದಿ.ಸಿದ್ದು ನ್ಯಾಮಗೌಡರೇ ಪ್ರೇರಣೆ. ಅವರ ದೂರದೃಷ್ಟಿಯ ಫಲ ಮತ್ತು ರೈತರ ಸಹಕಾರದಿಂದ ಬ್ಯಾರೇಜ್‌ ನಿರ್ಮಾಣ, ಎತ್ತರಿಸುವ ಕಾರ್ಯ ಹಾಗೂ ಬ್ಯಾರೇಜ್‌ ತುಂಬುವ ಯೋಜನೆ ಅನುಷ್ಠಾನವಾಗಿವೆ. ಅದನ್ನು ನಿರ್ವಹಣೆ ಮಾತ್ರ ಮಾಡುತ್ತಿದ್ದೇವೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಎಲ್ಲ ರೈತರಿಗೆ ಮನವಿ ಮಾಡಿದ್ದು, ಪ್ರತಿಯೊಬ್ಬ ರೈತರು ಶ್ರಮದಾನ ಮೂಲಕ ಕೆಲಸ ಮಾಡುತ್ತಿದ್ದಾರೆ.
ಒಂದು ತಿಂಗಳಲ್ಲಿ 1.50 ಟಿಎಂಸಿ ಅಡಿ ನೀರು ಬ್ಯಾರೇಜ್‌ಗೆ ತುಂಬಿಸಲಾಗುತ್ತದೆ.
ಆನಂದ ನ್ಯಾಮಗೌಡ,
ಜಮಖಂಡಿ ಶಾಸಕ

ಪ್ರವಾಹದಿಂದ ವಿದ್ಯುತ್‌ ಪಂಪ್‌ಸೆಟ್‌, ವಿದ್ಯುತ್‌ ಪೆನಲ್‌ ಸಹಿತ ಬಹಳಷ್ಟು ಹಾನಿಯಾಗಿವೆ. ಅದಕ್ಕಾಗಿಯೇ ಸುಮಾರು 50 ಲಕ್ಷದಷ್ಟು ಖರ್ಚು ಬರುತ್ತಿದ್ದು, ದುರಸ್ತಿ ಕಾರ್ಯ ನಡೆದಿದೆ. ಪ್ರತಿದಿನ ಒಂದೊಂದು ಹಳ್ಳಿಯ ತಲಾ 50ರಿಂದ 100 ಜನ ರೈತರು ಬಂದು ಶ್ರಮದಾನ ಮೂಲಕ ಬ್ಯಾರೇಜ್‌ನ ಗೇಟ್‌ ಅಳವಡಿಕೆ, ಅದರಡಿ ಸಿಲುಕಿದ ಮುಳ್ಳು-ಕಂಟಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಒಂದು ಜೆಸಿಬಿ ಕೂಡ ನಿರಂತರ ಕೆಲಸ ಮಾಡುತ್ತಿದೆ. ಅಥಣಿ ತಾಲೂಕಿನ 7, ಜಮಖಂಡಿ ತಾಲೂಕಿನ 22 ಹಳ್ಳಿಗಳ ರೈತರು, 10 ಎಚ್‌ಪಿ ಪಂಪ್‌ ಸೆಟ್‌ಗೆ ತಲಾ 5 ಸಾವಿರದಂತೆ ವಂತಿಗೆಯನ್ನು ಕೂಡ ನೀಡುತ್ತಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಬ್ಯಾರೇಜ್‌ ತುಂಬುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ.
ರಾಜುಗೌಡ ಪಾಟೀಲ,
ಅಧ್ಯಕ್ಷರು, ಕೃಷ್ಣಾ ತೀರದ ರೈತರ ಸಂಘ

ಎಸ್‌.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next