Advertisement

ಕೋವಿಡ್ ಸೀರಿಯಸ್‌: ಜನರಿಗಿಲ್ಲ ಕಾಮನ್‌ಸೆನ್ಸ್‌!

02:01 PM Apr 15, 2020 | Naveen |

ಬಾಗಲಕೋಟೆ: ಇಲ್ಲಿನ ಹಳೆಯ ನಗರದ ಒಂದೇ ಏರಿಯಾದಲ್ಲಿ ಬರೋಬರಿ 10 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಡೀ ನಗರವೀಗ ಹಾಟ್‌ಸ್ಪಾಟ್‌ ಆಗಿದೆ. ಇದರಿಂದ ಲಾಕ್‌ಡೌನ್‌ ಬಿಗಿಗೊಳಿಸಿದರೂ ಜನರ ಅಗತ್ಯ ಅಲೆದಾಟ ಮಾತ್ರ ನಿಲ್ಲುತ್ತಿಲ್ಲ ಎಂಬ ಅಸಮಾಧಾನ ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.

Advertisement

ನಗರದ ವಾರ್ಡ್‌ ನಂ.4 ಮತ್ತು 14ರ ಪ್ರದೇಶದಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದರ ಮಧ್ಯೆ ಇನ್ನೂ ಹಲವು ವಾರ್ಡ್‌ಗಳಿವೆ. ವಾರ್ಡ್‌ 14ರಲ್ಲಿ ಮೃತ ವೃದ್ಧ ಮತ್ತು ಈವರೆಗೆ ಸೋಂಕು ಕಂಡು ಬಂದ 9 ಜನರ ಮನೆಗಳಿವೆ. 4ರಲ್ಲಿ ವೃದ್ಧನ ದಿನಸಿ ಅಂಗಡಿ ಇದೆ. ಹೀಗಾಗಿ ಎರಡೂ ಏರಿಯಾ ಸೀಲ್‌ ಮಾಡಿ, ಜನರು ಓಡಾದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೂ, ಸಕಾರಣವಿಲ್ಲದೇ ಓಡಾಡುವವರ ಸಂಖ್ಯೆ ಇಳಿಯುತ್ತಿಲ್ಲ. ಲಾಠಿ ಬೀಸಿ, ಬಸ್ಕಿ ಹೊಡೆಸಿದರೂ ಕೆಲವರು ರಸ್ತೆಗಿಳಿಯುತ್ತಲೇ ಇದ್ದಾರೆ.

ಪಿಡಿಒ ಮೇಲೆ ಹಲ್ಲೆ: ಇನ್ನು ಮುಧೋಳ ತಾಲೂಕು ದಾನಹಟ್ಟಿಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲು ಹೋದ ಪಿಡಿಒನ ಮೇಲೆ ಗ್ರಾಮದ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿ, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬಾಗಲಕೋಟೆ ಹಳೆಯ ನಗರದಲ್ಲಿ ನಗರಸಭೆ ಮಾಜಿ ಸದಸ್ಯ ಹಾಗೂ ಅಪರ ಜಿಲ್ಲಾ ಧಿಕಾರಿ ಮಧ್ಯೆ ವಾಗ್ವಾದವೂ ನಡೆದಿದೆ. ಏಕವಚನದಲ್ಲಿ ಮಾತನಾಡಿದರೆಂದು ಎಡಿಸಿ ವಿರುದ್ಧ ನಗರಸಭೆ ಮಾಜಿ ಸದಸ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳೆಲ್ಲ ಕೊರೊನಾದಂತಹ ಸಂದರ್ಭದಲ್ಲಿ ಸರಿಯಾ ಎಂಬ ಕಾಮನ್‌ಸೆನ್ಸ್‌ ಇಲ್ಲದೇ ನಡೆಯುತ್ತಿರುವುದು ವಿಪರ್ಯಾಸ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿಗೆ ನೆರವಾದ ಪತ್ರಕರ್ತರು: ಕಾರಣವಿಲ್ಲದೇ ಕೆಲವರು ಓಡಾಡುತ್ತಿದ್ದರೆ, ಇನ್ನೂ ಕೆಲವರು ಆಸ್ಪತ್ರೆ, ತುರ್ತು ಸಂದರ್ಭದಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ನಗರದ ಖಾಸಗಿ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರು, ವಾಹನ ಸಿಗದೇ ಅಳುತ್ತ, ನಡೆದುಕೊಂಡು ಹೊರಟಿದ್ದನ್ನು ಗಮನಿಸಿದ ನಗರದ ಪತ್ರಕರ್ತರೇ, ಆ ಮಹಿಳೆಯನ್ನು ಊರು ಸೇರಲು ಆ್ಯಂಬುಲೆನ್ಸ್‌ ತರಿಸಿ, ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next