ಬಾಗಲಕೋಟೆ: ಉತ್ತರ ಕರ್ನಾಟಕದ ಬಹುದೊಡ್ಡ ಜಾತ್ರೆ ಎಂದೇ ಕರೆಸಿಕೊಳ್ಳುವ ಬನಶಂಕರಿ ಜಾತ್ರೆ ಸಮೀಪಿಸುತ್ತಿದೆ. ಈ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ನೀರಿನ ಕೊರತೆ, ದೇವಸ್ಥಾನದ ಮುಂದಿನ ಹೊಂಡಕ್ಕೆ ನೀರು ತುಂಬಿಸುವ ಮಹತ್ವದ ಜವಾಬ್ದಾರಿ ಯಾರು ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಬಾದಾಮಿ ಜನರಲ್ಲಿ ಕಾಡುತ್ತಿದೆ.
ಹೌದು, ಕಳೆದ ಮೂರು ವರ್ಷಗಳಿಂದ ಬನಶಂಕರಿ ದೇವಿಯ ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರು, ನೀರಿಲ್ಲದೇ ಸಮಸ್ಯೆ ಅನುಭವಿಸಿದ್ದರು. ಪವಿತ್ರ ಸ್ಥಾನ ಮಾಡಿ, ದೇವಿಯ ದರ್ಶನ ಪಡೆಯಬೇಕೆಂಬ ಭಕ್ತಿ-ಭಾವದಿಂದ ಬಂದಿದ್ದ ಜನರು, ಬನಶಂಕರಿ, ಬಾದಾಮಿ, ಮಹಾಕೂಟ, ಮಲಪ್ರಭಾ ನದಿ ಸುತ್ತ ನೀರು ಹುಡುಕುತ್ತ ತೆರಳುತ್ತಿದ್ದ ದೃಶ್ಯಗಳು ಕಾಣುತ್ತಿದ್ದವು. ಬನಶಂಕರಿ ಜಾತ್ರೆಗೆ ಬಂದವರು, ಮಹಾಕೂಟದಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಬಂದಿತ್ತು.
ಪಕ್ಕದಲ್ಲೇ ನೀರು: ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಕ್ಷೇತ್ರ ಬನಶಂಕರಿ ದೇವಾಲಯದಲ್ಲಿ ದೊಡ್ಡ ಹೊಂಡವಿದೆ. ಇದನ್ನು ಹರಿದ್ರಾತೀರ್ಥ ಎಂದೂ ಕರೆಯಲಾಗುತ್ತದೆ. ಹಿಂದೆ ಇಲ್ಲಿನ ಜಾತ್ರೆಗೆ ಬರುವ ಲಕ್ಷಾಂತರ ಜನರು, ಇದೇ ಹೊಂಡದಲ್ಲಿ ಪವಿತ್ರ ಸ್ಥಾನ ಮಾಡಿ, ದೇವಿಯ ದರ್ಶನಕ್ಕೆ ಹೋಗುತ್ತಿದ್ದರು. ಆದರೆ, ಈ ಹೊಂಡ, ಕಳೆದ 3 ವರ್ಷಗಳಿಂದ ಹನಿ ನೀರಿಲ್ಲದೇ ಬಣಗುಡುತ್ತಿದೆ. ಪಕ್ಕದಲ್ಲೇ ಕೇವಲ 2 ಕಿ.ಮೀ. ಅಂತರದಲ್ಲಿ ಮಲಪ್ರಭಾ ನದಿ ಇದೆ. ಆದರೆ, ಈವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳು, ಈ ಹೊಂಡಕ್ಕೆ ನೀರು ತುಂಬಿಸುವ ಕೆಲಸ ಮಾಡಿಲ್ಲ ಎಂದರೆ, ಅವರೆಲ್ಲರಿಗೆ ಕ್ಷೇತ್ರದ ಬಗ್ಗೆ ಎಷ್ಟೊಂದು ಇಚ್ಛಾಶಕ್ತಿ ಎದೆ ಎಂಬುದು ತೋರಿಸುತ್ತದೆ. 2 ಕಿ.ಮೀ. ಅಂತರದಲ್ಲಿರುವ ನೀರು ತರುವುದು ಕಷ್ಟವೇನಲ್ಲ. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ.
61 ಲಕ್ಷ ಖರ್ಚು: ಬನಶಂಕರಿ ಹೊಂಡಕ್ಕೆ ನೀರು ತುಂಬಿಸುವ ಪ್ರಯತ್ನ ಈಗ ನಡೆಯುತ್ತಿದೆ. ಬನಶಂಕರಿ ಸಮೀಪದ ನಾಗರಾಳ ಗ್ರಾಮದ ಬಳಿ, ಮಲಪ್ರಭಾ ನದಿಯಲ್ಲಿ ಈ ಹಿಂದೆ ಸ್ಥಾಪಿಸಿದ್ದ ಜಾಕ್‌ವೆಲ್ (ಬಾದಾಮಿ ಪಟ್ಟಣಕ್ಕೆ ಕುಡಿಯು ನೀರು ಪೂರೈಕೆ ಯೋಜನೆ)ನಿಂದ ನೀರು ತರಲು ಕಾಮಗಾರಿ ನಡೆದಿದೆ. ಈ ಜಾಕ್‌ವೆಲ್ ಬಾದಾಮಿ ಜನತೆಗೆ ನೀರು ಕೊಡುವ ಉದ್ದೇಶದಿಂದ ನಿರ್ಮಿಸಿ, ಬಾದಾಮಿ ವರೆಗೆ ಪೈಪ್‌ಲೈನ್ ಅಳವಡಿಸಿದರೂ, ನೀರು ಬಂದಿದ್ದು ಮಾತ್ರ ಕೆಲವೇ ಕೆಲದಿನ ಮಾತ್ರ. ಹೀಗಾಗಿ ನಿರುಪಯುಕ್ತವಾಗಿದ್ದ ನಾಗರಾಳ ಬಳಿಯ ಜಾಕ್‌ವೆಲ್, ಪುನಃ ಸದ್ಬಳಕೆ ಮಾಡಿಕೊಂಡು, ಅದೇ ಪೈಪ್‌ಲೈನ್ ಮೂಲಕ ಬನಶಂಕರಿ ಹೊಂಡಕ್ಕೆ ನೀರು ಹರಿಸಲು ಎಂಎಲ್‌ಬಿಸಿ ಯೋಜನೆಯಿಂದ ನಡೆಯುತ್ತಿದೆ. ಅದಕ್ಕಾಗಿ 61 ಲಕ್ಷ ರೂ. ಪ್ರತ್ಯೇಕವಾಗಿ ಖರ್ಚು ಮಾಡಲಾಗುತ್ತಿದೆ.
ವಿಶೇಷ ವರದಿ