Advertisement
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯೆಂದು ಕಂಡು ಬಂದರೂ, ನ. 8ರಂದು ನಡೆದ ಘಟನೆ, ಜಾಗದ ವಿಚಾರಕ್ಕಾಗಿನ ಕಿರುಕುಳ ಈ ಸಾವಿಗೆ ದುಷ್ಪೇರಣೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ತಿಳಿದು ಬಂದಿಲ್ಲ.
Related Articles
Advertisement
ನ.9 ರ ಬೆಳಗ್ಗೆ 8 ಗಂಟೆಗೆ ಮೃತದೇಹ ಪತ್ತೆಯಾದ ಬಳಿಕ ರೈಲ್ವೇ ಟ್ರ್ಯಾಕ್‌ವೆುನ್ ಗಣೇಶ ಕೆ. ಅವರು ನೀಡಿದ ದೂರಿನಂತೆ ಮೊದಲಿಗೆ ಅಪರಿಚಿತ ಮೃತದೇಹವೆಂದು ಗುರುತಿಸಿ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೇ ಹಳಿಗೆ ದೇಹವನ್ನು ಅಡ್ಡವಿಟ್ಟು ಮಲಗಿದ್ದು, ಯಾವುದೋ ರೈಲು ಹರಿದು ಸಾವನ್ನಪ್ಪಿರುವ ಸಾಧ್ಯತೆಯಿದೆ ಎನ್ನುವದಾಗಿ ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗುರುತು ಖಚಿತಪಡಿಸಿದ ಪುತ್ರಿ:
ಕುಂದಾಪುರದ ತಲ್ಲೂರು – ಹಟ್ಟಿಯಂಗಡಿ ಸಮೀಪ ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಸುದ್ದಿ ತಿಳಿದ ಡಾ| ಕೃಷ್ಣಮೂರ್ತಿ ಅವರ ಮನೆಯವರು, ನ.10 ರಂದು ಮಧ್ಯಾಹ್ನದ ವೇಳೆಗೆ ಕುಂದಾಪುರಕ್ಕೆ ಆಗಮಿಸಿದ್ದರು. ಅವರ ದೇಹದ ಮೇಲಿದ್ದ ಜನಿವಾರ, ಹಿಂಬದಿ ದೇಹದಲ್ಲಿದ್ದ ಕಪ್ಪು ಮಚ್ಚೆ, ಒಳ ಉಡುಪುಗಳನ್ನು ಗುರುತಿಸಿ, ಇದು ಕೃಷ್ಣಮೂರ್ತಿ ಅವರದೇ ಮೃತದೇಹವೆಂದು ಗುರುತಿಸಲಾಗಿದೆ. ಸಹೋದರ ಡಾ| ರಾಮ್‌ಮೋಹನ್ ಪುತ್ತೂರು, ಭಾವ ಮನೋಹರ್, ಸ್ನೇಹಿತ ಉದಯ್ ಕುಮಾರ್, ಆಸ್ಪತ್ರೆ ಕಂಪೌಂಡರ್ ಸಿ.ಎಚ್. ಪರಮೇಶ್ವರ ಭಟ್, ಬದಿಯಡ್ಕ ಠಾಣೆಯ ಮೂವರು ಪೊಲೀಸ್ ಸಿಬಂದಿ ಆಗಮಿಸಿ, ಬಹುತೇಕ ಇದು ಅವರದೇ ಮೃತದೇಹವೆಂದು ಖಚಿತಪಡಿಸಿದ್ದರು. ಆ ಬಳಿಕ ನ.10 ರ ಸಂಜೆ 8 ಗಂಟೆಯ ವೇಳೆಗೆ ಅವರ ಪುತ್ರಿ ಆಗಮಿಸಿ ತಂದೆಯದ್ದೇ ಮೃತದೇಹ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಘಟನೆ ಹಿನ್ನೆಲೆ :
ನ.8 ರಂದು ಬೆಳಗ್ಗೆ 9 ಸುಮಾರಿಗೆ ಡಾ| ಕೃಷ್ಣಮೂರ್ತಿ ಅವರು ಆಸ್ಪತ್ರೆಗೆ ತೆರಳಿ, ಎಂದಿನಂತೆ ಕೆಲಸ ಆರಂಭಿಸಿದ್ದರು. ಬೆಳಗ್ಗೆ 11 ಗಂಟೆಯ ಸುಮಾರಿಗೆ ಕ್ಲಿನಿಕ್‌ಗೆ ತಪಾಸಣೆಗೆಂದು ಬಂದ ಮುಸ್ಲಿಂ ಯುವತಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ವೈದ್ಯರ ಮೇಲೆ ಗುಂಪೊಂದು ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಅಲ್ಲಿದ್ದವರು ತಡೆದಿದ್ದಾರೆ. ಇದಲ್ಲದೆ ನಿಮ್ಮ ವಿರುದ್ಧ ಕೇಸು ದಾಖಲಿಸುವುದಾಗಿಯೂ ಆ ಗುಂಪು ಬೆದರಿಕೆ ಹಾಕಿರುವುದಾಗಿ ಡಾ| ಕೃಷ್ಣಮೂರ್ತಿ ಅವರ ಮನೆಯವರು ಬದಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಾ| ಕೃಷ್ಣಮೂರ್ತಿ ಅವರ ವಿರುದ್ಧ ಅನುಚಿತ ವರ್ತನೆ ಎಸಗಿರುವುದಾಗಿ ಆ ಗುಂಪಿನವರು ಬದಿಯಡ್ಕ ಠಾಣೆಗೆ ದೂರು ನೀಡಿ, ಅದರಂತೆ ಕೇಸು ದಾಖಲಾಗಿದೆ. ಇವರ ನಿಕಟವರ್ತಿಯವರು ಹೇಳುವ ಪ್ರಕಾರ ಈ ಘಟನೆಯಿಂದ ಕುಗ್ಗಿಹೋದ ವೈದ್ಯರು, ಬೇಸತ್ತು ಮಧ್ಯಾಹ್ನ 12 ಗಂಟೆಗೆ ಅಲ್ಲಿಂದ ಬೈಕ್‌ನಲ್ಲಿ ಹೊರಟಿದ್ದಾರೆ. ಮಧ್ಯಾಹ್ನ ಊಟಕ್ಕೆ ಹೊರಟಿರಬಹುದು ಎಂದು ಕಂಪೌಂಡರ್ ಹಾಗೂ ಮತ್ತಿತರರು ಭಾವಿಸಿದ್ದರು. ಆದರೆ ಮೊಬೈಲನ್ನು ಆಸ್ಪತ್ರೆಯಲ್ಲಿಯೇ ಬಿಟ್ಟಿದ್ದು, ಬೈಕ್ ಬದಿಯಡ್ಕ ಪೇಟೆಯಲ್ಲಿಟ್ಟು ಆ ಬಳಿಕ ನಾಪತ್ತೆಯಾಗಿದ್ದರು.
ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕಂಡ್ಲೂರು ಠಾಣಾಧಿಕಾರಿ ಪವನ್ ನಾಯಕ್, ಸಿಬಂದಿ, ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ.10 ರ ಸಂಜೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐ ಪವನ್ ನೇತೃತ್ವದ ಪೊಲೀಸರ ತಂಡ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಇನ್ನು ಯಾವುದಾದರೂ ಸುಳಿವು, ಗುರುತು, ವಸ್ತುಗಳು ಸಿಗಬಹುದೇ ಅನ್ನುವುದರ ಬಗ್ಗೆ ಹುಡುಕಾಟ ನಡೆಸಿದರು.
ಹತ್ತಾರು ಅನುಮಾನ :
ಮೇಲ್ನೋಟಕ್ಕೆ ಇದು ಆತ್ಮಹತ್ಯೆಯೆಂದು ಕಂಡು ಬಂದರೂ, ಕೆಲವೊಂದು ಅನುಮಾನಗಳು ಹುಟ್ಟಿಕೊಂಡಿವೆ. ಸಾಯಲೇಬೇಕೆಂದು ನಿರ್ಧಾರ ಮಾಡಿದ್ದರೂ ಸಹ ಬದಿಯಡ್ಕದಿಂದ ಸುಮಾರು 180-190 ಕಿ.ಮೀ. ದೂರದ ಕುಂದಾಪುರದಲ್ಲಿಯೇ ಸಾಯಬೇಕು ಅಂತ ಯಾಕೆ ಅನ್ನುವುದು? ಕುಂದಾಪುರಕ್ಕೆ ಅವರು ರೈಲು ಅಥವಾ ಬಸ್ ಅಥವಾ ಇನ್ನು ಯಾವ ವಾಹನಗಳಲ್ಲಿ ಬಂದಿರಬಹುದು ? ಅದಕ್ಕೆ ಯಾವುದೇ ದಾಖಲೆಯಿಲ್ಲ? ರೈಲಿನಲ್ಲಿ ಬಂದಿದ್ದರೂ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು 10-12 ಕಿ.ಮೀ. ದೂರವಿದೆ. ಅಲ್ಲಿಯವರೆಗೆ ಹಳಿಯಲ್ಲಿಯೇ ನಡೆದುಕೊಂಡೇ ಬಂದರೆ ? ಅದಲ್ಲದೆ ರಾತ್ರಿ ವೇಳೆ ಮೊಬೈಲ್ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ? ಒಂದು ಬಸ್ಸಿನಲ್ಲಿ ಬಂದಿದ್ದರೂ, ತಲ್ಲೂರಲ್ಲಿ ಇಳಿದು ಅಲ್ಲಿಂದ 2-3 ಕಿ.ಮೀ. ದೂರದವರೆಗೆ ನಡೆದುಕೊಂಡು ಈ ಸ್ಥಳಕ್ಕೆ ಬಂದಿರಬಹುದೇ? ಹೀಗೆ ಕೆಲವೊಂದು ಸಂಶಯ ಕಂಡು ಬಂದಿದೆ.
ಜಾಗದ ವಿಚಾರ ಕಾರಣವೇ? :
ಮನೆಯ ಕೆಲವರು ಹೇಳುವ ಮೂಲಗಳ ಪ್ರಕಾರ ನ.8 ರಂದು ನಡೆದ ಘಟನೆಗೂ ಮೊದಲೇ ಡಾ| ಕೃಷ್ಣಮೂರ್ತಿ ಅವರ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ಕೆಲವರಿಂದ ನಿರಂತರ ಕಿರುಕುಳ, ಬೆದರಿಕೆ ಬರುತ್ತಿದ್ದು, ಜಾಗದ ಮಾರಾಟಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಜಾಗದ ಖರೀದಿಗಾಗಿ ಬೇಡಿಕೆ ಇಡುತ್ತಿದ್ದರು. ಈ ವಿಚಾರದಿಂದಲೂ ವೈದ್ಯರು ನೊಂದಿದ್ದರೇ? ಅನ್ನುವ ಪ್ರಶ್ನೆ ಈಗ ಮೂಡಿದೆ. ಒಟ್ಟಿನಲ್ಲಿ ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರಗೆ ಬರಬಹುದು.