ನವದೆಹಲಿ: ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ರಾಕೆಟ್ ವಿಕ್ರಂ-ಎಸ್ ಉಡಾವಣೆ ಮೂರು ದಿನಗಳ ಕಾಲ ಮುಂದೂಡಿಕೆಯಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ ಉಡಾವಣೆ ದಿನಾಂಕವನ್ನು ನ.15ರ ಬದಲಿಗೆ 18ರಂದು ನಡೆಸುವುದಾಗಿ ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ ಹೇಳಿದೆ.
ಮಳೆ ಸೇರಿದಂತೆ ಹವಾಮಾನವು ಪ್ರತಿಕೂಲವಾಗಿರುವ ಕಾರಣ ನ.15-19ರ ಅವಧಿಯಲ್ಲಿ ಉಡಾವಣೆ ಮಾಡಲು ಯೋಜಿಸಿದ್ದೇವೆ. ಬಹುತೇಕ ನ.18ರಂದು ಬೆಳಗ್ಗೆ 11.30ಕ್ಕೆ ಶ್ರೀಹರಿಕೋಟಾದಿಂದ ವಿಕ್ರಂ-ಎಸ್ ನಭಕ್ಕೆ ಚಿಮ್ಮಲಿದೆ. “ಪ್ರಾರಂಭ್’ ಎಂಬ ಹೆಸರಿನ ಈ ಯೋಜನೆಯಡಿ ವಿಕ್ರಂ-ಎಸ್ ರಾಕೆಟ್ ಭಾರತದ ಎರಡು ಮತ್ತು ವಿದೇಶದ ಒಂದು ಪೇಲೋಡ್ ಅನ್ನು ಹೊತ್ತೂಯ್ಯಲಿದೆ.
ಸ್ಕೈರೂಟ್ ಸಂಸ್ಥೆಗೆ ಈ ಮಿಷನ್ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಸ್ಥೆಯ ವಕ್ತಾರರು ಭಾನುವಾರ ತಿಳಿಸಿದ್ದಾರೆ.
ಅಲ್ಲದೇ, ಈ ಉಡಾವಣೆಯ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೂ ಸ್ಕೈರೂಟ್ ಪಾತ್ರವಾಗಲಿದೆ.