ಮಹಾನಗರ: ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಚರಂಡಿಗೆ ಹಾಕಿರುವ ಕಾಂಕ್ರೀಟ್ ಹಲಗೆಯೊಂದು ಮುರಿದಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಕೇಂದ್ರ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಮಳೆ ನೀರು, ತ್ಯಾಜಗಳು ಭವಂತಿ ರಸ್ತೆಯಲ್ಲಿ ಹರಿದು ಶ್ರೀ ರಾಘವೇಂದ್ರ ಬೃಂದಾವನದ ಬಳಿಯಿಂದ ತ್ರಿಶುಲೇಶ್ವರ ದೇವಸ್ಥಾನದ ಬಳಿಯಲ್ಲಿರುವ ದೊಡ್ಡ ಚರಂಡಿಯನ್ನು ಸೇರುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಈ ರಸ್ತೆಗಳಲ್ಲಿ ಸರಿಯಾದ ಚರಂಡಿಗಳಿಲ್ಲದಿರುವುದು. ಕೆಲವೆಡೆ ಇದ್ದರೂ ಕಿರಿದಾಗಿದ್ದು, ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿದು ಹೋಗಲು ತಡೆಯುಂಟಾಗಿತ್ತು.
ಈ ತೊಂದರೆಯನ್ನು ಅನೇಕ ವರ್ಷಗಳಿಂದಲೂ ಪಾಲಿಕೆಗೆ ಮನವಿ ಸಲ್ಲಿಸಲಾಗಿದ್ದು, ಕೊನೆಗೂ ಪಾಲಿಕೆಯು ಎರಡು ತಿಂಗಳ ಹಿಂದೆ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ಚರಂಡಿಯನ್ನು ಇನ್ನೂ ಅಗಲ ಹಾಗೂ ಆಳವಾಗಿ ಕಟ್ಟಿ ಮೇಲೆ ಕಾಂಕ್ರೀಟ್ ಮುಚ್ಚಿತ್ತು. ಆದರೆ ಈಗ ಮಾಡಲಾದ ಕಳಪೆ ಕಾಮಗಾರಿಯನ್ನು ಬಿಂಬಿಸುವಂತೆ ಮತ್ತೆ ಹಲಗೆ ಮರಿದಿದೆ. ಈ ದೇವಸ್ಥಾನಕ್ಕೆ ದಿನಂಪ್ರತಿ ನೂರಾರು ಭಕ್ತರು ಆಗಮಿಸುತ್ತಾರೆ. ಮುರಿದ ಕಾಂಕ್ರೀಟ್ ಹಲಗೆಯಿಂದ ಅಪಾಯ ಬಂದೊದಗುವ ಮೊದಲು ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.