Advertisement

ಸ್ತ್ರೀ ಸುರಕ್ಷತೆ ಯೋಜನೆಗಳಿಗೆ ಹಿನ್ನಡೆ

11:41 AM Sep 06, 2018 | Team Udayavani |

ಬೆಂಗಳೂರು: ರಾಜಧಾನಿಯ ವನಿತೆಯರ ಸುರಕ್ಷತೆಗಾಗಿ ಕೈಗೊಳ್ಳುವ ರಕ್ಷಣಾ ಕ್ರಮಗಳಿಗೆ ಅಗತ್ಯ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದ್ದರೂ, ಅದನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ. ಪರಿಣಾಮ ಮಹಿಳೆಯರ ಸುರಕ್ಷತೆಗೆ ಅನುಷ್ಠಾನವಾಗಬೇಕಿದ್ದ ಹತ್ತಾರು ಯೋಜನೆಗಳಿಗೆ ಹಿನ್ನಡೆಯಾಗಿದೆ.

Advertisement

ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೈಗೊಳ್ಳುವ ಯೋಜನೆಗಳಿಗೆ ಸೇಫ್ ಸಿಟಿ ಯೋಜನೆಯಡಿ ನಿರ್ಭಯಾ ನಿಧಿಯಿಂದ ಅನುದಾನ ನೀಡಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರ ಅನುದಾನ ಬಳಸಿಕೊಳ್ಳಲು ಮುಂದಾಗದ ಹಿನ್ನೆಲೆಯಲ್ಲಿ ಕೇಂದ್ರದಿಂದ ಬೆಂಗಳೂರಿನಲ್ಲಿ ಜಾರಿಯಾಗಬೇಕಾದ ನೂರಾರು ಕೋಟಿ ರೂ. ಮೊತ್ತದ ಯೋಜನೆಗಳು ವಿಳಂಬವಾಗಲಿವೆ. 

ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೈಗೊಳ್ಳುವ ಯೋಜನೆಗಳಿಗೆ ನಿರ್ಭಯಾ ನಿಧಿಯಿಂದ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಅದರಂತೆ ಬೆಂಗಳೂರು ನಗರ ಪೊಲೀಸರು ಮಹಿಳಾ ಸುರಕ್ಷತೆ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಪ್ರಸ್ತಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರ, ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ನೀಡಲು ಒಪ್ಪಿಗೆ ನೀಡಿದೆ.

ಬೆಂಗಳೂರಿನಲ್ಲಿ ಮಹಿಳೆಯ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ, ಮಹಿಳಾ ಠಾಣೆಗಳು, ವಾಹನಗಳು, ಮೊಬೈಲ್‌ ಆ್ಯಪ್‌ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ 667 ಕೋಟಿ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸಬೇಕಾಗುತ್ತದೆ. ಅದರಂತೆ ತನ್ನ ಪಾಲಿನ ಅನುದಾನ ನೀಡಲು ಕೇಂದ್ರ ಸಿದ್ಧವಿದ್ದರೂ, ಉಳಿದ 40ರಷ್ಟು ಅನುದಾನ ನೀಡಲು ರಾಜ್ಯ ಸರ್ಕಾರ ಈಗವರೆಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಕೇಂದ್ರದಿಂದ ಈವರೆಗೆ ಯಾವುದೇ ರೀತಿಯ ಅನುದಾನ ಲಭ್ಯವಾಗಿಲ್ಲ.

ಸಿಕ್ಕಿದ್ದು 667 ಕೋಟಿ ರೂ.: ನಗರದ 5,500 ಸ್ಥಳಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾಗಳು, ಇಂಟಿಗ್ರೇಟೆಡ್‌ ಕಮಾಂಡ್‌ ಸೆಂಟರ್‌, ಮೊಬೈಲ್‌ ಕಮಾಂಡ್‌ ಸೆಂಟರ್‌, ವಿವಿಧ ಆನ್‌ಲೈನ್‌ ವ್ಯವಸ್ಥೆ, ಮಹಿಳೆಯರ ಸಹಾಯಕ್ಕೆ ಶೀಘ್ರ ತೆರಳಲು 1000 ಬೈಕ್‌ಗಳು ಹಾಗೂ 300 ಕಾರುಗಳು, ರಾಣಿ ಚೆನ್ನಮ್ಮ ದಳ, ಸಹಾಯ ಕೇಂದ್ರ, ಅಪರಾಧ ಸ್ಥಳಗಳ ವಿಶ್ಲೇಷಣೆ ಸೇರಿದಂತೆ ವಿವಿಧ ಯೋಜನೆಗಳ ಜಾರಿಗೆ 742 ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನು ಬಿಬಿಎಂಪಿ ಹಾಗೂ ನಗರ ಪೊಲೀಸರು ಸಲ್ಲಿಸಿದ್ದರು. ಆದರೆ, ಕೇಂದ್ರ ಸರ್ಕಾರ ಕೆಲ ಯೋಜನೆಗಳನ್ನು ತೆಗೆದು 667 ಕೋಟಿ ರೂ. ನೀಡಲು ಒಪ್ಪಿದೆ.

Advertisement

ರಾಜ್ಯ ಸರ್ಕಾರದ ಒಪ್ಪಿಗೆ ಅನಿವಾರ್ಯ: ನಗರದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಮಹಿಳಾ ಸುರಕ್ಷತಾ ಯೋಜನೆಗಳಿಗೆ 40ರಷ್ಟು ಹಣ ನೀಡುವುದಾಗಿ ರಾಜ್ಯ ಸರ್ಕಾರ ಒಪ್ಪಿದರೆ ಮಾತ್ರವೇ ಕೇಂದ್ರ ಸರ್ಕಾರ ತನ್ನ 60ರಷ್ಟು ಪಾಲನ್ನು ಬಿಡುಗಡೆ ಮಾಡಲಿದೆ. ಆದರೆ, ಕೇಂದ್ರ ಸರ್ಕಾರ ಅನುದಾನ ನೀಡುವುದಾಗಿ ತಿಳಿಸಿ ಐದು ತಿಂಗಳು ಕಳೆದರೂ, ರಾಜ್ಯ ಸರ್ಕಾರದ ಪಾಲು ನೀಡುವ ಬಗ್ಗೆ ಯಾವುದೇ ಮಾಹಿತಿಯನ್ನು ಕೇಂದ್ರಕ್ಕೆ ರವಾನಿಸಿಲ್ಲ.

5,500 ಕಡೆ ಸಿಸಿ ಕ್ಯಾಮರಾ ಅಳವಡಿಕೆ ಕೇಂದ್ರದಿಂದ ಲಭ್ಯವಾಗುವ ಅನುದಾನದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅತ್ಯಾಧುನಿಕ ಸಿಸಿ ಕ್ಯಾಮರಾಗಳನ್ನು ನಗರದ 5,500 ಸ್ಥಳಗಳಲ್ಲಿ ಅಳವಡಿಸಲು ಬೆಂಗಳೂರು ನಗರ ಪೊಲೀಸರು ಆದ್ಯತೆ ನೀಡಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ನಿಗಾವಹಿಸುವುದು, ಶಾಲಾ-ಕಾಲೇಜುಗಳು, ಬಸ್‌ ನಿಲ್ದಾಣಗಳು, ರೈಲ್ವೆ ನಿಲ್ದಾಣ, ಮಾಲ್‌, ಉದ್ಯಾನ ಸೇರಿ ನಗರದ 100 ಕಡೆಗಳಲ್ಲಿ ಮಹಿಳಾ ಹೊರ ಠಾಣೆ ನಿರ್ಮಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಮುಖ ಗುರುತಿಸುವ ಕ್ಯಾಮರಾ ನಗರದಲ್ಲಿ ನಡೆಯುವ ಹಲವಾರು ಅಪರಾಧ ಕೃತ್ಯಗಳ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾದರೂ, ಅಪರಾಧಿಗಳ ಮುಖದ ಚಹರೆ ಗುರುತಿಸುವುದು ಕಷ್ಟದ ಕೆಲಸ. ಇದರಿಂದಾಗಿ ಅಪರಾಧಿಗಳ ಪತ್ತೆ ಕಾರ್ಯ ಕಷ್ಟವಾಗುತ್ತದೆ. ಆ ಹಿನ್ನೆಲೆಯಲ್ಲಿ ಮುಖ ಚಹರೆಯನ್ನು ತೀಕ್ಷ್ಣವಾಗಿ ಸೆರೆ ಹಿಡಿಯುವ (ಫೇಶಿಯಲ್‌ ರೆಕಗ್ನೆಸೇಷನ್‌) 500 ಕ್ಯಾಮರಾಗಳನ್ನು ನಗರದಲ್ಲಿ ಅಳವಡಿಸಲು ಪೊಲೀಸ್‌ ಇಲಾಖೆ ಯೋಜನೆ ರೂಪಿಸಿದೆ

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕಾದರೆ, ರಾಜ್ಯ ಸರ್ಕಾರ ತನ್ನ 40ರಷ್ಟು ಪಾಲು ನೀಡಲು ಒಪ್ಪಿಗೆ
ಸೂಚಿಸಿದ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಈ ಕುರಿತ ಕಡತ ಹಣಕಾಸು ಇಲಾಖೆಯಲ್ಲಿದ್ದು, ಹಣಕಾಸು
ಇಲಾಖೆಯ ಒಪ್ಪಿಗೆ ಸಿಕ್ಕ ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.  
 ಟಿ.ಸುನೀಲ್‌ ಕುಮಾರ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತಾ

ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next