ಸಿಯೋಲ್: ದಾಳಿ ಬೆದರಿಕೆ, ಪದೇ ಪದೆ ಕ್ಷಿಪಣಿ ಪರೀಕ್ಷೆ ಮೂಲಕ ಪುಂಡಾಟ ನಡೆಸುತ್ತಿರುವ ಉತ್ತರ ಕೊರಿಯಾ, ಇದೀಗ ಮತ್ತೆ ಜಪಾನ್ ಮೇಲೆ ಕ್ಷಿಪಣಿ ಹಾರಾಟ ನಡೆಸಿದೆ.
ಉತ್ತರ ಕೊರಿಯಾ ರಾಜಧಾನಿ ಫ್ಯೂನ್ಗ್ಯಾಂಗ್ನಿಂದ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ, ಜಪಾನ್ ಮೇಲಿಂದ ಹಾದು ಹೋಗಿ, ಉತ್ತರ ಪೆಸಿಫಿಕ್ ಸಮುದ್ರಕ್ಕೆ ಹೋಗಿ ಬಿದ್ದಿದೆ.
ಅಮೆರಿಕದ ಮಿತ್ರ ದೇಶ ದಕ್ಷಿಣ ಕೊರಿಯಾದೊಂದಿಗೆ ಮಿಲಿಟರಿ ತಾಲೀಮು ನಡೆಸುತ್ತಿರುವ ಬೆನ್ನಲ್ಲೇ ಈ ಆಕ್ರಮಣಕಾರಿ ಪ್ರವೃತ್ತಿ ತೋರಿಸುವ ಮೂಲಕ ಉ. ಕೊರಿಯಾ ಇದೀಗ ಅಮೆರಿಕಕ್ಕೆ ಸಂದೇಶ ಕಳಿಸಲು ಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ಕ್ಷಿಪಣಿ ಸುಮಾರು 2700 ಕಿ.ಮೀ. ದೂರ ಕ್ರಮಿಸಿದ್ದು, ನಭದಲ್ಲಿ ಅತಿ ಎತ್ತರಕ್ಕೆ ಅಂದರೆ 550 ಕಿ.ಮೀ.ವರೆಗೆ ತಲುಪಿದೆ. ಜಪಾನ್‌ನ ಹೊಕ್ಕಾಯೊxà ದ್ವೀಪ ಹಾದು ಹೋದ ಬಳಿಕ ಅದು ಸಮುದ್ರದಲ್ಲಿ ಪತನವಾಗಿದೆ. ಫ್ಯೂನ್ಗ್ಯಾಂಗ್ನ ಅಂ.ರಾ.ವಿಮಾನ ನಿಲ್ದಾಣ ಸಮೀಪ ದಿಂದ ಮೊಬೈಲ್ ಲಾಂಚರ್ ಮೂಲಕ ಈ ಉಡಾವಣೆ ನಡೆದಿದೆ ಎಂದು ದ.ಕೊರಿಯಾದ ಜಂಟಿ ಸೇನಾ ಮುಖ್ಯ ಸ್ಥರು ಹೇಳಿದ್ದಾರೆ. ಜಪಾನ್ ಮೇಲೆ ಉ. ಕೊರಿಯಾ ಕ್ಷಿಪಣಿ ಹಾದುಹೋಗಿದ್ದು ಇದೇ ಮೊದಲ ಬಾರಿ. ಪ್ರತಿ ಬಾರಿ ಅದು ಕ್ಷಿಪಣಿ ಪರೀಕ್ಷೆ ನಡೆಸುವಾಗಲೂ ಅಮೆರಿಕದ ಮೇಲೆ ಪರಮಾಣು ದಾಳಿ ನಡೆಸುವ ಸನ್ನಾಹಕ್ಕೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ವರ್ಷದಲ್ಲಿ 13ನೇ ಬಾರಿಗೆ ಕ್ಷಿಪಣಿ ಪರೀಕ್ಷೆಯನ್ನು ಉ.ಕೊರಿಯಾ ನಡೆಸಿದೆ.
ಅಣ್ವಸ್ತ್ರ ಪರೀಕ್ಷೆಗೆ ಕಾನೂನಾತ್ಮಕ ತಡೆ: ವಿಶ್ವಾದ್ಯಂತ ರಾಷ್ಟ್ರಗಳು ನಡೆಸುವ ಅಣ್ವಸ್ತ್ರ ಪರೀಕ್ಷೆಗೆ ಕಾನೂನಾತ್ಮಕ ತಡೆ ಬೇಕಿದೆ. ಇದಕ್ಕಾಗಿ ದೇಶಗಳು ಒಪ್ಪಂದವೊಂದನ್ನು ಮಾಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರ್ರೆಸ್ ಹೇಳಿದ್ದಾರೆ. ಶೀಘ್ರ ಈ ಒಪ್ಪಂದ ಅಸ್ತಿತ್ವಕ್ಕೆ ಬರಲಿದ್ದು. ಅಣ್ವಸ್ತ್ರ ಪರೀಕ್ಷೆಗೆ ತಡೆಯಾಗ ಲಿದೆ ಎಂದಿದ್ದಾರೆ. ಕಳೆದ ಏಳು ದಶಕಗಳಲ್ಲಿ 2 ಸಾವಿರಕ್ಕೂ ಹೆಚ್ಚು ಅಣ್ವಸ್ತ್ರ ಪರೀಕ್ಷೆಗಳು ನಡೆದಿವೆ. ಇದು ಜೀವಸಂಕುಲಕ್ಕೆ ತೀವ್ರ ಹಾನಿಕರವಾಗಿದೆ ಎಂದರು. ಗುಟೆರ್ರೆಸ್ ಅವರು ಅಂತಾರಾಷ್ಟ್ರೀಯ ಅಣ್ವಸ್ತ್ರ ಪರೀಕ್ಷೆ ವಿರೋಧಿ ದಿನದಂದು ಮಾತನಾಡುತ್ತ ಈ ಮಾತು ಹೇಳಿದ್ದಾರೆ.