Advertisement
ನೀವು ಇನ್ನು ಎಂಟು ಗಂಟೆಗೆಲ್ಲ ಕ್ಲಾಸಲ್ಲಿರ್ಬೇಕು…- ಒಂದು ಕಾಗದ ಪತ್ರದಲ್ಲಿ ಮುದ್ರಿಸಿದ ಈ ಆದೇಶವನ್ನು ಶಿಕ್ಷಣ ಇಲಾಖೆ ಎಲ್ಲ ಕಾಲೇಜುಗಳ ಗೋಡೆಯ ಮೇಲೆ ಅಂಟಿಸಿತ್ತು. ಬಹುತೇಕ ವಿದ್ಯಾರ್ಥಿಗಳು ಅಲ್ಲಿಯೇ ಬಯ್ದುಕೊಂಡರೇನೋ! ಹೈಕಳ ಪೇರೆಂಟ್ಸ್ ಅಂತೂ, “ಇವ್ನು ಏಳ್ಳೋದೇ ಒಂಭತ್ತಕ್ಕೆ; ಎಂಟ್ ಗಂಟೆಗೇ ಹೋಗೋದಾದ್ರೆ, ಇವ° ಹಾಸಿಗೆಯನ್ನು ಕಾಲೇಜಲ್ಲೇ ಎಲ್ಲಾದ್ರೂ ಸೈಡಲ್ಲಿ ಇಡೋದು ಒಳ್ಳೇದು’ ಎಂದು ಲೇವಡಿ ಮಾಡಿದ್ದರು. ಯಾವ ದೇವರ ವರವೋ, ಅದ್ಯಾವ ವಿದ್ಯಾರ್ಥಿಯ ಹರಕೆಯ ಫಲವೋ, ಗೊತ್ತಿಲ್ಲ… ಸರ್ಕಾರ ತನ್ನ ಆದೇಶ ವಾಪಸು ತೆಗೆದುಕೊಂಡಿದೆ. “ಬೆಳಗ್ಗೆ ಬೇಗ ಕ್ಲಾಸು ಬೇಡ, ಮಾಮೂಲಿ ಟೈಮ್‌ಗೆ ಬರ್ರಪ್ಪಾ…’ ಎಂಬ ಆ ಮರು ಆಮಂತ್ರಣದಲ್ಲಿ ಇಲಾಖೆಯ ದೊಡ್ಡ ಸೋಲೊಂದು ಇಣುಕಿದೆ.
Related Articles
Advertisement
ಮತ್ತೆ ಸೋಲುತ್ತೀರಿ…ಇದು ಎಲ್ಲ ಬಹುತೇಕ ವಿದ್ಯಾರ್ಥಿಗಳ ಪ್ರಶ್ನೆ. ನೀವು ನಾಳೆಯಿಂದ ಸರಿಯಾಗಿ ಆರಕ್ಕೆ ಎದ್ದುಬಿಡ್ತೀನಿ ಅಂತ ನಿರ್ಧರಿಸಿಯೇ ಮಲಗುತ್ತೀರಿ. ಇಲ್ಲ ನಿಮಗೆ ಸಾಧ್ಯವಾಗೋದೇ ಇಲ್ಲ. ಮತ್ತೆ ಸೋಲುತ್ತೀರಿ. ಅಲಾರಂ ಅರಚಿಕೊಂಡರೆ ಅದಕ್ಕೆ ನಾಲ್ಕು ಬಾರಿಸಿ, ಸುಮ್ಮನಿರಿಸುತ್ತೀರಿ. ಕಾಫೀ ತಂದ ಅಮ್ಮನಿಗೆ ಪ್ರತಿಕ್ರಿಯಿಸದೆ, ಮುಖ ತಿರುವಿಸಿ ಮಲಗುತ್ತೀರಿ. ನಿನ್ನೆ ದಿನ ಮಾಡಿದ ಗಟ್ಟಿಯಾದ ನಿರ್ಧಾರ ಮುಂಜಾನೆಯ ಸಕ್ಕರೆ ನಿದ್ದೆಗೆ ಕರಗಿ ಹೋಗಿರುತ್ತದೆ. ನಿಜಕ್ಕೂ ಇದೊಂದು ಹೋರಾಟ. ಮೊದಲ ಕ್ಲಾಸ್ ಖಾಲಿ ಖಾಲಿ!
ಶಾಲೆಯ ದಿನಗಳಲ್ಲಿ ಟೈ ಬೆಲ್ಟ್ ಬಿಗಿದುಕೊಂಡು ಪ್ರಾರ್ಥನೆಯ ವೇಳೆಗಾಗಲೇ ಸ್ಕೂಲ್ ಅಂಗಳದಲ್ಲಿ ಸೇರುತ್ತಿದ್ದ ಹುಡುಗರು ಇಂದು ಕಾಲೇಜಿನಲ್ಲಿ ಪ್ರಥಮ ತರಗತಿಗೆ ಚಕ್ಕರ್! ಹಾಜರಾತಿ ಎರಡಂಕಿ ದಾಟಲೂ ಕುಂಟುತ್ತದೆ. ಗಂಟೆ ಹತ್ತಾದರೂ ಕಾಲೇಜಿನ ಮುಖ ನೋಡೋದಿಲ್ಲ. ಅಮ್ಮನ ಬೈಗುಳಕ್ಕೊ, ಅಪ್ಪನ ಭಯಕ್ಕೋ ಎದ್ದಿರುತ್ತಾರೆ. ಟೈಮ್ ಮ್ಯಾನೇಜ್ ಹೇಗೆಂದು ತಿಳಿಯುತ್ತಿಲ್ಲ. ಲೇಟಾಗಿ ಎದ್ದರೂ ರೆಡಿಯಾಗಲು ಗಂಟೆಗಟ್ಟಲೇ ವ್ಯಯಿಸುತ್ತಾರೆ. ಏನೂ ಬರೆದಿಲ್ಲ, ಓದಿಲ್ಲ ಎಂದು ಅವಾಗ ನೆನಪಿಗೆ ಬರುತ್ತದೆ. ಅದ್ಯಾವುದೋ ನೋಟ್ಸ್, ಬುಕ್ಸ್ ಅಂತ ಪರದಾಡುತ್ತಾರೆ. ಮರೆಯುತ್ತಾರೆ. ಕಾಲೇಜು ಕ್ಯಾಂಪಸ್ ಸೇರುವ ಹೊತ್ತಿಗೆ ಎರಡನೇ ಅವಧಿಯ ಬೆಲ್ ಬಾರಿಸಿರುತ್ತದೆ. ಕಾಲೇಜು ಹುಡುಗರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಡಾ. ರಾಲ್ಪ, ಇದೇ ಮಾತನ್ನೇ ಪ್ರತಿಪಾದಿಸುತ್ತಾರೆ: “ಕಾಲೇಜಿನ ತರಗತಿಗಳು ಬೆಳಗ್ಗೆ 11ರ ನಂತರವಷ್ಟೇ ಆರಂಭವಾಗಬೇಕು’. ಇದು ಕಾಲೇಜಿನ ಮೊದಲ ತರಗತಿಗಳನ್ನು ನೋಡಿದಾಗ ನಿಜವೆನಿಸುತ್ತದೆ. ಕ್ಲಾಸು ಮೊದಲಿನಂತೆ ತಡವಾಗಿಯೇ ಆರಂಭವಾಗಿದೆ ಎನ್ನುವುದು ಸಂಭ್ರಮದ ಸಂಗತಿ ಅಲ್ಲ. ಇದು ಸೋಮಾರಿ ವಿದ್ಯಾರ್ಥಿಗಳ ದಿಗ್ವಿಜಯವೂ ಅಲ್ಲ. ಇದು ದೊಡ್ಡ ಸೋಲು! ಕಾಲೇಜು ಹುಡುಗರು ತಡವಾಗಿ ಎದ್ದರೆ ದೇಶವೇ ತಡವಾಗಿ ಎದ್ದಂತೆ. ಏಕೆಂದರೆ, ಒಂದೆಡೆ ನಾಳೆ ದೇಶವನ್ನು ನಿಮ್ಮ ಕೈಯಲ್ಲಿಡಲು ಎಲ್ಲಾ ತಯಾರಿ ನಡೆಯುತ್ತಿರುವಾಗ ನೀವಿನ್ನೂ ಹಾಸಿಗೆಯ ಮೇಲೆ ಆಕಳಿಸುತ್ತಾ ಮಲಗಿದ್ದರೆ ಹೇಗೆ? ನಿಮ್ಮ ಗುರಿ- ಜವಾಬ್ದಾರಿಗಳು ಕಾದಿರುವಾಗ ಮಲಗಿಕೊಂಡೇ ಇದ್ದರೆ ಏನೂ ಫಲಕಾರಿಯಾಗದು. ಒಮ್ಮೆ ಮೈ ಕೊಡವಿ ಎದ್ದು ಬಿಡಿ. ಆಮೇಲೆ ನೋಡಿ… ನಿಮ್ಮ ಕೆರಿಯರ್ ಹೇಗಿರುತ್ತೆ ಅಂತ! 7 ಗುಟ್ಟು ಪಾಲಿಸಿದ್ರೆ, ನೀವು ಮಾರ್ನಿಂಗ್ ಸ್ಟಾರ್!
1. ಬೇಗ ಮಲಗಿ. ಹಾಗೆ ಮಲಗುವುದಕ್ಕೂ ಒಂದು ನಿರ್ದಿಷ್ಟ ಟೈಮ್ ಫಿಕ್ಸ್ ಮಾಡಿಕೊಳ್ಳಿ. ಒಂದು ತಿಂಗಳು ಇದನ್ನು ಪಾಲಿಸಿದರೆ, ಅದು ಅಭ್ಯಾಸವೇ ಆಗುತ್ತೆ.
2. ಮಲಗುವ ಮೊದಲು ಮೊಬೈಲ್ ಜತೆ ಸರಸಕ್ಕೆ ಇಳಿಯಬೇಡಿ. ನಿಮ್ಮ ನಿದ್ದೆಯನ್ನು ಇದು ಅನಾಯಾಸವಾಗಿ ತಿಂದುಹಾಕುತ್ತದೆ.
3. ಮಲಗುವ ಕೋಣೆ ಪ್ರಶಾಂತವಾಗಿರಲಿ. ಅಲ್ಲಿ ಗಾಳಿ- ಬೆಳಕು ಯಥೇಚ್ಚವಾಗಿರಲಿ.
4. ಏಳುವುದಕ್ಕೂ ಒಂದು ಸಮಯ ನಿಗದಿಪಡಿಸಿಕೊಳ್ಳಿ. ಅಲಾರಂ ಫಿಕ್ಸ್ ಮಾಡಿಕೊಳ್ಳಿ. ಐದಾರು ಬಾರಿ ರಿಪೀಟ್ ಆಗುವಂತೆ ಸೆಟ್ ಮಾಡಿಡಿ. ಅಲಾರಂ ನೀವು ಮಲಗುವ ಜಾಗದಿಂದ ತುಸು ದೂರವಿರಲಿ, ಕೈಟುಕದಂತೆ.
5. ಮೊದಲ ಬಾರಿಗೆ ಎಚ್ಚರವಾದ ತಕ್ಷಣ, ಎದ್ದುಬಿಡಿ. ಮುಖ ತೊಳೆದು, ತಡಮಾಡದೆ, ಹೊರಗೆ ಒಂದು ವಾಕ್ ಹೋಗಿ.
6. ದೇಹಕ್ಕೆ ತನ್ನದೇ ಆದ ಇತಿಮಿತಿಗಳಿರುತ್ತವೆ. ಅದನ್ನು ಗೌರವಿಸಿ. ಅದು ವಿಶ್ರಾಂತಿ ಬಯಸಿದಾಗ, ದೂರ ಉಳಿಯುವುದು ತರವಲ್ಲ. ಆದರೆ, ಈ ವಿರಾಮಕ್ಕೂ ಸೋಮಾರಿತನಕ್ಕೂ ನಡುವಿನ ಗೆರೆಯನ್ನು ಅರಿತುಕೊಳ್ಳುವುದು ಮುಖ್ಯ.
7. ರಾತ್ರಿ ಅತಿಯಾದ ಊಟ ಬೇಡ. ಹೆಚ್ಚು ಚಾಕ್ಲೆಟ್, ಕಾಫೀ- ಟೀ ಸೇವನೆ ಬೇಡವೇ ಬೇಡ. – ಸದಾಶಿವ್ ಸೊರಟೂರು