Advertisement

ಕೆಂಪು ನೆಲದಲ್ಲಿ ಕೇಸರಿ ಅರಳಿಸಿದ ಬಚ್ಚೇಗೌಡ, ಸುಧಾಕರ್‌

09:47 PM Dec 30, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಭಾರತೀಯ ಜನತಾ ಪಕ್ಷಕ್ಕೆ 2019 ಮಹತ್ವದ ವರ್ಷ. ಒಂದೇ ವರ್ಷದಲ್ಲಿ ಎದುರಾದ ಲೋಕಸಭಾ ಚುನಾವಣೆ ಹಾಗೂ ಚಿಕ್ಕಬಳ್ಳಾಪುರ ಉಪ ಚುನಾವಣೆಯಲ್ಲಿ ಕಮಲ ಅರಳಿಸಿ ಖಾತೆ ತೆರೆಯುವ ಮೂಲಕ ಮೂಲಕ ತನ್ನ ದಶಕಗಳ ಕನಸನ್ನು ಬಿಜೆಪಿ ಈಡೇರಿಸಿಕೊಂಡಿತು. ಅಲ್ಲದೇ ಒಂದು ಕಾಲಕ್ಕೆ ಕೆಂಪು ಪ್ರಭಾವ ದಟ್ಟವಾಗಿದ್ದ ಜಿಲ್ಲೆಯಲ್ಲಿ ಕೇಸರಿ ಪತಾಕೆ ಹಾರಿಸಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 9,520 ಅಲ್ಪಮತಗಳ ಅಂತರದಿಂದ ಮಾಜಿ ಸಚಿವ ಹೊಸಕೋಟೆಯ ಬಿ.ಎನ್‌.ಬಚ್ಚೇಗೌಡ ಪರಾಜಿತಗೊಂಡಿದ್ದರು.

Advertisement

2019ರ ಚುನಾವಣೆಯಲ್ಲಿ 7,44,475 ಮತ ಪಡೆದು ಮೋದಿ ಅಲೆಯಲ್ಲಿ ಬರೋಬ್ಬರಿ 1.81 ಲಕ್ಷ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜ್ಯದ ಆಡಳಿತರೂಢ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಕೂಟಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭಾರೀ ಮುಖಭಂಗ ಉಂಟು ಮಾಡಿದ್ದರು. ಇದರೊಂದಿಗೆ ಎರಡು ಬಾರಿ ಕ್ಷೇತ್ರದಲ್ಲಿ ಸುಲಭವಾಗಿ ಗೆಲುವು ಸಾಧಿಸಿದ್ದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿರವರ ಹ್ಯಾಟ್ರಿಕ್‌ ಗೆಲುವಿನ ಕನಸು ನುಚ್ಚು ನೂರಾಗಿತ್ತು.

ಸುಧಾಕರ್‌ ಹ್ರಾಟ್ರಿಕ್‌ ಗೆಲವು: 20013, 2018 ರಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಡಾ.ಕೆ.ಸುಧಾಕರ್‌, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಕಳೆದ ಡಿ.5 ರಂದು ನಡೆದ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಭದ್ರಕೋಟೆ ಉರುಳಿಸಿ ಕಮಲ ಅರಳಿಸುವ ಮೂಲಕ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಮಲದ ಖಾತೆ ತೆರೆದ ಕೀರ್ತಿಗೆ ಪಾತ್ರರಾಗಿದ್ದಾರೆ.

ಉಪ ಕದನದ ಪ್ರಚಾರಕ್ಕೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಆಗಮಿಸಿದ್ದರಿಂದ ಉಪ ಕದನ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೂ ಸುಧಾಕರ್‌, ಸತತ ಎರಡು ಚುನಾವಣೆಗಳಿಗಿಂತ 34 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಉರುಳಿಸಿದರು. ಸುಧಾಕರ್‌ ಚುನಾವಣೆಯಲ್ಲಿ 84,389 ಮತ ಪಡೆದರೆ, ಕಾಂಗ್ರೆಸ್‌ನ ನಂದಿ ಅಂಜನಪ್ಪ 49,588 ಪಡೆದು ಸುಧಾಕರ್‌, 34,801 ಮತಗಳ ಭಾರೀ ಅಂತರದಿಂದ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದರು.

ಜಿಪಂನಲ್ಲಿ ಬಂಡಾಯಕ್ಕೆ ಗೆಲುವು: ಈ ಹಿಂದೆ ಜಿಪಂ ಅಧ್ಯಕ್ಷರಾಗಿದ್ದ ಸುಧಾಕರ್‌ರವರ ತಂದೆ ಪಿ.ಎನ್‌.ಕೇಶವರೆಡ್ಡಿ ರಾಜೀನಾಮೆ ಬಳಿಕ ನಡೆದ ಚುನಾವಣೆಯಲ್ಲಿ ಗೌರಿಬಿದನೂರಿನ ಹೆಚ್‌.ವಿ.ಮಂಜುನಾಥ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಜಿಪಂ ಅಧ್ಯಕ್ಷರಾಗಿದ್ದರು. ಆದರೆ ಹೆಚ್‌.ವಿ.ಮಂಜುನಾಥ ರಾಜೀನಾಮೆ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿದ್ದ ಮಂಚೇನಹಳ್ಳಿ ಕ್ಷೇತ್ರದ ಜಿಪಂ ಸದಸ್ಯ ಪಿ.ಎನ್‌.ಪ್ರಕಾಶ್‌ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಜಿಪಂ ಸದಸ್ಯ ಚಿಕ್ಕನರಸಿಂಹಯ್ಯ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next