ಚಾಮರಾಜನಗರ: ಸಾಲ ತೀರಿಸುವ ಸಲುವಾಗಿ ತನ್ನ 25 ದಿನಗಳ ಮಗುವನ್ನು ತಂದೆಯೋರ್ವ ಮಾರಾಟ ಪ್ರಕರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಗುವನ್ನು ಪತ್ತೆ ಹಚ್ಚಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ಮಗುವಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ಅಗತ್ಯವಿದ್ದ ಕಾರಣ ತಾಯಿಯೊಂದಿಗೆ ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವನ್ನು ಮಾರಾಟ ಮಾಡಿಸಿದ್ದ ಮಧ್ಯವರ್ತಿ ಮೂಲಕವೇ ಮಗು ಕೊಂಡೊಯ್ದಿದ್ದವರ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ತಾಯಿ, ಮಗುವನ್ನು ಸಖೀ ಕೇಂದ್ರದವರ ಜವಾಬ್ದಾರಿಗೆ ನೀಡಲಾಗಿದೆ. ನಂತರ ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಕ್ಕಳ ರಕ್ಷಣ ಘಟಕದ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.
ಮಗುವನ್ನು ಖರೀದಿಸಿದ್ದ ಮಂಡ್ಯ ಮೂಲದ ವ್ಯಕ್ತಿ:ಈ ಮಗುವನ್ನು ಮಂಡ್ಯ ಮೂಲದ ವ್ಯಕ್ತಿ ಖರೀದಿ ಮಾಡಿದ್ದು ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದಲ್ಲದೇ ಮಗುವಿನ ತಂದೆ ಬಸವ ಹಾಗೂ ಮಧ್ಯವರ್ತಿ ಖಾಸಿಂ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕಾನೂನು ದೃಷ್ಟಿಯಲ್ಲಿ ಮಗುವಿನ ಮಾರಾಟ, ಖರೀದಿ ಅಪರಾಧ. ಯಾವುದೇ ಮಗುವನ್ನು ನಿಯಮ ಪ್ರಕಾರ ದತ್ತು ನೀಡುವುದು, ಪಡೆಯುವ ಪ್ರಕ್ರಿಯೆ ನಡೆಯಬೇಕು. ಹಣಕ್ಕಾಗಿ ಮಾರಾಟ, ಖರೀದಿ ಎಂಬುದು ಅಪರಾಧ. ಇನ್ನೂ ಹೆಚ್ಚಿನ ವಿಚಾರಣೆ ಬಳಿಕ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೆಂಬದನ್ನು ನಿರ್ಧರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ತಿಳಿಸಿದರು.
ನಗರದ ಹೋಟೆಲ್ ಕಾರ್ಮಿಕ ಬಸವ ತನ್ನ 25 ದಿನಗಳ ಶಿಶುವನ್ನು ಸಾಲ ತೀರಿಸಲು ಹಾಗೂ ಪತ್ನಿಯ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು ಮಧ್ಯವರ್ತಿ ಮೂಲಕ 50 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಲಿಂಗತ್ವ ಅಲ್ಪಸಂಖ್ಯಾತರ ಘಟಕದ ದೀಪಾ ಬುದ್ದೆ ಅವರ ಮೂಲಕ ಪ್ರಕರಣ ಬೆಳಕಿಗೆ ಬಂದು, ಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.