ಲಾಹೋರ್: ಕಳೆದ ಏಷ್ಯಾಕಪ್ ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಪಾಕಿಸ್ಥಾನದ ನಾಯಕ ಬಾಬರ್ ಅಜಂ ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚುತ್ತಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲೂ ಅರ್ಧಶತಕ ಬಾರಿಸಿರುವ ಬಾಬರ್ ಹೊಸ ಮೈಲಿಗಲ್ಲು ಸ್ಥಾಪಿಸಿದರು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ವೇಗದಲ್ಲಿ ಮೂರು ಸಾವಿರ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರ ಜೊತೆ ಅಗ್ರಸ್ಥಾನದಲ್ಲಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 87 ರನ್ ಗಳಿಸಿದ ಬಾಬರ್ ಅಜಂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಮೂರು ಸಾವಿರ ರನ್ ಪೂರ್ತಿ ಮಾಡಿದರು.
ಬಾಬರ್ ಅಜಂ ಅವರು 81 ಇನ್ನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಗಡಿ ದಾಟಿದರು. ಈ ಮೊದಲು ವಿರಾಟ್ ಕೊಹ್ಲಿ ಅವರೂ 81 ಇನ್ನಿಗ್ಸ್ ಗಳಲ್ಲೇ ಈ ದಾಖಲೆ ಮಾಡಿದ್ದರು.
ಇದೇ ವೇಳೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ಪಾಲ್ ಸ್ಟರ್ಲಿಂಗ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ನೆಗೆದರು. ಭಾರತದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಮೊದಲ ಮೂರು ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ರ‍್ಯಾಲಿಗೆ ತೆರಳಿಯೂ ಭಾಷಣ ಮಾಡದ ಪ್ರಧಾನಿ ಮೋದಿ; ಜನರ ಬಳಿ ಕ್ಷಮೆ ಕೇಳಿದ್ದೇಕೆ?
ಲಾಹೋರ್ ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ಆರು ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ 14.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ 41 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು.