ಮುಲ್ತಾನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಪಾಕಿಸ್ಥಾನ ತಂಡ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ಥಾನ ನಾಯಕ ಬಾಬರ್ ಅಜಂ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಬಾಬರ್ ಅಜಂ ಅವರು ವಿಕೆಟ್ ಕೀಪರ್ ಬಳಸುವ ಗ್ಲೌಸ್ ಬಳಸಿದ್ದಾರೆ. ಕ್ರಿಕೆಟ್ ನಿಯಮಗಳ ಪ್ರಕಾರ ಹೀಗೆ ಮಾಡುವಂತಿಲ್ಲ. ಹೀಗಾಗಿ ಐದು ರನ್ ಪೆನಾಲ್ಟಿ ವಿಧಿಸಲಾಗಿದೆ.
ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 29ನೇ ಓವರ್ ನಲ್ಲಿ ಬಾಬರ್ ಅಜಂ ಈ ಅತಿರೇಕ ಪ್ರದರ್ಶಿಸಿದರು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಕೀಪಿಂಗ್ ಗ್ಲೌಸ್ ಬಳಸಿದ ಬಾಬರ್ ಫೀಲ್ಡಿಂಗ್ ಮಾಡಿದರು. ಇದು ನಿಯಮಬಾಹಿರ ಫೀಲ್ಡಿಂಗ್ ಎಂದು ಪರಿಗಣಿಸಲಾಗಿದ್ದು, ತಂಡಕ್ಕೆ ಐದು ರನ್ ಪೆನಾಲ್ಟಿ ವಿಧಿಸಲಾಗಿದೆ.
ಇದನ್ನೂ ಓದಿ:ಕೃಷ್ಣನ ‘ದಿಲ್ ಪಸಂದ್’; ಜೂ.12ಕ್ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್
ಕ್ರಿಕೆಟ್ ನಿಯಮಗಳ ಪ್ರಕಾರ ವಿಕೆಟ್ ಕೀಪರ್ ಹೊರತು ಪಡಿಸಿ ಉಳಿದ ಯಾವ ಫೀಲ್ಡರ್ ಕೂಡಾ ಗ್ಲೌಸ್ ಧರಿಸುವಂತಿಲ್ಲ. ಅಲ್ಲದೆ ಅಂಪೈರ್ ಅನುಮತಿಯಿಲ್ಲದೆ ಕೈಗೆ ಅಥವಾ ಬೆರಳಿಗೆ ಯಾವುದೇ ಸುರಕ್ಷತಾ ಪಟ್ಟಿ/ ಬ್ಯಾಂಡ್ ಧರಿಸುವಂತಿಲ್ಲ.
ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ಥಾನ ತಂಡ ಎಂಟು ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 32.2 ಓವರ್ ಗಳಲ್ಲಿ 155 ರನ್ ಗೆ ಆಲೌಟಾಗಿ, 120 ರನ್ ಅಂತರದ ಸೋಲನುಭವಿಸಿತು.