Advertisement

ಶ್ರೀಕೃಷ್ಣಮಠದಲ್ಲಿ “ಬಾಬಾ’

11:38 AM Jun 24, 2019 | Vishnu Das |

ಈ ಆಮೆ ಬಹಳ ವಿಶಿಷ್ಟವಾದುದು. ಸುಮ್ಮನೆ ಆಹಾರ ಹಾಕಿದರೆ ಬರಲೊಲ್ಲದು. ಪ್ರೀತಿಯಿಂದ ಬಾಯಿಗೆ ತುತ್ತು ಇಟ್ಟರೆ ಖುಷಿಯಾಗಿ ಬರುತ್ತದೆ. ಅಂದಹಾಗೇ ಈ ಆಮೆಯ ಹೆಸರು ಬಾಬಾ. ವಾಸಸ್ಥಾನ ಮಧ್ವಸರೋವರ.

Advertisement

ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ವಿಶಿಷ್ಟ ಗುಣದ ಆಮೆಯೊಂದಿದೆ. ಇದನ್ನು ಕರೆಯುವುದು “ಬಾಬಾ’ ಎಂದು. ಇದು, ಮನುಷ್ಯರ ಮಾತಿಗೆ ಸ್ಪಂದಿಸುವ ಗುಣ ಹೊಂದಿದೆ.

ನಿತ್ಯವೂ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಪೂಜೆಗೆ ಹೋಗುವ ಮುನ್ನ ಸ್ನಾನಕ್ಕೆ ತೆರಳುವಾಗ ಮತ್ತು ಮಹಾಪೂಜೆ ಮುಗಿಸಿ ಬರುವಾಗ ಆಮೆ, ಮೀನು, ಪಾರಿವಾಳಗಳು, ಆನೆ, ಗೋವುಗಳಿಗೆ ಏನಾದರೂ ಆಹಾರ ಕೊಡುತ್ತಾರೆ.

ಶ್ರೀಕೃಷ್ಣಮಠದ ನೈವೇದ್ಯ ವಿಭಾಗದ ಸಿಬಂದಿ ಶ್ರೀನಿವಾಸ ಭಟ್‌ ಅವರು ದೇವರಿಗೆ ನೈವೇದ್ಯ ಮಾಡಿದ ದೋಸೆಯನ್ನು ಈ ವಿಶಿಷ್ಟ ಆಮೆಗೆ ನಿತ್ಯ ತಿನ್ನಿಸುವುದು ವಿಶೇಷ. ಇವರು ಮೀನುಗಳಿಗಾಗಿ ನೀರಿಗೆ ಆಹಾರ ಹಾಕಿದಂತೆ ಈ ಆಮೆಗೆ ಹಾಕುವುದಲ್ಲ, ಹಾಗೆ ಹಾಕಿದರೆ ಇದು ತಿನ್ನುವುದೂ ಇಲ್ಲ. ಕೈಯಲ್ಲಿ ದೋಸೆಯನ್ನು ಹಿಡಿದು ತಿನ್ನಿಸುತ್ತಾರೆ. ಈ ಆಮೆಗೆ ಅವರ ಪರಿಚಯವಿರುವಂತೆ, ಅವರು ಬಾಬಾ ಎಂದು ಕರೆದರೆ ಸಾಕು; ನೀರಿನಿಂದ ಮೇಲೆ ಬರುತ್ತದೆ. ಭಟ್ಟರು ಕೊಟ್ಟ ಆಹಾರವನ್ನು ಸಂತೃಪ್ತಿಯಿಂದ ತಿಂದು ಮತ್ತೆ ನೀರೊಳಗೆ ಸೇರಿಕೊಳ್ಳುತ್ತದೆ. ಕೆಲವು ಬಾರಿ ಅದು ತಟದ ಮೇಲೆ ಬಂದು ಕುಳಿತುಕೊಳ್ಳುವುದೂ ಇದೆ.

Advertisement

ಈ ಬಾಬಾ ಕೇವಲ ಸ್ವಾಮೀಜಿ, ಶ್ರೀನಿವಾಸ ಭಟ್ಟರ ಮಾತಿಗಷ್ಟೇ ಮಾತ್ರ ಸ್ಪಂದಿಸುವುದಲ್ಲ. ಮಧ್ವಸರೋವರದಲ್ಲಿ ಸ್ನಾನ ಮಾಡಿ ಜಪ, ಪಾರಾಯಣ ಮಾಡುವ ಇತರ ಭಕ್ತರ ಮಾತಿಗೂ ಸ್ಪಂದಿಸುತ್ತದೆ. ಭಕ್ತರ ಬಳಿ ಸುಳಿದಾಡುವ ಆಮೆಯನ್ನು ಕೆಲವರು ಮಾತನಾಡಿಸುತ್ತಾರೆ, ಮುದ್ದು ಮಾಡುತ್ತಾರೆ. ಕಾಸರಗೋಡಿನವರು ಯಾರೋ ಈ ಆಮೆಯನ್ನು ತಂದು ಬಿಟ್ಟುಹೋದರು ಅನ್ನೋ ಮಾತಿದೆ. ಭಗವಂತನ ದಶಾವತಾರಗಳಲ್ಲಿ ಆಮೆಯೂ ಒಂದು (ಕೂರ್ಮ). ಮಂದರಪರ್ವತವನ್ನು ಆಧಾರವಾಗಿಟ್ಟುಕೊಂಡು ಸಮುದ್ರಮಥನ ಮಾಡುವ ಕಾಲದಲ್ಲಿ, ಪರ್ವತ ಕುಸಿಯುವಾಗ ಭಗವಂತ ಕೂರ್ಮ ರೂಪದಲ್ಲಿ ಬಂದು ಅದನ್ನು ಮುಳುಗದಂತೆ ಬೆನ್ನ ಮೇಲಿನಿಂದ ಎತ್ತಿ ಹಿಡಿದ ಕಥೆ, ಸಮಗ್ರ ಭೂಮಂಡಲವನ್ನು ಕೂರ್ಮರೂಪಿ ಭಗವಂತ ಎತ್ತಿ ಹಿಡಿದಿದ್ದಾನೆ ಎಂಬ ಕಥೆ ಪುರಾಣಗಳಲ್ಲಿದೆ. ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಕೂರ್ಮ ದೇವಸ್ಥಾನವಿದ್ದು, ಇಲ್ಲಿ ಮಧ್ವಾಚಾರ್ಯರ ಶಿಷ್ಯ ಶ್ರೀನರಹರಿತೀರ್ಥರ ಉಲ್ಲೇಖವೂ ಇದೆ. ಶಾಸನವೂ ಇದೆ. 12 ವರ್ಷಗಳಿಗೊಮ್ಮೆ ಮಧ್ವ ಸರೋವರದಲ್ಲಿ ಗಂಗೆ ಉದ್ಭವವಾಗುತ್ತದೆ ಎಂದು “ಮಧ್ವವಿಜಯ’ ಗ್ರಂಥದಲ್ಲಿ ಉಲ್ಲೇಖವಿದ್ದು ಇಂತಹ ವಿಶಿಷ್ಟ ಸರೋವರದಲ್ಲಿ ವಿಶಿಷ್ಟ ಆಮೆ ಕಂಡುಬಂದಿದೆ.

“ ಮೀನುಗಳಿಗೆ ಹಾಕಿದಂತೆ ನೀರಿಗೆ ಆಹಾರವನ್ನು ಎಸೆದರೆ ಈ ಆಮೆ ತಿನ್ನುವುದಿಲ್ಲ. ನಾನು ಒಂದು ಬಾರಿ ಕೈಯಲ್ಲಿ ತಿನ್ನಿಸಿದೆ. ಅನಂತರ ಅಭ್ಯಾಸವಾಗಿ ನಿರಂತರವಾಗಿ ಕೈಯಲ್ಲಿ ತಿನ್ನಿಸುತ್ತಿದ್ದೇನೆ. ಮೂರ್‍ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ ’ಎನ್ನುತ್ತಾರೆ ಶ್ರೀಕೃಷ್ಣಮಠದ ಸಿಬ್ಬಂದಿ ಶ್ರೀನಿವಾಸ ಭಟ್‌.

Advertisement

Udayavani is now on Telegram. Click here to join our channel and stay updated with the latest news.

Next