ಬಾಲಕನಾಗಿದ್ದಾಗ ಪುನೀತ್ ರಾಜಕುಮಾರ್ ಹಾಡಿದ್ದ “ಬಾನದಾರಿಯಲಿ…’ ಹಾಡು ಇಂದಿಗೂ ಅದೆಷ್ಟೋ ಜನರಿಗೆ ಫೇವರೆಟ್. ಅದೇ ಹಾಡು ಈ ಪುಟ್ಟ ಮಗು ಲೀಲಾ ಮತ್ತು ಅವಳ ತಂದೆಗೂ ಅಚ್ಚುಮೆಚ್ಚು. “ಬಾನದಾರಿಯಲಿ…’ ಹಾಡನ್ನು ಗುನುಗುತ್ತಲೇ ಆಫ್ರಿಕಾ ಕಾಡಿನಲ್ಲಿ ಸ್ವಚ್ಛಂದವಾಗಿ ಆಡಿಕೊಂಡಿರುವ ಪ್ರಾಣಿಗಳನ್ನು ನೋಡಬೇಕೆಂಬ ತನ್ನ ಆಸೆಯನ್ನು ಅಪ್ಪನ ಮುಂದಿಡುವ ಲೀಲಾ, ನಿಧಾನವಾಗಿ ನಿದ್ದೆಗೆ ಜಾರುತ್ತಾಳೆ. ಹಾಗೆಯೇ ನಿಧಾನವಾಗಿ “ಬಾನದಾರಿಯಲಿ…’ ಹಾಡಿನ ಜೊತೆಜೊತೆಯಲ್ಲೇ ಸಿನಿಮಾದ ಕಥೆ ಕೂಡ ತೆರೆದುಕೊಳ್ಳುತ್ತದೆ. ಪುಟ್ಟ ಹುಡುಗಿ ಲೀಲಾ ಮನಸ್ಸಿನಲ್ಲಿದ್ದ ಆಸೆ ದೊಡ್ಡವಳಾದ ಮೇಲೆ ಈಡೇರುವುದು ಹೇಗೆ? ಯಾವಾಗ? ಎಲ್ಲಿ? ಎಂಬುದೇ ಈ ವಾರ ತೆರೆಗೆ ಬಂದಿರುವ “ಬಾನದಾರಿಯಲಿ…’ ಸಿನಿಮಾದ ಕಥೆಯ ಒಂದು ಎಳೆ.
ಇವಿಷ್ಟು ಹೇಳಿದ ಮೇಲೆ ಇದು ಅಪ್ಪ-ಮಗಳ ಸೆಂಟಿಮೆಂಟ್ ಸ್ಟೋರಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂಥದ್ದೊಂದು ಸೆಂಟಿಮೆಂಟ್ ಸ್ಟೋರಿ ಜೊತೆಗೊಂದು ಲವ್ ಸ್ಟೋರಿಯನ್ನು ಸೇರಿಸಿ “ಬಾನದಾರಿಯಲ್ಲಿ…’ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಗಣೇಶ್ ಮತ್ತು ಪ್ರೀತಂ ಗುಬ್ಬಿ ಸಿನಿಮಾ ಅಂದ್ರೆ ಎಮೋಶನ್ಸ್ ಕಡ್ಡಾಯ ಎಂಬ “ಸಿದ್ಧ್’ ಸೂತ್ರವಿರುವುದರಿಂದ, ಮೊದಲ ದೃಶ್ಯದಿಂದಲೇ “ಬಾನದಾರಿಯಲಿ…’ ಎಮೋಶನಲ್ ಜರ್ನಿ “ಲೀಲಾ’ಜಾಲವಾಗಿ ಶುರುವಾಗುತ್ತದೆ.
ಒಂದೆಡೆ ಲೀಲಾ (ರುಕ್ಮಿಣಿ ವಸಂತ್) ದೊಡ್ಡವಳಾದ ಮೇಲೆ ಸ್ವಿಮ್ಮಿಂಗ್ ಕೋಚ್ ಆಗುತ್ತಾಳೆ. ಮತ್ತೂಂದೆಡೆ ಸಿದ್ಧ್ (ಗಣೇಶ್) ಕ್ರಿಕೆಟರ್ ಆಗುತ್ತಾನೆ. ಒಮ್ಮೆ ಇಬ್ಬರೂ ಮುಖಾಮುಖೀಯಾಗುತ್ತಾರೆ. ಇವನಿಗೆ ಮೊದಲ ನೋಟದಲ್ಲೇ ಅವಳ ಮೇಲೆ ಪ್ರೀತಿಯಾಗುತ್ತದೆ. ಅಪ್ಪನೇ ಸರ್ವಸ್ವ ಅಪ್ಪ ಒಪ್ಪಿದರೆ ಮಾತ್ರ ಮದುವೆ ಎಂಬ ಹುಡುಗಿ ಲೀಲಾ ಹಿಂದೆ ಬೀಳುವ ಸಿದ್ಧ್, ಕೊನೆಗೂ ಅವಳಿಂದ ತಮ್ಮ ಪ್ರೀತಿಗೆ ಷರತ್ತುಬದ್ಧ ಅನುಮತಿ ಪಡೆದುಕೊಳ್ಳುತ್ತಾನೆ. ಎಲ್ಲವೂ ಸರಳ ರೇಖೆಯಲ್ಲಿ ಚಲಿಸುತ್ತಿದೆ ಎನ್ನುವಷ್ಟರಲ್ಲಿ, ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತದೆ. ಆಮೇಲೆ ನಡೆಯೋದೆಲ್ಲ ಹೈ ಡ್ರಾಮಾ… ಪ್ರೇಕ್ಷಕರ ಮನಮುಟ್ಟುವಂತೆ ಹೇಳಬಹುದಾದ, ಒಂದು ಸರಳ ಕಥೆಯನ್ನು ಆದಷ್ಟು ಸಂಕೀರ್ಣವಾಗಿಸಿ ಬೆಂಗಳೂರಿನಿಂದ ಮಂಗಳೂರು, ಅಲ್ಲಿಂದ ಆಫ್ರಿಕಾದವರೆಗೂ ತೆಗೆದುಕೊಂಡು ಹೋಗಿರುವುದು ನಿರ್ದೇಶಕರ “ಹೆಗ್ಗಳಿಕೆ’.
ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ಕ್ರಿಕೆಟರ್ ಆಗಿ ಗಣೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರುಕ್ಮಿಣಿ ವಸಂತ್ ತೆರೆಮೇಲೆ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಗ್ರೀಷ್ಮಾ ನಾಣಯ್ಯ ತಮ್ಮ ಲವಲವಿಕೆಯಿಂದ ಪಾತ್ರಕ್ಕೆ ಒಂದಷ್ಟು ಕಳೆ ತುಂಬಿದ್ದಾರೆ. ರಂಗಾಯಣ ರಘು ಸುದೀರ್ಘ ಪ್ರಯಾಣದಲ್ಲಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ಹೊತ್ತು ಸಾಗಿದ್ದಾರೆ.
ತಾಂತ್ರಿಕವಾಗಿ ಛಾಯಾಗ್ರಹಣ, ಸಂಕಲನ, ಸುಂದರ ಲೊಕೇಶನ್ಸ್ “ಬಾನದಾರಿಯಲಿ…’ ಕಾಣಬಹುದಾದ ದೊಡ್ಡ ಹೈಲೈಟ್ಸ್. ಅರ್ಜುನ್ ಜನ್ಯ ಸಂಗೀತವಿದ್ದರೂ, ಹಾಡುಗಳು ಗುನುಗುಡುವಂತಿಲ್ಲ. ಗಣೇಶ್, ಪ್ರೀತಂ ಗುಬ್ಬಿ ಕಾಂಬಿನೇಶನ್‌ನ ಮೂರು ಸಿನಿಮಾಗಳ ಜೊತೆಗೆ ಮತ್ತೂಂದು ಎಂಬಂತೆ ಸೇರ್ಪಡೆಯಾಗಿರುವ “ಬಾನದಾರಿಯನ್ನು…’ ಒಮ್ಮೆ ನೋಡಿಬರಬಹುದು.
ಜಿ.ಎಸ್.ಕಾರ್ತಿಕ ಸುಧನ್