Advertisement
ಸುಮಾರು 9 ವರ್ಷಗಳ ಹಿಂದೆ ಕಾವೇರಿ ವಿವಾದದ ಸಂದರ್ಭದಲ್ಲಿ ನಟ ಸತ್ಯರಾಜ್ ಕನ್ನಡಿಗರನ್ನು ಅವಹೇಳನ ಮಾಡಿರುವ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯರಾಜ್ ಕನ್ನಡಿಗರ ಕ್ಷಮೆಯಾಚಿಸಬೇಕು, ಇಲ್ಲದಿದ್ದಲ್ಲಿ ಏಪ್ರಿಲ್ 28ರಂದು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬಿಡುಗಡೆಗೆ ಅವಕಾಶ ಕೊಡೋದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದವು.
Related Articles
Advertisement
ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಸತ್ಯರಾಜ್ ಫೇಸ್ ಬುಕ್, ಟ್ವೀಟರ್ ನಲ್ಲಿ ಕ್ಷಮೆ ಕೇಳಿರುವ ವಿಡಿಯೋ ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕಾವೇರಿ ಗಲಾಟೆಯ ಆವೇಶದಲ್ಲಿ ಆ ರೀತಿ ಹೇಳಿಕೆ ಕೊಟ್ಟಿದ್ದೇನೆ. ಇದು ನಾನು 9 ವರ್ಷಗಳ ಹಿಂದೆ ನೀಡಿರುವ ವಿಚಾರವನ್ನು ದೊಡ್ಡದು ಮಾಡಬೇಡಿ. ನಾನು ಕನ್ನಡ ವಿರೋಧಿಯಲ್ಲ. ದಯವಿಟ್ಟು ಬಾಹುಬಲಿ ಚಿತ್ರದ ಬಿಡುಗಡೆಗೆ ಕನ್ನಡಿಗರು ಅವಕಾಶ ಮಾಡಿಕೊಡಬೇಕು ಎಂದು ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಮನವಿ ಮಾಡಿಕೊಂಡಿದ್ದಾರೆ.
ಕಾವೇರಿ ವಿಚಾರದಲ್ಲಿ ನಾನು ಎಂದೆಂದಿಗೂ ತಮಿಳುನಾಡಿನ ರೈತರ ಪರವಾಗಿಯೇ ಇರುತ್ತೇನೆ. ನಾನು ನಟನಾಗಿ ಸಾಯುವುದಕ್ಕಿಂತ, ಒಬ್ಬ ತಮಿಳನಾಗಿ ಸಾಯಲು ಇಷ್ಟಪಡುತ್ತೇನೆ ಎಂದು ಸತ್ಯರಾಜ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಹುಬಲಿ 2 ಭವಿಷ್ಯ ಶನಿವಾರ ನಿರ್ಧಾರ: ವಾಟಾಳ್ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರನ್ನು ಅವಹೇಳನ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಬಾಹುಬಲಿ 2 ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಶನಿವಾರ ಬೆಳಗ್ಗೆ ಘೋಷಿಸುವುದಾಗಿ ಕನ್ನಡಪರ ಸಂಘಟನೆಯ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಸತ್ಯರಾಜ್ ವಿಡಿಯೋ ಹೇಳಿಕೆಯಲ್ಲಿ ಏನಿದೆ, ಏನು ಹೇಳಿದ್ದಾರೆ ಎಂಬುದನ್ನು ಪರಿಶೀಲಿಸಿ ಬಳಿಕ ಬಾಹುಬಲಿ 2 ಬಿಡುಗಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.