ಮೂಡಲಗಿ: ಇಂದಿನಿಂದ ನಡೆಯಬೇಕಿದ್ದ ಪದವಿ(ಕಲಾ ವಿಭಾಗ) ಪರೀಕ್ಷೆಗಳನ್ನು ಮಾ. 25 ರಿಂದ ಏ.11 ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷಾ ಕೇಂದ್ರದ ಬದಲಾವಣೆ ಕುರಿತಂತೆ ಎದ್ದಿರುವ ವಿವಾದವು ಇದೀಗ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ಬಗೆಹರಿದಿದ್ದು, ಪರೀಕ್ಷೆಯನ್ನು ಮೂಡಲಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ.
ಪಟ್ಟಣದ ಎಂಇಎಸ್ ಕಾಲೇಜಿನ ಕಲಾ ವಿಭಾಗದ ಪರೀಕ್ಷಾ ಕೇಂದ್ರವನ್ನು ನೆರೆಯ ರಾಯಬಾಗ ತಾಲೂಕಿನ ಹಾರೂಗೇರಿಯ ಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ನಿನ್ನೆ ಸೋಮವಾರದಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ವಿದ್ಯಾರ್ಥಿಗಳ ಭಾವನೆಗಳನ್ನು ಅರಿತು ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಉಪ ಕುಲಪತಿ ಎಂ. ರಾಮಚಂದ್ರೆಗೌಡರೊಂದಿಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಯಿಂದಾಗಿ ಪರೀಕ್ಷಾ ಕೇಂದ್ರದ ಸಮಸ್ಯೆ ಇತ್ಯರ್ಥವಾಗಿದ್ದು, ಹಾರೂಗೇರಿ ಕಾಲೇಜಿನ ಬದಲಾಗಿ ಮೂಡಲಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ಪರೀಕ್ಷೆಗಳು ಜರುಗಲಿವೆ.
ಇಂದು ಮಂಗಳವಾರ ಮತ್ತು ಬುಧವಾರದಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮಾ. 25 ರಿಂದ ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲು ಉಪ ಕುಲಪತಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮೂಡಲಗಿ ಎಂಇಎಸ್ ಕಾಲೇಜಿನಲ್ಲಿ ಓದುತ್ತಿರುವ 481 ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂಡಲಗಿಯಲ್ಲಿಯೇ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ಡೆಸ್ಕ್ ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಿಗೆ ಸಿ.ಸಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ಅರಭಾವಿ ಶಾಸಕರ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ತಹಶೀಲ್ದಾರ ಡಿ.ಜೆ. ಮಹಾತ್, ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ರವೀಂದ್ರ ಸೋನವಾಲ್ಕರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್.ಡಿ. ಗಾಣಿಗೇರ, ಎಂಇಎಸ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರಿಮಠ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಬೆಳಗಾವಿ ಎಬಿವಿಪಿ ವಿಭಾಗದ ಸಹಸಂಚಾಲಕ ಮಲ್ಲಿಕಾರ್ಜುನ ಮುಕ್ಕುಂದ, ಬಸವರಾಜ ಜೋಡಟ್ಟಿ ಹಾಗೂ ವಿವಿಧ ಕಾಲೇಜುಗಳ ಪ್ರಮುಖರು ಉಪಸ್ಥಿತರಿದ್ದರು.