Advertisement

ಬಿ ಕತೆ

06:05 AM Sep 24, 2017 | Harsha Rao |

ಪ್ರಚಂಡ ವಿದ್ವಾಂಸ “ಬಿ’ ಅವರಿಗೆ ತುಂಬಾ ಮಕ್ಕಳು. 
ಅವರಲ್ಲಿ ಮೊದಲನೆಯವರೇ “ಸಿ’.
ಇತ್ತೀಚೆಗಷ್ಟೇ “ಸಿ’ ತಮ್ಮ ಎÇÉಾ ಕೆಲಸವನ್ನೂ ತೊರೆದು ಅವರ ಕೋಣೆಯೊಳಗೆ ಬಾಗಿಲು ಹಾಕಿ, ಅಗುಳಿಯನ್ನೂ ಹಾಕಿಕೊಂಡು ಕುಳಿತಿರುವ ಸುದ್ದಿ ಬಯಲಾದದ್ದು.

Advertisement

ಅವರು ಕೋಣೆಯೊಳಗೆ ಕುಳಿತಿರುವುದನ್ನು ಮೊತ್ತ ಮೊದಲ ಬಾರಿಗೆ ಬಹಿರಂಗಪಡಿಸಿದ್ದು ಲೋಕಲ್‌ ಚಾನಲೇ ಇದ್ದರೂ ಏಷ್ಯಾ ಖಂಡದ ಉದ್ದಕ್ಕೂ ಬಿತ್ತಿದ್ದು ಅದೇ ಫಾರಿನ್‌ ಚಾನಲ್ಲು. ದೆಹಲಿಯ ತಮಿಳ್ನಾಡು ಭವನದಲ್ಲಿ ಪಚ್ಚೆ ಬಾಳೆಲೆಯಲ್ಲಿ ಸೌತ್‌ ಇಂಡಿಯನ್‌ ಊಟವನ್ನು ಕಲಸಿ ಕಲಸಿ ಉಣ್ಣುತ್ತ ಇದ್ದ ಅವರ ಮಗಳು “ವೈ’ ಈ ಕಾರ್ಯಕ್ರಮದ ಮೇಲೆ ಅದು ಹೇಗೋ ನೋಡಿ ಅವಾಕ್ಕಾದಳು.
ತಮಿಳ್ನಾಡಿನ ಸಚಿವಾಲಯದಲ್ಲಿ ದೊಡ್ಡ ಅಧಿಕಾರಿಣಿಯಾಗಿರುವ “ವೈ’ ಮೇಡಂ ಸರಕಾರದ ಕೆಲಸ ದೇವರ ಕೆಲಸ ಎಂದೇ ನಂಬಿದಾಕೆ. ಹಾಗೆಂಬ ಕೆಲಸಕ್ಕೆ ಮಿನಿಷ್ಟ್ರು ತಂಗವೇಲು ಅವರ ಜೊತೆ ಬಂದಿದ್ದವಳಿಗೆ ಎದೆ ಒಡೆದೇ ಹೋಗುವ ಹಾಗಾಗಿತ್ತು.

ಆ ಚಾನೆಲ್‌ನಲ್ಲಿ ಅವಳ ಆ ಹೆಂಚಿನ ಮಾಡಿನ ಸುತ್ತುಪೌಳಿಯ ಮನೆ, ಎದುರಿನ ಹುಣಿಸೆ ಮರ, ಕೆಂಪು ದಾಸವಾಳದ ಗಿಡ, ಪುರೋಹಿತ ಮಾವ ಬೈರಾಸು ಸುತ್ತಿಕೊಂಡು ಸರಸರನೇ ಏರಿ ಚೀಲ ತುಂಬಾ ಗಂಡು ಪರಿಮಳದ ಆ ಕೆಂಡಸಂಪಗೆ ಹೂವು ಇಳಿಸಿ ತರುತ್ತಿದ್ದ ಕರಾಚಿ ಸಂಪಗೆ ಮರ, ಮಾಪಲದ ಗಿಡ, ಅಲಸಂಡೆ ಸಾಲು, ತುಳಸೀ ಕಟ್ಟೆ… ಅರೆರೆ… ನೋಡುತ್ತ ನೋಡುತ್ತ ಮನೆಯೊಳಗಿನ ಕೆಂಪು ಸಾರಣೆ, ಬೀಟಿ ಮರದ ಕುರ್ಚಿ, ಜೋಡುನಳಿಗೆಯ ಬೆಡಿ…

ಆ ಫಾರಿನ್‌ ಚಾನೆಲ್‌ನ ವರದಿಗಾರ ಅದನೆಲ್ಲ ತೋರಿಸುತ್ತ ಯಾವುದೋ ನಿಗೂಢವನ್ನೇ ಹರಿದು ಹಾಕುವವನಂತೆ ಮಾಡುತ್ತಿದ್ದ.
“ವೈ’ ಮೇಡಂ ಅರ್ಧ ಊಟದಿಂದಲೇ ಎದ್ದಳು. ಸೀದಾ ರೂಮಿಗೆ ಹೋಗಿ ಫೋನು ಹಾಯಿಸಿದಳು. ಅವಳ ಅಪ್ಪ  ಪ್ರಚಂಡ ವಿದ್ವಾಂಸ “ಬಿ’ ಅವರೇ ಫೋನು ಎತ್ತಿಕೊಂಡರು.

“”ಏನಪ್ಪಾ ಈ ಬಾರಿ ಬೆಂಡೆಸಾಲು ಮಾಡೇ ಇಲ್ಲವಾ?” ಎಂದಳು “ವೈ’.
“”ಎಂತ ಮಾಡುವುದಾ? ಕೆಲಸಕ್ಕೆ ಜನ ಬೇಕÇÉಾ?” ಎಂದರು ಅತ್ತಲಾಗಿಂದ “ಬಿ’ ಯವರು.
“”ಬೊಮ್ಮಣ್ಣ, ಚನಿಯ, ಬ್ಯಾರ್ತಿ ಎಲ್ಲ ಏನಾದರು?” “ವೈ’ ಪ್ರಶ್ನೆ.
“”ಬೊಮ್ಮನೂ ಇÇÉಾ ಬ್ರಹ್ಮನೂ ಇÇÉಾ…” ಎಂದರು “ಬಿ’.
“”ಯಾಕೆ?”

Advertisement

“”ಎಲ್ಲ  ಈಗ ಅನುಕೂಲವಾಗಿ¨ªಾರೆ. ಯೋಜನೆ, ಗುರ್ಪು ಅಂತ ಅವರೆಲ್ಲ ಈಗ ಅನುಕೂಲವಾಗಿ¨ªಾರೆ. ಇಲ್ಲೀಂತ ಅಲ್ಲ ಎÇÉಾ ಮನೆಯದ್ದೂ ಇದೇ ಕತೆ” ಎಂದರು “ಬಿ’, ಮುಂದುವರಿಸುತ್ತ, “”ಮತ್ತೆ ನಿನ್ನ ಅಣ್ಣ “ಸಿ’ ಯ ಅವಸ್ಥೆ ಗೊತ್ತುಂಟಲ್ಲ….” ಎಂದು ಏನೋ ಹೇಳಬೇಕು ಎಂದು ಶುರುಮಾಡಿ ಏನೂ ಹೇಳಲಾಗದೇ ಉಳಿದರು.
“ವೈ’ ಏನೂ ಹೇಳಲಿಲ್ಲ. ಫೋನು ಕಟ್‌ ಮಾಡಿದಳು.

ಅವಳು ಅದೇ ದಿನ ಮಿನಿಷ್ಟ್ರು ತಂಗವೇಲು ಅವರ ಅನುಮತಿ ಪಡೆದುಕೊಂಡು ಸೀದಾ ಮುಂಬಯಿ ಮಾರ್ಗವಾಗಿ ಮಂಗಳೂರಿಗೆ ವಿಮಾನ ಟಿಕೇಟು ಮಾಡಿಸಿಕೊಂಡಳು.

.
.
“ಸಿ’ ಅವರು ಏಕಾಏಕಿ ಹೀಗೇ ಮನೆಯೊಳಗೆ ಕದ ಹಾಕಿ ಕುಳಿತುಬಿಡಲು ಯಾರು, ಏನು ಕಾರಣ ಎಂಬುದು ಕತೆಗಾರನಾದ ನನ್ನ ಪ್ರಕಾರ ಅಂಥ ದೊಡ್ಡ ವಿಷಯವೇ ಅಲ್ಲ. ಅದು ಅವರ ಇಷ್ಟ. ಆದರೆ, ಹಾಗೇ ಕುಳಿತುಕೊಳ್ಳುವ ಮೊದಲು ಮನೆಯವರಿಗೆ ಒಂದು ಮಾತಾದರೂ ಹೇಳಬೇಕಿತ್ತು ಎಂದು ಅನೇಕರು ಹೇಳುತ್ತಿರುವುದಕ್ಕೆ ಈ ಕತೆಗಾರನ ಸಹಮತವೂ ಇದೆ.

“ಸಿ’ ಎಂಬ ಈ ಪ್ರಾಣಿ ಬಹಳ ವರ್ಷಗಳ ಹಿಂದೆ ಒಮ್ಮೆ ಕುಮಾರಪರ್ವತಕ್ಕೆ ಒಬ್ಬನೇ ಹೋಗಿ ಅದೇನೋ ತಪಸ್ಸು ಮಾಡುತ್ತೇನೆ ಎಂದು ಕುಳಿತಿದ್ದ. ಒಂದು ವಾರ ಅಲ್ಲಿ ಇದ್ದು ಕೆಳಗೆ ಬಂದವನು ಆಮೇಲೆ ನಮ್ಮ ಕಾಮತರ ಆಸ್ಪತ್ರೆಗೆ ಸೇರಬೇಕಾಯಿತು.
ಮೊದಲಿಂದಲೇ ಹೀಗೆ ಈ “ಸಿ’.

ಅವನಿಗೆ ಯಾರೂ ಮಾಡದ್ದನ್ನು ತಾನು ಮಾಡಬೇಕು ಎಂಬ ಒಂದು ಚಟ. ಅದಕ್ಕಾಗಿ ಆತ ಹಲವಾರು ಬಾರಿ ಊರೆಲ್ಲ ಸುದ್ದಿಯಾಗಿದ್ದ.
 ತಪ್ಪೇನು ಎಂದು ಅವನ ಫಾದರ್‌ ಪ್ರಚಂಡ ವಿದ್ವಾಂಸ “ಬಿ’ ಯವರು ಅನೇಕ ಸಲ ತಮ್ಮೊಳಗೇ ಹೇಳಿಕೊಂಡಿದ್ದರು.
ಎಲ್ಲರೂ ಅಡಕೆಗೆ ರೇಟು ಆಯಿತು ಎಂದು ತೋಟ ಮಾಡುತ್ತಿದ್ದರೆ, “ಸಿ’ ಮಾತ್ರ ಭತ್ತದ ಗ¨ªೆ ಮಾಡುವುದು ಎಂದು ನೆಕ್ಕರೆ ಮಾವಿನ ದೊಡ್ಡ ಮರವನ್ನೇ ಕಡಿಸಿ ಬುಲ್ಡೋಜರು ತಂದು ತಟ್ಟು ಮಾಡಿಸಿದ. ಗ¨ªೆಯೂ ಆಯಿತು. ಆದರೆ ಯಾವ ಬೀಜ ಎಲ್ಲಿಂದ ತಂದರೂ ಬೆಳೆ ಮಾತ್ರ ಬರ್ಕತ್ತಾಗಲಿಲ್ಲ.

ಊರವರೆÇÉಾ “ಬರೇ ಜಗುಡಾ’ ಎಂದು ಗೇಲಿ ಮಾಡಿದಾಗ ಪ್ರಚಂಡ ವಿದ್ವಾಂಸ “ಬಿ’ ಯವರೇ “”ಬೇಕಯ್ನಾ ಹಾಗೇ…” ಎಂದು ಮಗನ ಪರವಾಗಿಯೇ ವಾದ ಮಾಡಿದ್ದರು.
ಇದು ಒಂದು ಉದಾಹರಣೆ ಮಾತ್ರಾ.

ಯಾಕೆ ಗೊತ್ತಾ, ಈ ಜಗುಡನ ಅಸಂಬದ್ಧ ಗಳನ್ನೆÇÉಾ ಹೇಳುತ್ತಾ ಹೋದರೆ ನೀವು ಭಯಂಕರ ಬೋರಾಗಿ ಕತೆ ಓದದೇ ಇರಬಹುದು ಎಂಬ ಹೆದರಿಕೆ ಈ ಕತೆಗಾರನಿಗೆ.
.
.
ಇದು ಹೇಗಾಯ್ತು ಗೊತ್ತಿಲ್ಲ.
“ಸಿ’ ಯ ಹೆಂಡತಿ ಎರಡನೆಯ ಹೆರಿಗೆಗೆ ಸಿದ್ಧಳಾಗುತ್ತಿರುವಾಗಲೇ “ಸಿ’ ಬೆಳಗ್ಗೆ ಆ ದಿನ ಎದ್ದವನು ಯಾಕೋ ಎÇÉಾ ಕದಡಿದಂತಿದೆ, ಜಗತ್ತು ತುಂಬಾ ಬೇರೆಯೇ ಇದೆ ಎಂದು ಹೇಳಿದ್ದನಂತೆ.
ಅವನ ಹೆಂಡತಿ (ಅವಳಿಗೆ ಅಂಥ ಪಾತ್ರ ಇಲ್ಲಿ ಇರದ ಕಾರಣ ಹೆಸರು ಇಟ್ಟಿಲ್ಲ) ಅದನ್ನು ಕೇಳಿ, “”ಏನಾಗಿದೆ ನಿಮಗೆ, ನಿನ್ನೆ ರಾತ್ರಿ ತನಕ ಚೆನ್ನಾಗಿಯೇ ಇದ್ದೀರಲ್ಲ?” ಎಂದು ತಮಾಷೆ ಮಾಡಿದಳಂತೆ.

ಅದಕ್ಕೆ ಎಂದಿನಂತೆ ಕೋಪವಾಗಲಿ, ಹಾಸ್ಯವಾಗಲಿ ಮಾಡದ “ಸಿ’ “”ನೀನು ಇನ್ನು ಏಳು ಮಕ್ಕಳನ್ನು ಹೆರಬೇಕು” ಎಂದು ಹೇಳಿದನಂತೆ.

ಯಾಕೋ ಈ ಅಸಾಮಿ ರಾಂಗ್‌ ಆಗಿರುವ ಚಹರೆ  ಮೊದಲಾಗಿಯೇ ಕಂಡ ಅವಳು ಮರುಮಾತಾಡಲಿಲ್ಲವಂತೆ.
ಆ ದಿನ ಆ ಬೆಳಗ್ಗೆ ಎಂದಿನಂತೆ ಹಟ್ಟಿಯ ಕೆಲಸಕ್ಕೂ ಹೋಗದೇ, ಬಚ್ಚಲೂ ಕಾಯಿಸದೇ, ಆಮೇಲೆ ಮುಕ್ಕಾಲು ಲೀಟರು ಕಾಫಿಯನ್ನು ಕುಡಿಯದೇ, ಒಂಬತ್ತು ದೋಸೆಯನ್ನೂ ಬೆಳ್ಳುಳ್ಳಿ ಚಟ್ನಿ ಮಾಡಿದ್ದರೂ ಮುಟ್ಟದೇ, ಸೀದಾ ಮೇಲಿನ ಮಾಳಿಗೆಯ ಅಡಕೆ ಪತ್ತಾಯದ ನೆಕ್ಸ್ಟ್ ಕೋಣೆಯೊಳಗೆ ಸೇರಿಯೇ ಬಿಟ್ಟನಂತೆ.

ಇಪ್ಪತ್ತು ದಿನಗಳಾಗಿವೆ. ಏನು ಮಾಡಿದರೂ ಬಾಗಿಲು ತೆರೆಯುತ್ತಿಲ್ಲ. 
ಯಾರು ಕರೆದರೂ ಮಾತಿಲ್ಲ. ಆದರೆ ಅವನ ಪುಟ್ಟ ಮಗಳಿದ್ದಾಳಲ್ಲ “ಎಂ’,  “ಅಪ್ಪಾ’ ಎಂದರೆ, ಒಳಗಿಂದ “”ಹಾಗೆ ಕರೆಯಬಾರದು ಕಂದಾ ದೇವರೇ” ಎಂದು ದನಿಗೊಳ್ಳಬೇಕು ಎಂದು ಹೇಳುತ್ತಿದ್ದ.

“ಸಿ’ ಹೀಗೆ ಕುಳಿತ ಮೂರೇ ದಿನಕ್ಕೆ ತೋಟದ ಕೆಲಸದ ಆಳುಗಳೆÇÉಾ ಕೆಲಸ ಮಾಡೇವು ಎಂದು ಹೊರಟೇ ಹೋಗಿದ್ದರು. “” “ಸಿ’ ಮೇಲೆ ಯಾವುದೋ ಬ್ರಹ್ಮರಕ್ಕಸ ಆವಾಹನೆ ಆಗಿದೆ ಮತ್ತು ಅದರಿಂದ ನಮಗ್ಯಾಕೆ ತೊಂದರೆ ಬರಬೇಕು” ಎಂದು ಅವರು ಹೇಳಿದರು ಎಂದು ಸುದ್ದಿ.

ಆದರೆ, ನಿಜವಾಗಿಯೂ ಅವರೂ ಈ ಮನೆಯಿಂದ ಹೊರಡಲು ಕಾರಣ ಹುಡುಕುತ್ತಿದ್ದರು ಎಂಬುದೂ ಬೇರೆಯೇ ಸಂಗತಿ.
ಹತ್ತನೇ ದಿನಕ್ಕೆ ನೆರೆಯವರೆಲ್ಲ ಈ ಕುರಿತು ಪೊಲೀಸ್‌ ಕಂಪ್ಲೇಂಟು ಕೊಡುವುದೇ ಉತ್ತಮ ಎಂದು ಉಚಿತ ಸಲಹೆ ನೀಡಿದರು. ಊರಿನ ಕೆಲವು ಗಟ್ಟಿ ಜವ್ವನಿಗರು ಬಾಗಿಲು ಮುರಿದು “ಸಿ’ ಯನ್ನು ಹೊರಗೆ ತರಲು ಮುಂದಾದರು.
ಈ “ಸಿ’ ಎಂಬ ಅಸಾಮಿ ಅದು ಹೇಗೆ ನೀರು ಕೂಡ ಇಲ್ಲದೇ ಹೀಗೆ ಕತ್ತಲು ಕೋಣೆಯಲ್ಲಿ ಕುಳಿತಿ¨ªಾನೆ ಎಂದು ನಿಮ್ಮಂತೆ ಹಲವರೇನು, ಎಲ್ಲರೂ ಆಶ್ಚರ್ಯಪಟ್ಟರು.

ಆಗಲೇ ನಮ್ಮ ಕಿಟ್ಟಣ್ಣನ ಮಗ ಇ¨ªಾನಲ್ಲ, ಆ ದಪ್ಪ ಮೀಸೆಯ ಗೋಪಾಲ, ಅವನ ಪೇಪರಲ್ಲಿ ಈ ಅವಧೂತನ ಬಗ್ಗೆ ಮೊದಲಾಗಿ ಬರೆದದ್ದು ಮತ್ತು ಅದು ಅವನ ಪೇಪರಲ್ಲಿ ಫ್ರಂಟು ಪೇಜಲ್ಲಿ ಬಂದದ್ದು.
ಆಮೇಲೆ ಅದು ದೊಡ್ಡ ಸುದ್ದಿಯಾಯಿತು. ಉಸ್ತುವಾರಿ ಸಚಿವರೇ ಅಲ್ಲಿಗೆ ಬಂದು ಹಾಕಿದ ಬಾಗಿಲಿನ ಎದುರು ಕೈಮುಗಿದು ಹೋದ ಮೇಲಂತೂ ಪ್ರಚಂಡ ವಿದ್ವಾಂಸ “ಬಿ’ ಯವರ ಮನೆ ದೊಡ್ಡ ಯಾತ್ರಾ ಸ್ಥಳವಾಗುವ ಸೂಚನೆ ಕಾಣತೊಡಗಿತು.
ಆದರೆ ಹಾಗಾಗಲಿಲ್ಲ.

“ಸಿ’ ಮುಂದಿನ ಕಾರ್ತಿಕ ಹುಣ್ಣಿಮೆಗೆ ತಾನು ಅವತರಿಸುವುದಾಗಿ ಹೇಳಿ¨ªಾನೆ ಎಂದು ವಿಮಾನದಲ್ಲಿ ದೆಹಲಿಯಿಂದ ಸೀದಾ ಬಂದ ಅವನ ಅಕ್ಕ “ವೈ’ ಪ್ರಕಟಿಸಿದ್ದೂ ಅಲ್ಲದೇ  ಆ ಕುರಿತು ಅಲ್ಲಿದ್ದ ಎಲ್ಲ ಲೋಕಲ್‌ ಚಾನೆಲ್‌ಗ‌ಳಿಗೂ ಇಂಟರ್‌ವ್ಯೂ ಕೊಟ್ಟಳು.
ಅವಳು ಬಂದವರಲೆಲ್ಲ ಅದನ್ನೇ ಹೇಳುತ್ತಿದ್ದಳು. 

ಆದರೆ, ಅವಳು ಮನೆಯಲ್ಲಿದ್ದ ನಾಲ್ಕೂ ದಿನ “ಸಿ’ ಯನ್ನು ಮಾತನಾಡಿಸಲು ಮುಂದಾಗಿ ವಿಫ‌ಲಳಾದಳು.
ಐದನೆಯ ದಿನ ಹೊರಡುವ ದಿನ ಬೆಳ್ಳಂಬೆಳಗ್ಗೆ “ವೈ’ ಸೀದಾ ಎದ್ದು ಪ್ರಚಂಡ ವಿದ್ವಾಂಸ “ಬಿ’ ಅಂದರೆ ಅವಳ ಅಪ್ಪನ ಜೊತೆ ಮತ್ತೆ ಆ ಮುಚ್ಚಿದ ಕೋಣೆ ಎದುರು ನಿಂತಳು. ಪಕ್ಕದಲ್ಲಿ ಆ ಪುಟ್ಟ ಮಗು “ಎಂ’.
ಮೂವರೂ ಜೋರಾಗಿ ಬಾಗಿಲು ಬಡಿದರು.
ಒಳಗಿಂದ ಸುದ್ದಿಯಿಲ್ಲ.
“ವೈ’ ಮೇಡಂ, “”ಸೀ ಸೀ ಸೀ” ಎಂದು ಮೂರು ಬಾರಿ ಕೂಗಿದಳು.
ಮಾತಿಲ್ಲ.

ಪ್ರಚಂಡ ವಿದ್ವಾಂಸ “ಬಿ’ ಅವರೂ “”ಸೀ ಸೀ ಸೀ” ಎಂದು ಕರೆದರು.
ಮೌನ.

ಆಮೇಲೆ ಆ ಪುಟ್ಟ ಮಗು “ಎಂ’, “”ದೇವರೇ ದೇವರೇ ದೇವರೇ” ಎಂದಿತು.
ಆಗ ಅದೆಂಥ ಅದ್ಭುತ!
ಬಾಗಿಲು ತೆರೆಯಿತು.
“ಸೀ…’
“ಸೀ…’
ಫಾರಿನ್‌ ಚಾನೆಲ್ಲಿನವರು ಅಥವಾ ಲೋಕಲ್‌ ಚಾನೆಲ್ಲಿನವರು ಈಗ ಇದ್ದಿದ್ದರೆ ಲೈವ್‌ ತೋರಿಸುತ್ತಿದ್ದರು ಎಂದು “ವೈ’ ಮೇಡಂ ಅಂದುಕೊಂಡರು.
ಆದರೆ ಆ ಹೊತ್ತಿಗೆ ಅಲ್ಲಿ ಯಾರೂ ಇರಲಿಲ್ಲ.

“ಸಿ’ ಹೊರಗೆ ಕಂಡರು.
ಅವರು ಎಂದಿನಂತೆ ಇದ್ದರು.
ಮತ್ತೇನಾಯಿತು ಎಂದು ಕೇಳಬಾರದು.
“ವೈ’ ಮೇಡಂ ಮತ್ತು ಪ್ರಚಂಡ ವಿದ್ವಾಂಸ “ಬಿ’ ಯವರೊಂದಿಗೆ ಅವಧೂತ “ಸಿ’ ಆ ಹಾಡು‌ಹಗಲೇ ಎಲ್ಲಿಗೋ ಹೋದರು.
ಎಲ್ಲಿಗೆ ಎಂದು ಯಾರಿಗೂ ಗೊತ್ತಿಲ್ಲ.  ಪುಟ್ಟ ಮಗು “ಎಂ’ ಏನೂ ಹೇಳುತ್ತಿಲ್ಲ.
ದೇವರನ್ನು ನೋಡಿದ ಮೇಲೆ ಅದು ಮಾತೇ ಆಡುತ್ತಿಲ್ಲ.
ಜಗತ್ತು ಮಾತ್ರ ಏನೂ ಆಗಿಲ್ಲ. ಹಾಗೇ ಇದೆ.

– ಗೋಪಾಲಕೃಷ್ಣ ಕುಂಟಿನಿ 

Advertisement

Udayavani is now on Telegram. Click here to join our channel and stay updated with the latest news.

Next