Advertisement

ಪಿಎಂ ಆವಾಸ್ ಯೋಜನೆ, ಪಿಎಂ ಸ್ವನಿಧಿ ಯೋಜನೆ: ತ್ವರಿತ ಸಾಲ ವಿತರಣೆಗೆ ಸಿಎಂ ಸೂಚನೆ

02:04 PM Feb 11, 2021 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳಡಿ ಬ್ಯಾಂಕುಗಳು ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ಸಾಲ ವಿತರಣೆ ಮಾಡಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದರು.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಗಳ ಪ್ರಗತಿ ಕುರಿತು ಬ್ಯಾಂಕರುಗಳೊಂದಿಗೆ ಚರ್ಚಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿಯವರು ಬಡವರಿಗಾಗಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ ಯೋಜನೆಗಳು. ಇವುಗಳ ಅನುಷ್ಠಾನಕ್ಕೆ ಬ್ಯಾಂಕರುಗಳು ಆದ್ಯತೆ ನೀಡಬೇಕು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಎರಡೂ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಈ ಯೋಜನೆಗಳಡಿ ಸಾಲ ಮಂಜೂರಾತಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಆದ್ಯ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ:ಸಮುದಾಯಗಳ ಮೀಸಲು ಬೇಡಿಕೆ ಸರ್ಕಾರ ಕಾನೂನಾತ್ಮಕ ಕ್ರಮ: ಕೋಟ ಶ್ರೀನಿವಾಸ ಪೂಜಾರಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 15 ದಿನಗಳೊಳಗೆ ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್ ಗಳಿಗೆ ಸಲ್ಲಿಸಲಾಗುವುದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಅವುಗಳನ್ನು ವಿವಿಧ ಬ್ಯಾಂಕುಗಳಿಗೆ ಕಳುಹಿಸಿ, ಮಂಜೂರಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

Advertisement

ಪ್ರಧಾನಮಂತ್ರಿ ಆವಾಸ್ ಯೋಜನೆಯ ಸಿಎಲ್ಎಸ್ಎಸ್ ಯೋಜನೆಯಡಿ ರಾಜ್ಯದಲ್ಲಿ 53,695 ಅರ್ಜಿಗಳಿಗೆ ಮಾತ್ರ ಮಂಜೂರಾತಿ ದೊರೆತಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದಾಗ, ನಮ್ಮ ರಾಜ್ಯ ಹಿಂದುಳಿದಿದೆ. ಅದೇ ರೀತಿ ಪಾಲುದಾರಿಕೆಯಲ್ಲಿ ಕೈಗೆಟಕುವ ವಸತಿ ಯೋಜನೆಯಡಿ ಮಂಜೂರಾಗಿರುವ 3,46,414 ಪ್ರಕರಣಗಳ ಪೈಕಿ 1,16,168 ಪ್ರಕರಣಗಳಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಕೇವಲ 19,658 ಮನೆಗಳು ಮಾತ್ರ ಪೂರ್ಣಗೊಂಡಿವೆ.  ಈ ಯೋಜನೆಯಡಿ ಬ್ಯಾಂಕಿನಿಂದ ನೀಡುವ ಸಾಲ ಪ್ರಕ್ರಿಯೆ ಪ್ರಾರಂಭ ಆಗದಿರುವುದು ಯೋಜನೆಯ ಪ್ರಗತಿಗೆ ಪೂರಕವಾಗಿಲ್ಲ ಎಂದು ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: “ನಮಗೆ ರಾಜಕೀಯ ಮತ್ತು ಜೀವನದಲ್ಲಿ ಗಾಂಧಿ ನಡೆಗಳು ಆದರ್ಶ” : ಪ್ರಧಾನಿ ಮೋದಿ

ಈ ವಸತಿ ಯೋಜನೆ ನಗರದ ಬಡವರಿಗೆ ಸೂರು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ರಾಜ್ಯದಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ಎಲ್ಲಾ ಬ್ಯಾಂಕುಗಳು ಹಾಗೂ ಅನುಷ್ಠಾನ ಸಂಸ್ಥೆಗಳು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಜುಲೈ 2020 ರಿಂದ ಜಾರಿಗೆ ಬಂದಿದ್ದು, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಅನುದಾನ ಬಿಡುಗಡೆಯಾಗಲಿದೆ.

ಪಿಎಂ. ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ.ಗಳ ದುಡಿಯುವ ಬಂಡವಾಳ ಸೌಲಭ್ಯದೊಂದಿಗೆ ನಿಯಮಿತ ಪಾವತಿಗೆ ಶೇಕಡಾ 7ರ ಬಡ್ಡಿ ದರದಂತಹ ಪ್ರೋತ್ಸಾಹಕಗಳನ್ನು ಹಾಗೂ ಡಿಜಿಟಲ್ ವಹಿವಾಟಿಗೆ ಪುರಸ್ಕಾರವನ್ನೂ ನೀಡಲಾಗುವುದು.

ಈವರೆಗೆ 2,24,368 ಅರ್ಜಿಗಳನ್ನು ಯೋಜನೆಯಡಿ ಸ್ವೀಕರಿಸಲಾಗಿದ್ದು, ಕೇವಲ 66,423 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ರಾಜ್ಯದ ಬ್ಯಾಂಕುಗಳು ಶೇ 30 ರಷ್ಟು ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿವೆ. ಕೋವಿಡ್-19 ಸೋಂಕಿನಿಂದ ತತ್ತರಿಸಿರುವ ಬಡಜನರಿಗೆ ಈ ಯೋಜನೆ ಪ್ರಯೋಜನಕಾರಿಯಾಗಲಿದ್ದು, ಬಾಕಿ ಇರುವ ಎಲ್ಲ ಅರ್ಜಿಗಳನ್ನು ಬ್ಯಾಂಕುಗಳು ಅತಿ ಶೀಘ್ರವಾಗಿ ಮಂಜೂರಾತಿ ನೀಡಿ ವಿಲೇವಾರಿ ಮಾಡಬೇಕೆಂದು ಸಿಎಂ ಸೂಚಿಸಿದರು.

ಪಿಎಂ ಸ್ವನಿಧಿ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ವಿವಿಧ ನಗರಗಳಲ್ಲಿ ಸಾಲ ಮಂಜೂರಾದರೂ ವಿತರಣೆಯಾಗದಿರುವ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ವೇಳಾಪಟ್ಟಿ ನಿಗದಿಪಡಿಸಿ, ಸಾಲ ವಿತರಣೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next