Advertisement

ಗೃಹ ಸಚಿವರೇ, ನಿವೇಷ್ಟು ಕೊಟ್ಟು ಮಂತ್ರಿಗಳಾಗಿದ್ದೀರಿ ? : ಬಿ.ಕೆ.ಹರಿಪ್ರಸಾದ್‌

08:24 PM Sep 22, 2022 | Team Udayavani |

ವಿಧಾನ ಪರಿಷತ್ತು: ಗೃಹ ಸಚಿವರೇ, ನಿವೇಷ್ಟು ಕೊಟ್ಟು ಮಂತ್ರಿಗಳಾಗಿದ್ದೀರಿ ಹೇಳಿ? ಎಂದು ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸದನದಲ್ಲಿ ಕೆಣಕಿದ ಪ್ರಸಂಗ ಗುರುವಾರ ನಡೆಯಿತು.

Advertisement

ಮಧ್ಯಾಹ್ನ ನಿಯಮ 68ರ ಅಡಿಯಲ್ಲಿ ನಡೆದ ಅತಿವೃಷ್ಠಿ ಚರ್ಚೆಯ ವೇಳೆ ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌, ರಾಜಧಾನಿ ಪ್ರವಾಹ ಸಂಬಂಧ ಪತ್ರಿಕೆಗಳಲ್ಲಿ ಬಂದ ಶೀರ್ಷಿಕೆ ಬಗ್ಗೆ ಪ್ರಸ್ತಾಪಿಸಿದ ವೇಳೆ ಇದಕ್ಕೆಲ್ಲ  40 ಪರ್ಸೆಂಟ್‌ ಸರ್ಕಾರ ಕಾರಣ ಅಂತ ನಾನು ಹೇಳುತ್ತಿಲ್ಲ. ಪತ್ರಿಕೆಗಳ ಶೀರ್ಷಿಕೆಗಳು ಹೇಳುತ್ತಿವೆ. ಬೆಂಗಳೂರಿನ ಪ್ರವಾಹದ ಅವಾಂತರವನ್ನು ಬಿಚ್ಚಿಟ್ಟಿವೆ ಎಂದು ಹೇಳುತ್ತಿದ್ದಾಗ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಧ್ಯಪ್ರವೇಶ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿ.ಕೆ.ಹರಿಪ್ರಸಾದ್‌, ಗೃಹಸಚಿವರೇ ನಿವೇಷ್ಟು ಕೊಟ್ಟು ಗೃಹ ಸಚಿವರಾಗಿದ್ದೀರಿ ಎಂಬುವುದನ್ನು ಹೇಳಿ ಎಂದು ಕೆಣಕಿದರು. ಈಗಾಗಲೇ 40  ಪರ್ಸೆಂಟ್‌ ಬಗ್ಗೆ ಹಲವರು ಆರೋಪ ಮಾಡಿದ್ದಾರೆ. ನಿಮ್ಮವರೇ ಆದ ಯತ್ನಾಳ್‌, ಎಚ್‌.ವಿಶ್ವನಾಥ್‌ ಆರೋಪ ಮಾಡಿದ್ದಾರೆ. ಯತ್ನಾಳ್‌ ಕೂಡ ಸಚಿವ ಸ್ಥಾನಕ್ಕೆ ಇಂತಿಷ್ಟು ಅಂತ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಆರೋಪ ಮಾಡಲಾಗುತ್ತದೆ ಎಂದು ಛೇಡಿಸಿದರು.

ಈ ವೇಳೆ ಆಕ್ರೋಶಗೊಂಡ ಸಚಿವ ಆರಗ ಜ್ಞಾನೇಂದ್ರ, ನಿಮ್ಮ ಲೀಡರ್‌ ಈಗಾಗಲೇ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ ಎಂದು ತಿರುಗೇಟು ನೀಡಿದರು. ನಮ್ಮ ನಾಯಕರ ವಿರುದ್ಧ ಸಿಬಿಐ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಿಮ್ಮಲ್ಲಿ ಗಡಿಪಾರು ಗಿರಾಕಿ ಅಮಿತ್‌ ಶಾ ಇಲ್ಲವೆ ಎಂದು ಹರಿಪ್ರಸಾದ್‌ ಮಾತಿನ ಮೂಲಕ ತಿವಿದರು. ಈ ವೇಳೆ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ, ನಿಮ್ಮ ಚರ್ಚೆ ಅತಿವೃಷ್ಟಿಗೆ ಮಾತ್ರ ಸೀಮಿತವಿರಲಿ ಎಂದು ಹೇಳಿ ಸದನವನ್ನು ಸರಿದಾರಿಗೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next