ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮುಂಬೈ ದಾಳಿ ಉಗ್ರನಿಗೆ ಕಾಂಗ್ರೆಸ್ ಸರ್ಕಾರ ರಾಜಾಶ್ರಯ ನೀಡಿತ್ತು ಎಂಬ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದಾರೆ.
ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆಕ್ರೋಶ ಹೊರ ಹಾಕಿ, ಇದು ಕೇಂದ್ರ ಸಚಿವರ ಮೂರ್ಖತನದ ಪರಮಾವಧಿ. ಕೇಂದ್ರ ಸಚಿವರಾಗಿ ಹೀಗೆ ಮಾತನಾಡಿದರೆ ಹೇಗೆ ? ಯಾರೇ ಖೈದಿ ಇದ್ದರೂ ಊಟ ಕೊಡಲೇಬೇಕು ಅಲ್ಲವೇ ? ಆಗ ಇದನ್ನ ಕೇಳದೆ ಈಗ ಯಾಕೆ ಮಾತನ್ನಾಡುತ್ತಿದ್ದಾರೆ. ಬೇಕಾದರೆ ಆರ್‌ಟಿಐ ಅರ್ಜಿ ಹಾಕಿ ತಿಳಿದುಕೊಳ್ಳಲಿ ಎಂದರು.
ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ, ಕನ್ಹಯ್ಯಲಾಲ್ ಹತ್ಯೆಯಲ್ಲಿ ಭಾಗಿಯಾದವರು ಯಾರು?ಅಮಿತ್ ಶಾ ಜತೆ ನಿಂತಿರುವ ಫೋಟೋಗಳು ಹರಿದಾಡುತ್ತಿವೆ. ಹತ್ಯೆ ಆರೋಪಿಗಳು ಬಿಜೆಪಿ ಸಂಪರ್ಕ ಇರುವವರೇ ? ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಸಮೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಏನೇನು ಬದಲಾವಣೆ ಮಾಡಿಕೊಳ್ಳಬೇಕು, ನ್ಯೂನ್ಯತೆಗಳೇನು ಎಂಬುದನ್ನ ಪ್ರಸ್ತಾಪಿಸಲಾಗಿದೆ. ಬಿಜೆಪಿಗೆ ವಾಮಮಾರ್ಗದಿಂದ ಅಧಿಕಾರ ಹಿಡಿಯೋದೆ ಕೆಲಸ. ಕಳೆದ 2018 ರಲ್ಲೂ ಬಿಜೆಪಿ ನಾಯಕರು ದಂಡಯಾತ್ರೆ ನಡೆಸಿ ಭರವಸೆ ಕೊಟ್ಟು ಹೋಗಿದ್ದರು. ಏನಾಯ್ತು ? ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದರು.
ಡಿ.ಕೆ ಶಿವಕುಮಾರ್ ಯಾಕೆ ಹೇಳಿದ್ದಾರೋ ಗೊತ್ತಿಲ್ಲ
ಯೋಗಿ ಆದಿತ್ಯನಾಥ್ ಕರ್ನಾಟಕದಲ್ಲಿ ಪ್ರಭಾವ ಬೀರಿದರೆ ಅದು ರಾಜ್ಯದ ಕರಾಳ ದಿನವಾಗಲಿದೆ. ಅವರ ವಿರುದ್ಧ26 ಪ್ರಕರಣಗಳು ಇವೆ. ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿ ನಡೆಯೋದಿಲ್ಲ. ಅವರು ರಾಜ್ಯಕ್ಕೆ ಬಂದರೆ ನಮಗೇ ಒಳ್ಳೆಯದು. ಸಿದ್ದರಾಮಯ್ಯ ಅಭಿಮಾನಿಗಳು ಸಮಾವೇಶ ನಡೆಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಇದರಲ್ಲಿ ಭಾಗಿಯಾಗುತ್ತಾರೆ. ಪಕ್ಷದ ಕಾರ್ಯಕ್ರಮವೆಂದು ಡಿ.ಕೆ ಶಿವಕುಮಾರ್ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ -75 ಮಾವೇಶದ ಬಳಿಕ ಪ್ಲಸ್, ಮೈನಸ್ ಅನ್ನೋದು ಗೊತ್ತಾಗುತ್ತದೆ. ಅಭಿಮಾನಿಗಳು ಬಯಸೋದು ತಪ್ಪೇನಿಲ್ಲ. ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತೆ, ತಪ್ಪೇನಲ್ಲಾ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ ಶಿವಕುಮಾರ್ ಅವರವರ ಅಭಿಮಾನಿಗಳು ಬಯಸೋದು ತಪ್ಪೇನಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಹೈಕಮಾಂಡ್ ಸ್ಪಷ್ಟ ಸೂಚನೆ ಕೊಟ್ಟಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಒಟ್ಟಿಗೆ ಪ್ರಚಾರ ನಡೆಸುವಂತೆ ರಾಹುಲ್ ಸೂಚನೆ ಕೊಟ್ಟಿದ್ದಾರೆ
ಅದನ್ನ ಮೀರಿ ಯಾರಾದರೂ ಮಾತನಾಡಿದರೆ ಹೈಕಮಾಂಡ್ ಕ್ರಮಕೈಗೊಳ್ಳಲಿದೆ ಎಂದರು.