Advertisement

ಅರಗ ಜ್ಞಾನೇಂದ್ರ ರಾಜೀನಾಮೆ ನೀಡಲೇಬೇಕು: ಬಿ.ಕೆ. ಹರಿಪ್ರಸಾದ್ ಒತ್ತಾಯ

06:08 PM Apr 06, 2022 | Team Udayavani |

ಬೆಂಗಳೂರು: ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೇಜವಾಬ್ದಾರಿ ಹೇಳಿಕೆ ನೀಡಿ ಘಟನೆಗೆ ಕೋಮು ಬಣ್ಣ ಬಳಿದಿದ್ದು, ತಮ್ಮ ಸ್ಥಾನದ ಜ್ಞಾನವೇ ಇಲ್ಲದ ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.

Advertisement

ಜೆಜೆ ನಗರದಲ್ಲಿ ಪರಸ್ಪರ ಬೈಕ್ ಸವಾರರ ನಡುವೆ ವಾಗ್ವಾದ ನಡೆದು ಚಂದ್ರು ಎಂಬ ಯುವಕ ಕೊಲೆಯಾಗಿದ್ದು, ಘಟನೆಯ ಬಗ್ಗೆ ಸತ್ಯಾಸತ್ಯತೆಯನ್ನ ಪೊಲೀಸ್ ಕಮಿಷನರ್ ಕಮಲ್ ಪಂತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥರನ್ನ ಬಂಧಿಸಲಾಗಿದೆ ಎಂದು ಹೇಳಿಯಾಗಿದೆ.ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವರು “ಚಂದ್ರು ಎಂಬ ದಲಿತ ಹುಡುಗನನ್ನ ಗುಂಪೊಂದು ಅಡ್ಡಗಟ್ಟಿ ಉರ್ದು ಮಾತಾಡುವಂತೆ ಒತ್ತಾಯಿಸಿದೆ, ಆತನಿಗೆ ಉರ್ದು ಬರುತ್ತಿರಲಿಲ್ಲ ಹೀಗಾಗಿ ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಸ್ವತಃ ಗೃಹ ಸಚಿವ ಯಾವ ಪೊಲೀಸ್ ತನಿಖೆಯೂ ನಡೆಯದೇ ಸ್ವಯಂ ಘೋಷಿತ ತೀರ್ಪು ನೀಡಿ ಕೋಮು ಬಣ್ಣ ಕಟ್ಟಿ ಮತೀಯ ಭಾವನೆ ಕೆರಳಿಸುವಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಾವುದೇ ಕೊಲೆಯನ್ನ ಸಮರ್ಥನೆ ಮಾಡಲು ಸಾಧ್ಯವೇ ಇಲ್ಲ. ಆದರೆ ಸಚಿವರು ಕೊಲೆಯನ್ನ ವೈಭವೀಕರಿಸಿ, ಕೊಲೆ ನಡೆಯುವಾಗ ತಾವೇ ಕಣ್ಣಾರೆ ಕಂಡಂತೆ ಹೇಳಿಕೆ ನೀಡುವುದು ಅಕ್ಷರಶಃ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ. ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡು” ನನಗೆ ಪೊಲೀಸ್ ಇಲಾಖೆಗಿಂತಲೂ ಮೊಲದೇ ಬಲ್ಲ ಮೂಲಗಳಿಂದ ಮಾಹಿತಿ ಬಂದಿತ್ತು. ಹಾಗಾಗಿ ಹೇಳಿಕೆ ನೀಡಿದೆ ” ಎಂದಿದ್ದಾರೆ. ಹಾಗಾದ್ರೆ ಆ ಬಲ್ಲ ಮೂಲ ಯಾವುದು ಗೃಹ ಸಚಿವರೇ? ಕೇಶವ ಕೃಪವೋ? ನಾಗಪುರವೋ? ಮೊದಲು ಸ್ಪಷ್ಟಪಡಿಸಿ. ನಿಮ್ಮ ಸುಳ್ಳಿನ ಫ್ಯಾಕ್ಟರಿಯ ಬತ್ತಳಿಕೆಗಳ ಮೂಲ ರಾಜ್ಯದ ಜನರಿಗೂ ತಿಳಿಯಲಿ ಎಂದಿದ್ದಾರೆ.

ಅಮಾಯಕ ಯುವಕರ ಹೆಣದ ಮೇಲೆ ರಾಜಕೀಯ ಮಾಡಿ ಅಧಿಕಾರ ನಡೆಸುತ್ತಿರುವುದರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕೊಂದವರ‍್ಯಾರು ಎನ್ನುವುದರ ಮೇಲೆ ಕೊಲೆಯ ಕ್ರೌರ್ಯ ನಿರ್ಣಯಿಸುತ್ತಿದ್ದೀರಿ, ಜಾತಿಯ ಆಧಾರದಲ್ಲಿ ಕೊಲೆಯನ್ನ ವೈಭವೀಕರಿಸುತ್ತಿದ್ದೀರಿ. ಕೊಲೆಯಾದ ಯುವಕ ದಲಿತ ಎಂದು ಪದೇ ಪದೇ ಹೇಳಿದ್ದೀರಿ ಇದರ ಹಿಡನ್ ಅಜೆಂಡಾವನ್ನ ರಾಜ್ಯದ ಜನ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ. ನಿಮಗೆ ಕಣ್ಣಿನ ದೋಷದ ಸಮಸ್ಯೆ ಇಲ್ಲ, ಕಣ್ಣೇ ಸಮಸ್ಯೆ‌ ಇದೆ. ಗೃಹ ಸಚಿವ ಸ್ಥಾನಕ್ಕೆ ನೀವೊಂದು ಅಪಚಾರ. ಈ ಕೂಡಲೇ ನಿಮ್ಮ ಸ್ಥಾನದ ಘನತೆಗೆ ಗೌರವ ನೀಡುವುದಾದರೇ ರಾಜೀನಾಮೆ ನೀಡಿ ಕುರ್ಚಿ ಖಾಲಿ ಮಾಡಿ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next