ಬೆಂಗಳೂರು: ರೈತರು ತಮ್ಮ ಬೆಳೆಗಳನ್ನು ರಸ್ತೆಗೆ ಚೆಲ್ಲುವುದಾಗಲೀ ನಾಶ ಮಾಡುವುದಾಗಲೀ ಮಾಡಬಾರದು. ರೈತರು ಆತುರಕ್ಕೊಳಗಾಗದೇ ಸ್ವಲ್ಪ ತಾಳ್ಮೆ ವಹಿಸಿ ಇಲಾಖೆ ನೀಡಿದ ಕ್ರಮ ಅನುಸರಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಮನವಿ ಮಾಡಿದ್ದಾರೆ.
ರಾಯಚೂರು ಸೇರಿದಂತೆ ಬೇರೆ ಯಾವುದೇ ಭಾಗದಲ್ಲಿ ರೈತರ ಬೆಳೆ ಸಮೀಕ್ಷೆಯಾಗದೇ ಇದ್ದದ್ದು ಕಂಡುಬಂದಲ್ಲಿ ತಕ್ಷಣವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ನೀಡಿದರು.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಸಚಿವರು, ಫಸಲು ಸಮೀಕ್ಷೆ ನಡೆಸಿ ಫಸಲ್ ಭೀಮಾಗೆ ಒಳಪಡಿಸಬೇಕು ಎಂದಿದ್ದಾರೆ.
ರಾಯಚೂರು ಕೊಪ್ಪಳ ಮೈಸೂರಿನ ಕೆಲ ಭಾಗ ಸೇರಿದಂತೆ ಹಲವೆಡೆ ಬತ್ತ ಕಟಾವು ಯಂತ್ರೋಪಕರಣಕ್ಕೆ ಗಡಿಯಲ್ಲಿ ನಿಲ್ಲಿಸಬಾರದು. ರೈತರಿಗೆ ಬೇಕಾದ ಬೀಜ, ಗೊಬ್ಬರ ಔಷಧಿ ಮಾರಾಟಕ್ಕೆಮುಕ್ತ ಅವಕಾಶ ಪೈಪ್ ಅಂಗಡಿಗಳನ್ನು ತೆರಯಲು ಮಾರಾಟ ಮಾಡಲು ಯಾವುದೇ ಅಡೆತಡೆಯಿಲ್ಲ. ಮುಂಗಾರು ಬಿತ್ತನೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ದಿನಸಿ ತರಕಾರಿ ಅಂಗಡಿ ತೆರೆದಿವೆ. ರೈತರ ಜೀವ ಕುಟುಂಬದ ಹೊಣೆ ಅವರ ಮೇಲೆ ಇರುವುದರಿಂದ ರೈತರು ಮುಗಿಬೀಳದೆ ಆರೋಗ್ಯದ ಮೇಲೆ ಕಾಳಜಿ ಹೊಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಸಚಿವರು ಮನವಿ ಮಾಡಿದರು.
ರೈಲ್ವೆ ಗೂಡ್ಸ್ ಮೂಲಕ ಸಾಗಾಣಿಕೆ ಮಾಡಬಹುದು. ಹಣ್ಣುಗಳನ್ನು ತಿನ್ನುವುದರಿಂದ ಖಾಯಿಲೆ ಬರುವುದಿಲ್ಲ. ಕಲ್ಲಂಗಡಿ ಹಣ್ಣಾಗಲೀ ಅನಾನಸ್ ಆಗಲಿ ತಿಂದರೆ ಕೋವಿಡ್19 ಬರುವುದಿಲ್ಲ.ತಪ್ಪು ಮಾಹಿತಿ ಅಪಪ್ರಚಾರಕ್ಕೆ ಬೆಲೆಕೊಡಬಾರದು. ನಿಂಬೆಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿದೆ. ಕಲ್ಲಂಗಡಿ ಅನಾನಸ್ ನಿಂಬೆಹಣ್ದು ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಜನರು ಹೆಚ್ಚೆಚ್ಚು ಹಣ್ಣು ಬಳಸಿ ಎಂದು ಮಾಹಿತಿ ನೀಡಿದರು.
ಆತುರಕ್ಕೆ ಒಳಪಟ್ಟಾಗಲಿ ಅಥವಾ ಅಪಪ್ರಚಾರಕ್ಕಾಗಲಿ ರೈತರು ಕಿವಿಕೊಡಬಾರದು. ಯಾರೂ ಆತುರಕ್ಕೆ ಬುದ್ಧಿಕೊಟ್ಟು ಬೆಳೆಗಳನ್ನು ನಾಶ ಮಾಡುವುದಾಗಲಿ ರಸ್ತೆಗೆ ಸುರಿಯುವುದಾಗಲೀ ಮಾಡಬಾರದು. ಶಿಥಲೀಕರಣ ಘಟಕ ಎಪಿಎಂಸಿ ವ್ಯವಸ್ಥೆ ಬಳಸಿಕೊಳ್ಳಬೇಕು ಎಂದು ಕೃಷಿ ಸಚಿವರು ಸ್ಪಷ್ಟಮಾಹಿತಿ ನೀಡಿದರು.
ಪೊಲೀಸರಾಗಲೀ ಬೇರೆ ಯಾರೇ ಆಗಲೀ ಗ್ರೀನ್ ಪಾಸ್ ಹೊಂದಿದ ರೈತರ ಪರಿಕರ ಫಸಲು ಮಾರಾಟ ಸಾಗಾಣಿಕೆಗೆ ತಡೆ ಮಾಡುವಂತಿಲ್ಲ ಎಂದು ಸಚಿವರು ಪುನರುಚ್ಚರಿಸಿದರು.
ಪಾಸ್ ಹೊಂದಿದ ಬಾಡಿಗೆ ವಾಹನಗಳನ್ನು ಸಹ ರೈತರು ಸಾಗಾಣಿಕೆಗೆ ಬಳಸಬಹುದು. ಅವಕಾಶವನ್ನು ದುರಪಯೋಗ ಮಾಡಿಕೊಳ್ಳುವ ಕೆಲ ಶಕ್ತಿಗಳಿವೆ. ದುರುದ್ದೇಶಪೂರಕ ಕೊರೊನಾ ಪರಿಸ್ಥಿತಿ ಬಳಸಿಕೊಂಡು ದುಪ್ಪಟ್ಟು ಬೆಲೆಗೆ ವಸ್ತುಗಳನ್ನು ಯಾರಾದರೂ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದರು.