ಹುಬ್ಬಳ್ಳಿ: ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಿಸಿಯೂಟ ಹಾಗೂ ಹಾಸ್ಟೇಲ್ ಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ, ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಬಳಸಲು ವಿವಿ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ‌್ ಹೇಳಿದರು.
ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ನಿಮಿತ್ತ ಮೊರಬ ಗ್ರಾಮದಲ್ಲಿ ಕಡಲೆ ಖರೀದಿ ಕೇಂದ್ರ, ಬೆಳೆ ಕಟಾವು ಯಂತ್ರ, ರೈತ ಸಂಪರ್ಕ ಕೇಂದ್ರದ ದಾಸ್ತಾನು ಮಳಿಗೆ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಸಿಯೂಟ ಹಾಗೂ ಹಾಸ್ಟೇಲ್ ಗಳಲ್ಲಿ ಸಿರಿಧಾನ್ಯ ಬಳಸುವುದರಿಂದ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡದಂತಾಗಲಿದೆ. ಈ ಕುರಿತು ಆಯ ವ್ಯಯ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಸಹಕಾರ ಬ್ಯಾಂಕ್ ರಚಿಸಿಕೊಂಡ 20 ರೈತರ ಗುಂಪಿಗೆ ಒಂದು ಟ್ರ್ಯಾಕ್ಟರ್ ಖರೀದಿಸಲು ಸರಕಾರ 8 ಲಕ್ಷ ರೂ. ನೀಡುತ್ತದೆ. ಇದಕ್ಕೆ 2 ಲಕ್ಷ ರೂ. ಪಾಲು ಹಾಕಬೇಕು. ಇದರಿಂದ ಕೃಷಿ ಯಂತ್ರಧಾರೆ ಯೋಜನೆಗೆ ನೆರವು ನೀದಂತಾಗಲಿದೆ. ಒಂದು ಎಕರೆ ಗೋಧಿ ಕಟಾವಿಗೆ ಸುಮಾರು 6000 ರೂ. ಖರ್ಚಾಗುತ್ತದೆ. ಯಂತ್ರದ ಮೂಲಕ ಕಟಾವು ಮಾಡಿದರೆ 1200 ರೂ ತಗಲುತ್ತದೆ. ಇದರಿಂದ ರೈತರಿಗೆ 4800 ರೂ ಪ್ರತಿ ಎಕರೆಗೆ ಉಳಿತಾಯವಾಗುತ್ತದೆ ಎಂದರು.
ಇದನ್ನೂ ಓದಿ:ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ: ಸಿಎಂ ಯಡಿಯೂರಪ್ಪ
ಕಡಲೆ ಕಾಳು ಬೆಳೆ ಖರೀದಿ ಹಾಗೂ ರೈತರಿಗೆ ಹಣ ಪಾವತಿಗೆ ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳನ್ನು ಕೃಷಿ ಮಿತ್ರ ಅಥವಾ ರೈತ ಮಿತ್ರ ಹುದ್ದೆಗೆ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಪಂ ಅಧ್ಯಕ್ಷೆ ವಿಜಯಲಕ್ಷೀ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಸೇರಿದಂತೆ ಇನ್ನಿತರರಿದ್ದರು.