ಹಾವೇರಿ: ರೈಲ್ವೆ ಸಚಿವಾಲಯ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ 75 ರೈಲ್ವೆ ನಿಲ್ದಾಣಗಳನ್ನು ಗುರುತಿಸಿದ್ದು, ಈ ಪಟ್ಟಿಯಲ್ಲಿ ಹಾವೇರಿಯ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣವೂ ಸ್ಥಾನ ಪಡೆದಿದೆ. ಜತೆಗೆ ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲುಗಳ ವಿಭಾಗದಲ್ಲಿ “ಟಿಪ್ಪು ಎಕ್ಸ್‌ಪ್ರೆಸ್’ ಅನ್ನು ನಾಮನಿರ್ದೇಶನ ಮಾಡಲಾಗಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಜು.18ರಿಂದ 23ರವರೆಗೆ “ಆಜಾದಿ ಕಿ ರೇಲ್ ಗಾಡಿ ಔರ್ ಸ್ಟೇಷನ್ಸ್’ ಕಾರ್ಯಕ್ರಮದ ಸಾಂಪ್ರದಾಯಿಕ ಸಪ್ತಾಹ ಆಚರಿಸಲಿದೆ.
ಇದು 75 ವರ್ಷಗಳ ಸ್ವಾತಂತ್ರ್ಯ ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಸ್ಮರಿಸಲು ಭಾರತ ಸರ್ಕಾರದ “ಆಜಾದಿ ಕಾ ಅಮೃತ್ ಮಹೋತ್ಸವ’ದೊಂದಿಗೆ ಹೊಂದಿಕೆ ಮಾಡಲಾಗುತ್ತದೆ. ಜು.18ರಂದು ಸಂಜೆ 4 ಗಂಟೆಗೆ ರೈಲ್ವೆ ಮಂಡಳಿಯ ರೈಲ್ವೆ ಭವನದಿಂದ ಕೇಂದ್ರ ಕಾರ್ಯದ ಆಚರಣೆಯಾದ “ಸಾಂಪ್ರದಾಯಿಕ ಸಪ್ತಾಹ ಐಕಾನಿಕ್ ವೀಕ್’ ಅನ್ನು ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೆ.ತ್ರಿಪಾಠಿ ಉದ್ಘಾಟಿಸಲಿದ್ದಾರೆ.
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕ್ರಾಂತಿಕಾರಿ ಕಾರ್ಯಗಳಿಗಾಗಿ ಮೈಲಾರ ಮಹದೇವಪ್ಪ ಅವರನ್ನು “ಕರ್ನಾಟಕದ ಭಗತ್ ಸಿಂಗ್’ ಎಂದು ಪ್ರಶಂಸಿಸಲಾಗಿತ್ತು. ದಂಡಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿ ಅವರೊಂದಿಗೆ ನಡೆದವರಲ್ಲಿ ಅವರು ಅಂದಿನ ಮೈಸೂರು ಸಂಸ್ಥಾನದ ಏಕೈಕ ಪ್ರತಿನಿಯಾಗಿದ್ದರು. ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು.
ಮೈಸೂರು ವಿಭಾಗ ಹಾವೇರಿ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿರುವ ರೈಲ್ವೆಯ ಎಲ್ಲಾ ಪಾಲುದಾರರೊಂದಿಗೆ, ಶಾಲಾ-ಕಾಲೇಜುಗಳು ಮತ್ತು ವಸತಿ ಕಾಲೋನಿಗಳನ್ನು ಸೇರಿಸಿಕೊಂಡು ವಾರ ಪೂರ್ತಿ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದೆ.
ವಾರ ಪೂರ್ತಿ ಕಾರ್ಯಕ್ರಮ: ವಾರ ಪೂರ್ತಿ ಮಹದೇವಪ್ಪ ಮೈಲಾರ ಹಾವೇರಿ ನಿಲ್ದಾಣದ ದೀಪಾಲಂಕಾರ ಮತ್ತು ಸಿಂಗಾರ, ಡಿಜಿಟಲ್ ಪರದೆ ಅಳವಡಿಸುವುದು ಮತ್ತು ಐತಿಹಾಸಿಕ ವಿಷಯಗಳ ಛಾಯಾಚಿತ್ರ ಪ್ರದರ್ಶನ, ವಿಡಿಯೋ ಚಿತ್ರ, ದೇಶಭಕ್ತಿ ಗೀತೆಗಳು, ಸ್ಥಳೀಯ ಭಾಷೆಯಲ್ಲಿ ತನ್ನದೇ ಆದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಬೀದಿ ನಾಟಕವನ್ನು ಪ್ರತಿದಿನ ಸಂಜೆ 6ರಿಂದ 7ರವರೆಗೆ ಒಂದು ಗಂಟೆ ಕಾಲ ನಡೆಸಲಾಗುವುದು.
ವಾರದ ಕೊನೆಯ ದಿನದಂದು ತಮ್ಮ ಕಥೆಯನ್ನು ಹಂಚಿಕೊಳ್ಳಲು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರನ್ನು ಆಹ್ವಾನಿಸಲಿದೆ. ನಿಲ್ದಾಣದಲ್ಲಿ “ಆಜಾದಿ ಕಿ ರೇಲ್ ಗಾಡಿ ಔರ್ ಸ್ಟೇಷನ್’ ಸಂದರ್ಭದಲ್ಲಿ ಸೆಲ್ಫಿ ಪಾಯಿಂಟ್ ರಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ|ಮಂಜುನಾಥ್ ಕನಮಡಿ ತಿಳಿಸಿದ್ದಾರೆ.