Advertisement

ಮದ್ಯವ್ಯಸನಿಗಳಿಗೆ ಆಯುರ್ವೇದ ಚಿಕಿತ್ಸೆ

11:21 AM Jul 19, 2017 | Team Udayavani |

ಬೆಂಗಳೂರು: ಮದ್ಯ ವ್ಯಸನದಿಂದ ಮುಕ್ತವಾಗಲು ಸಂತ ಸೇವಾಲಾಲ್ ಜನ್ಮಕ್ಷೇತ್ರಕ್ಕೆ ಬರುವವರಿಗೆ ಆಯುರ್ವೇದ ಮತ್ತು ಇತರೆ ಆಧುನಿಕ ಚಿಕತ್ಸೆಯ ಸೌಲಭ್ಯ ಒದಗಿಸಲು ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ನಿರ್ಧರಿಸಿದೆ. 

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವ್ಯಸನ ಮುಕ್ತರಾಗಲು ಇಲ್ಲಿಗೆ ಬರುವವರಿಗೆ ಕೆಲ ಆಚರಣೆಗಳು ಮತ್ತು ಮನೋಸ್ಥೈರ್ಯದ ಚಿಕಿತ್ಸೆ ಇದೆ. ಆದರೆ ದುರ್ಬಲ ಮನಸ್ಸಿನವರಿಗೆ ಹಾಲಿ ಇರುವ ಚಿಕಿತ್ಸಾ ವಿಧಾನದಿಂದ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಆಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. 

ಮದ್ಯಪಾನ ಸಂಯಮ ಮಂಡಳಿ, ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದ ಸಹಯೋಗದೊಂದಿಗೆ ಮದ್ಯ ವ್ಯಸನ ನಿವಾರಣೆ ಹಾಗೂ ಚಿಕಿತ್ಸಾ ಕುಟೀರಗಳನ್ನು ನಿರ್ಮಿಸಲು ಸಭೆ ಒಪ್ಪಿಗೆ ನೀಡಿತು. ಅಲ್ಲದೇ ಸಂತ ಸೇವಾಲಾಲರ ಜನ್ಮಕ್ಷೇತ್ರಕ್ಕೆ ಹೊಂದಿಕೊಂಡಂತೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು 20 ಎಕರೆ ಜಮೀನು ದಾನವಾಗಿ ನೀಡಲಾಗಿದೆ. ಈ ಸ್ಥಳದಲ್ಲಿ ಕೈಗಾರಿಕೆ ತರಬೇತಿ ಸಂಸ್ಥೆ ಸ್ಥಾಪಿಸಲು ಸರ್ಕಾರ ಮಂಜೂರಾತಿ ನೀಡಿದೆ. ಜೊತೆಗೆ ವಲಸೆ ಕುಟುಂಬಗಳ ಮಕ್ಕಳಿಗೆ ಇಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. 

ಪ್ರತಿಷ್ಠಾನಕ್ಕಾಗಿ ಸರ್ಕಾರ ಐದು ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಇದಕ್ಕೆ ರೂಪಿಸಿರುವ ಕ್ರಿಯಾ ಯೋಜನೆ ಬಗ್ಗೆಯೂ ಸಮಾಲೋಚನೆ ನಡೆಯಿತು. ಎಲ್ಲ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next