ಬೆಂಗಳೂರು: ಆಯುರ್ವೇದ ಶಿಕ್ಷಣ ತರಬೇತಿಯಲ್ಲಿ ರಚನಾತ್ಮಕ ಮತ್ತು ಕ್ರಿಯಾತ್ಮಕ ಚರ್ಚೆ ಹಾಗೂ ಸುಧಾರಣೆಗಾಗಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್, ತಾರುಣ್ಯ ಶಿಕ್ಷಣ ಟ್ರಸ್ಟ್ ವತಿಯಿಂದ ಸೆ.21 ಮತ್ತು 22ರಂದು ಗಾಂಧಿಭವನದಲ್ಲಿ ಜಿಜ್ಞಾಸ-2017 ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ “ಜಿಜ್ಞಾಸ ದರ್ಶನ ವೈಜ್ಞಾನಿಕ’ ಸಮಿತಿ ಅಧ್ಯಕ್ಷ ಡಾ. ಆರ್.ಕಿಶೋರ್ ಕುಮಾರ್, ಪ್ರಸಕ್ತ ಆಯುರ್ವೇದ ಶಿಕ್ಷಣದ ತರಬೇತಿಯ ರಚನಾತ್ಮಕ ಮತ್ತು ಕ್ರಿಯಾತ್ಮಕ ಅಂಶಗಳ ವಿಮರ್ಶೆ, ಅಸಂಘಟಿತ ಸಾಂಪ್ರದಾಯಿಕ ಆಯುರ್ವೇದ ಪದ್ಧತಿಗಳ ಏಕೀಕರಣ, ಆಯುರ್ವೇದ ಶಿಕ್ಷಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಯುರ್ವೇದ ಪಠ್ಯಕ್ರಮದಲ್ಲಿ ಭಾರತೀಯ ಶಾಸ್ತ್ರದ ಅಧ್ಯಯನ ವ್ಯಾಪ್ತಿ ಮತ್ತು ಸಮಕಾಲಿನ ಗುರುಕುಲ ಪದ್ಧತಿಯ ಕಾರ್ಯ ಇತ್ಯಾದಿ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಆಯುರ್ವೇದ ಪದವಿ, ಸ್ನಾತಕೋತ್ತರ ಪದವಿ ಕಾಲೇಜಿನ ಸ್ವರೂಪ, ಗುರುಕುಲ ಶಿಕ್ಷಣ ಪದ್ಧತಿ ಜತೆಗೆ ಸಮಕಾಲೀನ ಶಿಕ್ಷಣದ ಪ್ರಸ್ತುತತೆ, ಆಯುರ್ವೇದ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವುದು, ಆಯುರ್ವೇದದ ಪಠ್ಯಕ್ರಮ, ಸಾರ್ವಜನಿಕ ಆರೋಗ್ಯ ಸಂಬಂಧಿಸಿದ ಔಷಧದ ಶೋಧನೆ, ದಾಖಲೆಗಳ ನಿರ್ವಹಣೆ ಇತ್ಯಾದಿ ವಿಷಯದ ಚರ್ಚೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಆಯುರ್ವೇದ ಶಿಕ್ಷಣದಲ್ಲಿ ಹೆಚ್ಚಿನ ತರಬೇತಿ ಮತ್ತು ಕೌಶಲಾಭಿವೃದ್ಧಿಗೊಳಿಸುವ ಗುರಿಯೊಂದಿಗೆ ಈ ವಿಚಾರ ಸಂಕಿರಣ ನಡೆಯಲಿದೆ.
ಕೆಲವೊಂದು ನಿರ್ಣಯವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು. ಕೇಂದ್ರ ಆಯುಷ್ ಇಲಾಖೆಯ ಪದ್ಮಶ್ರೀ ವೈ. ರಾಜೇಶ್ ಕೊಟೆಚಾ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಅವಿನಾಶಿಲಿಂಗಮ್ ವಿವಿಯ ಕುಲಾಧಿಪತಿ ಪದ್ಮಶ್ರೀ ಡಾ.ಪಿ.ಆರ್. ಕೃಷ್ಣಕುಮಾರ್, ಕೇಂದ್ರ ಆಯುಷ್ ಇಲಾಖೆಯ ಪ್ರೊ.ವೈ.ಕೆ.ಎಸ್.ಧೀಮಾನ್, ಡಾ.ಅಹಲ್ಯ ಶರ್ಮಾ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎರಡು ದಿನದ ವಿಚಾರ ಸಂಕಿರಣದಲ್ಲಿ ಆಯುರ್ವೇದದ ವಿವಿಧ ಆಯಾಮದ ಬಗ್ಗೆ ಸಂಶೋಧನಾ ಪ್ರಬಂಧ ಮಂಡನೆ, ಸುಧಾರಣೆಗೆ ಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಆಯುರ್ವೇದದ ಸಂಶೋಧಕರು, ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಮುಖ್ಯಸ್ಥರು, ಶಿಕ್ಷಣ ತಜ್ಞರು, ಅಧ್ಯಾಪಕರು, ನೀತಿ ನಿರೂಪಕರು, ಉದ್ಯಮಿಗಳು ಸೇರಿ 150ಕ್ಕೂ ಅಧಿಕ ವಿಶೇಷ ಆಹ್ವಾನಿತರು ಭಾಗವಸಲಿದ್ದಾರೆ ಎಂಬ ಮಾಹಿತಿ ನೀಡಿದರು. ಸಂಘಟನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ, ಸಂಯೋಜಕ ವಿನೀತ್ ಮೋಹನ್ ಸುದ್ದಿಗೋಷ್ಠಿಯಲ್ಲಿದ್ದರು.