Advertisement

Ayodhya: ಅಯೋಧ್ಯೆ ರಾಮನ ವಿಗ್ರಹ ತರಲು ನಮಗೂ ಆಸಕ್ತಿ ಇದೆ: ರಾಘವೇಶ್ವರ ಶ್ರೀ

12:58 AM Jan 27, 2024 | Team Udayavani |

ಬೆಂಗಳೂರು: “ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಶಿಲ್ಪಿ ಗಣೇಶ್‌ ಭಟ್‌ ಅವರು ಅಯೋಧ್ಯೆಯಲ್ಲಿ ರಚಿಸಿದ ಶ್ರೀರಾಮನ ವಿಗ್ರಹವನ್ನು ರಾಜ್ಯಕ್ಕೆ ತಂದು ಪ್ರತಿಷ್ಠಾಪಿಸಬೇಕೆಂಬ ಅಭಿಲಾಷೆ ನಮಗೂ ಇದೆ. ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲೇ ಶಿಲ್ಪಿಯ ಬಳಿ ನಮ್ಮ ಮನದಾಳವನ್ನು ಹಂಚಿಕೊಂಡಿದ್ದೇವೆ. ಹಾಗಾದಲ್ಲಿ ಬಹಳ ಸಂತೋಷ ಎಂದು ಗಣೇಶ್‌ ಭಟ್‌ ಅವರೂ ಮನದುಂಬಿ ಹೇಳಿದ್ದಾರೆ. ಇನ್ನು ಒಂದೆರಡು ದಿನಗಳಲ್ಲೇ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಟ್ರಸ್ಟ್‌ಗೆ ಈ ಕುರಿತಾಗಿ ಪತ್ರ ಬರೆಯುತ್ತೇವೆ…’

Advertisement

ಇದು ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಾತು.

ಅಯೋಧ್ಯಾ ರಾಮಮಂದಿರಕ್ಕೆ ಎಂದು ತಯಾರಾಗಿರುವ ಮೂರು ಶಿಲ್ಪಗಳ ಪೈಕಿ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ರಾಮನ ವಿಗ್ರಹವು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಆ ಬಳಿಕ ಹೊನ್ನಾವರದ ಗಣೇಶ್‌ ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕಡೆದ ರಾಮನ ವಿಗ್ರಹಗಳು ಏನಾಗುತ್ತವೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ಹೊತ್ತಿನಲ್ಲೇ ಗಣೇಶ್‌ ಭಟ್‌ ಅವರು ಎರಡು ದಿನಗಳ ಹಿಂದೆ ಉದಯವಾಣಿ ಜತೆ ಮಾತನಾಡಿ, ತಮ್ಮ ಶಿಲ್ಪ ಶಾಸ್ತ್ರೋಕ್ತವಾಗಿ ಸಿದ್ಧವಾದದ್ದು. ಪೂಜಾರ್ಹವಾದ ರಾಮನ ವಿಗ್ರಹ ಅದು. ಯಾವುದಾದರೂ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿ ನಿತ್ಯಪೂಜೆಗೆ ಒಳಪಡಲಿ, ಕರ್ನಾಟಕದಲ್ಲೇ ಆದರೆ ಸಂತೋಷ ಎಂದಿದ್ದರು. ಇದರ ಬೆನ್ನಲ್ಲೇ ಮೈಸೂರು ಹಾಗೂ ರಾಮನಗರದ ಕೆಲವು ಜನಪ್ರತಿನಿಧಿಗಳು ವಿಗ್ರಹ ತರಲು ಉತ್ಸುಕತೆ ತೋರಿದ್ದನ್ನು ಉದಯವಾಣಿ ಶುಕ್ರವಾರವಷ್ಟೇ ವರದಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ರಾಘವೇಶ್ವರ ಸ್ವಾಮೀಜಿ, “ನಾವು ಅಯೋಧ್ಯೆಗೆ ಮೂರು ಉದ್ದೇಶಗಳಿಂದ ಭೇಟಿ ನೀಡಿದ್ದೆವು. ಒಂದು, ಭಗವಾನ್‌ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ದಿನ ಆ ಪುಣ್ಯಕ್ಷೇತ್ರದಲ್ಲಿ ಇರಬೇಕು. ಎರಡು, ಶ್ರೀರಾಮಜನ್ಮಭೂಮಿಯ ಪವಿತ್ರ ನೆಲ ಸ್ಪರ್ಶಿಸಬೇಕು. ಮೂರು, ನಮ್ಮ ಮಠದ ಶಿಷ್ಯರೇ ಆದ ಗಣೇಶ್‌ ಭಟ್‌ ರಚಿಸಿರುವ ಶಿಲ್ಪವನ್ನು ಕಣ್ತುಂಬಿಕೊಳ್ಳಬೇಕೆಂಬ ಉದ್ದೇಶ’ ಎಂದರು.

Advertisement

“ಆ ವಿಗ್ರಹವನ್ನು ನೋಡುತ್ತಿದ್ದಂತೆ ಮನಸ್ಸು ಪ್ರಫ‌ುಲ್ಲವಾಯಿತು. ಅಂಥ ಅಪೂರ್ವವಾದ ಕೆತ್ತನೆಯದು. ವಿಗ್ರಹ ಬಹಳ ದೈವಿಕವಾಗಿದೆ. ಒಂದೊಂದು ಭಾಗವೂ ಅದ್ಭುತ ಕಲೆಗಾರಿಕೆಯಿಂದ ಕೂಡಿದೆ. ಕೂಡಲೇ ನಮ್ಮ ಮಗ್ಗುಲಲ್ಲೇ ಇದ್ದ ಶಿಲ್ಪಿ ಗಣೇಶ್‌ ಭಟ್‌ ಬಳಿ ಈ ಶಿಲ್ಪವನ್ನು ಕೊಂಡೊಯ್ಯುವ ಮನಸ್ಸಾಗುತ್ತಿದೆ ಎಂದಿದ್ದೆವು. ಅದನ್ನು ಕೇಳಿ ಅವರು ಅತ್ಯಂತ ಭಾವುಕರಾದರು. ಇದು ಸಾಧ್ಯವೇ ಆದಲ್ಲಿ ನನ್ನ ವಿಗ್ರಹಕ್ಕೊಂದು ಸಾರ್ಥಕತೆ ದೊರಕುತ್ತದೆ ಎಂದೂ ಪ್ರತಿಕ್ರಿಯಿಸಿದ್ದರು. ಒಂದು ವೇಳೆ ರಾಮಜನ್ಮಭೂಮಿ ಟ್ರಸ್ಟ್‌ನವರು ಅನುಮತಿ ನೀಡಿದರೆ ನಿಸ್ಸಂಶಯವಾಗಿ ವಿಗ್ರಹವನ್ನು ತರುತ್ತೇವೆ. ಇದಕ್ಕಾಗಿ ಒಂದೆರಡು ದಿನಗಳಲ್ಲಿ ಅಧಿಕೃತ ಕೋರಿಕೆ ಪತ್ರವನ್ನು ಕಳುಹಿಸುತ್ತೇವೆ’ ಎಂದು ಸ್ವಾಮೀಜಿ ವಿವರಿಸಿದರು.

ವಿಗ್ರಹ ದೊರಕಿದರೆ ಎಲ್ಲಿ ಪ್ರತಿಷ್ಠಾಪಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದು ಇನ್ನೂ ಚರ್ಚೆಯ ಹಂತದಲ್ಲಿದೆ. ಗೋಕರ್ಣದಲ್ಲಿರುವ ನಮ್ಮ ಮೂಲ ಮಠದಲ್ಲಿ ಪ್ರತಿಷ್ಠಾಪಿಸುವ ಚಿಂತನೆ ಇದೆ. ಆದರೆ ಅಲ್ಲಿ ಈಗಾಗಲೇ ಪೂಜಿಸಲ್ಪಡುತ್ತಿರುವ ವಿಗ್ರಹ ಇದೆ. ಶಾಸ್ತ್ರೀಯವಾಗಿ ಅದಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಏನು ಮಾಡಬಹುದು ಎಂಬುದನ್ನೂ ಚರ್ಚಿಸುತ್ತಿದ್ದೇವೆ. ಗಣೇಶ್‌ ಭಟ್‌ ರಚಿತ ವಿಗ್ರಹ ನಮಗೆ ಸಿಗುವುದು ಅಂತಿಮವಾಗಲಿ. ಬಳಿಕ ನಿರ್ಧರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ರವಿಶಂಕರ್‌ ಕೆ. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next