Advertisement
ಶ್ರೀರಾಮ ಪರಿವಾರ, ರಾಜನೀತಿ, ಧರ್ಮಕ್ಷೇತ್ರ ಆದರ್ಶದ ಜತೆಗೆ ನಿಸರ್ಗ ಪ್ರೇಮಿಯೂ ಆಗಿದ್ದ. ಶ್ರೀರಾಮಚಂದ್ರ ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದರು. ಕೇವಲ ಬಹುಮತವಷ್ಟೇ ಅಲ್ಲದೆ, ಸರ್ವಾನುಮತದ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದ. ಯಾವುದೇ ವಿಷಯವಾಗಲಿ ಅದು ಯಾರೊಬ್ಬರ ವಿರೋಧ ಇಲ್ಲದೆಯೇ ಸರ್ವಮತ ಹೊಂದಿರಬೇಕು ಎಂಬ ಚಿಂತನೆ ಹೊಂದಿದ್ದ. ಶ್ರೀರಾಮಚಂದ್ರನ ಪಟ್ಟಾಭಿಷೇಕದ ಘಟನೆಯನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗಲಿದೆ. ಶ್ರೀರಾಮನ ಪಟ್ಟಾಭಿಷೇಕ ಸಂದರ್ಭದಲ್ಲಿ ಕೈಕೆಯೊಬ್ಬರನ್ನು ಬಿಟ್ಟರೆ ಬೇರಾರ ಆಕ್ಷೇಪ, ವಿರೋಧವೂ ಇರಲಿಲ್ಲ. ಒಬ್ಬರ ವಿರೋಧ ಇದೆ ಎಂಬುದಕ್ಕೂ ಬೆಲೆ ಕೊಟ್ಟದ್ದಷ್ಟೇ ಅಲ್ಲ, ತನ್ನ ತಂದೆ ಕೊಟ್ಟ ಮಾತನ್ನು ಅಕ್ಷರಶಃ ಪಾಲಿಸುತ್ತೇನೆ ಎಂದು ರಾಜನಾಗುವ ಅವಕಾಶವನ್ನು ತೊರೆದು ನಿಂತ ಆದರ್ಶವಾದಿ.
Related Articles
Advertisement
ಶ್ರೀರಾಮ ಕರ್ತವ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದ. ಆ ಕರ್ತವ್ಯನಿಷ್ಠೆ ಪಾಲನೆ ಮಾಡದೆ ಇರುವ ಕಾರಣಕ್ಕೆ ಶಂಭೂಕನಿಗೆ ಶಿಕ್ಷೆಯನ್ನು ನೀಡಿದ್ದ. ಶಂಭೂಕ ವೃತ್ತಿಯಲ್ಲಿ ವೈದ್ಯನಾಗಿದ್ದ. ತರುಣನೊಬ್ಬ ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆಂದು ಬಂದಿದ್ದ. ಆ ವೇಳೆ ಶಂಭೂಕ ತಾನು ಪೂಜೆ, ಧಾನ್ಯದಲ್ಲಿದ್ದು ಚಿಕಿತ್ಸೆ ನೀಡಲಾಗದು ಎಂದಿದ್ದ. ಇದರಿಂದ ತರುಣ ಮೃತಪಟ್ಟಿದ್ದ. ವಿಷಯ ತಿಳಿದ ಶ್ರೀರಾಮ ಶಂಭೂಕನಿಗೆ ಮೃತ್ಯು ಶಿಕ್ಷೆ ನೀಡಿದ್ದ.
ರಾಮರಾಜ್ಯವೆಂದರೆ ಕೇವಲ ಮಾತಿಗೆ, ಭಕ್ತಿಗೆ ಹೇಳುವುದಲ್ಲ. ಶ್ರೀರಾಮನ ಆಳ್ವಿಕೆಯಲ್ಲಿ ಭಿಕ್ಷುಕರು ಇರಲಿಲ್ಲ. ಬೇಡುವವರ ಬದಲು ನೀಡುವವರೇ ಇದ್ದರು. ಕರ ಪಾವತಿಗೆ ಜನ ಸರದಿಯಲ್ಲಿ ನಿಂತು ಕರ ಪಾವತಿಸುತ್ತಿದ್ದರು ಎಂಬುದು ವಾಲ್ಮೀಕಿ ರಾಮಾಯಣದಲ್ಲಿ ನಮೂದಾಗಿದೆ. ಅಯೋಧ್ಯೆಯನ್ನು ಅತ್ಯಂತ ಆದರ್ಶ ನಗರವಾಗಿಸಿದ ಕೀರ್ತಿ ಶ್ರೀರಾಮನಿಗೆ ಸಲ್ಲುತ್ತದೆ. ಈ ಎಲ್ಲ ಕಾರಣಗಳಿಗೆ ಶ್ರೀರಾಮ ಹಿಂದೆ, ಇಂದು ಹಾಗೂ ಮುಂದೆಯೂ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗುತ್ತಾರೆ. ಮರ್ಯಾದಾ ಪುರುಷೋತ್ತಮರಾಗುತ್ತಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಏಕೆ ನಿರ್ಮಾಣ ಮಾಡಬೇಕು, ಅಲ್ಲಿ ಒಂದು ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಿದರೆ ಸೂಕ್ತವಲ್ಲವೆ ಎಂಬುದು ಕೆಲವರ ವಾದವಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಎಂಬಂತೆ ಪ್ರತಿಯೊಂದಕ್ಕೂ ಅದರದ್ದೇಯಾದ ಶಾಸ್ತ್ರ ಇರುತ್ತದೆ. ಶ್ರೀರಾಮ ಮಂದಿರ ನಿರ್ಮಾಣ ಆದರ್ಶ ಪುರುಷೋತ್ತಮ ಕುರುಹು ರೂಪದಲ್ಲಿ. ಆತನ ಚಿಂತನೆ, ಆದರ್ಶಗಳ ಸದಾ ಸ್ಮರಣೆಗೆ, ನಮ್ಮ ಮುಂದಿನ ಪೀಳಿಗೆಗೆ ಅದು ದಾರಿದೀಪವಾಗುವುದಕ್ಕೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ.