ಉಡುಪಿ: ನಗರದ ಕವಿ ಮುದ್ದಣ ಮಾರ್ಗದ ಸನಿಹದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠದ ಮೊದಲ ಮಹಡಿಯಲ್ಲಿ ಸುಮಾರು 2 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಬಾಲಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣೆ ಶುಕ್ರವಾರ ಮಂದಿರ ಮಠದಲ್ಲಿ ನಡೆಯಿತು.
ಮಂದಿರ ಮಠದ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕೆ. ಆವರ್ಸೇಕರ್ ಮುಂಬಯಿ ಅವರು ಉದ್ಘಾಟಿಸಿ, ಮನುಷ್ಯರಾದ ನಾವು ಕೇವಲ ನಿಮಿತ್ತ ಮಾತ್ರ, ಎಲ್ಲವೂ ಪರಮಾತ್ಮನ ಇಚ್ಛೆಯಂತೆಯೇ ನೆರವೇರುತ್ತದೆ. ಕಲಿಯುಗದಲ್ಲಿ ಪವಾಡ, ಕಾರಣಿಕತೆಯಿಂದ ಮೆರೆಯುತ್ತಿರುವ ಶ್ರೀ ನಿತ್ಯಾನಂದ ಸ್ವಾಮಿಯ ಇಚ್ಛೆಯಂತೆ ಭಕ್ತರಿಗೆ ಅನುಕೂಲವಾಗುವ ಬಾಲಭೋಜನಾಲಯ, ಧ್ಯಾನ ಮಂದಿರ ನಿರ್ಮಾಣಗೊಂಡಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮಂದಿರ ಮಠದ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಕೆ. ಮೋಹನಚಂದ್ರನ್ ನಂಬಿಯಾರ್ ಮಾತನಾಡಿ, ಮಂದಿರ ಮಠದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದಂತೆ, ಕಾರಣಿಕತೆಯೂ ವೃದ್ಧಿಸುತ್ತಿದೆ ಎಂದರು.
ಶಾಸಕ ಯಶ್‌ಪಾಲ್ ಎ. ಸುವರ್ಣ ಶುಭಾಶಂಸನೆಗೈದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಂಬಯಿ ಉದ್ಯಮಿಗಳಾದ ಸುರೇಂದ್ರ ಕಲ್ಯಾಣಪುರ, ನಾಗೇಶ್ ಪಾಂಡೆ, ಮಾಧವ ನಾಡಕರ್ಣಿ, ಟ್ರಸ್ಟಿ ಪುರುಷೋತ್ತಮ ಪಿ. ಶೆಟ್ಟಿ, ಉದ್ಯಮಿಗಳಾದ ಡಾ ಜಿ. ಶಂಕರ್, ಡಾ ತಲ್ಲೂರು ಶಿವರಾಮ ಶೆಟ್ಟಿ, ಮಂದಿರ ಮಠದ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ. ದಿವಾಕರ ಶೆಟ್ಟಿ ತೋಟದಮನೆ, ವೀಣಾ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಪ್ರಧಾನ ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಪಾಡಿ, ಕೋಶಾಧಿಕಾರಿ ಶಶಿಕುಮಾರ್ ಶೆಟ್ಟಿ ಗೋವಾ, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿ, ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಾಸುದೇವ ಉಪಾಧ್ಯಾಯ ಬನ್ನಂಜೆಯವರ ನೇತೃತ್ವದಲ್ಲಿ ಗಣಹೋಮ, ಶ್ರೀ ನಿತ್ಯಾಾನಂದ ಸ್ವಾಮಿಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಮಧ್ಯಾಹ್ನ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಬೆಳಗ್ಗೆ ಮಕ್ಕಳ ಕುಣಿತ ಭಜನ ಸ್ಪರ್ಧೆಯಲ್ಲಿ ಜಿಲ್ಲೆಯ 18 ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಅರುಣ್ ಕುಮಾರ್ ಕಲ್ಯಾಣಪುರ, ರವಿಶಂಕರ್ ಹೆಬ್ಬಾರ್, ಸಚಿನ್ ಸುವರ್ಣ ಸಸಿಹಿತ್ಲು ಕಾರ್ಯನಿರ್ವಹಿಸಿದ್ದರು. ರಾಮಚಂದ್ರ ಮಿಜಾರು ನಿರೂಪಿಸಿದರು.