ಅಯೋಧ್ಯೆ: ಪಿತೃಪಕ್ಷದ ಸಂದರ್ಭದಲ್ಲಿ ಲೋಕಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ವೈದಿಕರ ಮುಖೇನ ತಾವು ನಡೆಸಿದ ರಾಮತಾರಕ ಯಜ್ಞ ಸಪ್ತಾಹವು ಸೆ.26ರ ಗುರುವಾರ ನವಮೀ ತಿಥಿ ಪುನರ್ವಸು ನಕ್ಷತ್ರದ ದಿನದಂದೇ ಸಂಪನ್ನಗೊಂಡಿದೆ ಎಂದು ರಾಮಮಂದಿರ ಟ್ರಸ್ಟ್ ವಿಶ್ವಸ್ತರಾದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಗುರುವಾರ ಅಯೋಧ್ಯೆ ರಾಮಮಂದಿರದ ಯಾಗಶಾಲೆಯಲ್ಲಿ ಒಂದು ವಾರ ನಡೆದ ರಾಮತಾರಕ ಯಜ್ಞ ಪೂರ್ಣಾಹುತಿಯ ನಂತರ ಈ ಸಂದೇಶ ನೀಡಿದ್ದಾರೆ.
ಪೂರ್ಣಾಹುತಿ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ರಾಷ್ಟ್ರೀಯ ಮುಖಂಡ ಗೋಪಾಲ್ ಜಿ, ಮಂದಿರದ ಅರ್ಚಕ ಪ್ರಮುಖರು, ಶ್ರೀಗಳ ಆಪ್ತ ಕೃಷ್ಣಮೂರ್ತಿ ಭಟ್ ಮೊದಲಾದವರಿದ್ದರು.
ವಿದ್ವಾನ್ ಶಶಾಂಕ್ ಭಟ್ಟರು ಯಾಗ ನೆರವೇರಿಸಿದರು. ಶ್ರೀಶ ಭಟ್ ರವಿರಾಜ್, ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಮೊದಲಾದವರು ಸಹಕರಿಸಿದರು.