Advertisement
ನಗರದ ಎಲ್ಲೆಡೆ ಯಾತ್ರಿಕರು ಭಕ್ತಿಭಾವಗಳಿಂದ ಪರವಶರಾಗಿದ್ದರು. ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹೇಗಾಗುತ್ತೋ ಎಂದು ಎಲ್ಲರಿಗೂ ಕಾತರ ಕುತೂ ಹಲಗಳಿದ್ದವು. ಐದು ಶತಮಾನಗಳ ಹೋರಾಟ, ಕನಸು ನನಸಾಗಿದ್ದು ಹಲವರ ಕಣ್ಣುಗಳ ಮೂಲಕ ಆನಂದಬಾಷ್ಪದ ಮೂಲಕ ಸಮಾಧಾನ ಹೊರ ಬಂದಿತು.
ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ರು. ನಗರದಲ್ಲಿ ಹತ್ತಾರು ಕಿ.ಮೀ. ನಡೆದ ನನಗೆ ಎಲ್ಲಿಯೂ ಕಸ ಕಾಣಿಸಲಿಲ್ಲ, ಎಲ್ಲೆಡೆ ಸ್ವತ್ಛತೆಯೇ ಕಾಣುತ್ತಿತ್ತು. ಸೋಮವಾರ ಬೆಳಗ್ಗೆಯಿಂದ ಜನ ಅಯೋಧ್ಯೆ ಕಡೆ ಜನರು ಬರುತ್ತಿರುವ ಪ್ರಮಾಣ ಹೆಚ್ಚಿದ್ದರಿಂದ, ಸಹಜವಾಗಿಯೇ ರಸ್ತೆಗಳು ಗಿಜಿಗುಡುತ್ತಿದ್ದವು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ವಾಹನವನ್ನು ಎಲ್ಲೋ ನಿಲ್ಲಿಸಿ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡೇ ಹೋಗಬೇಕಾಯಿತು. ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆದ ನಂತರ, ದೇವರಿಗೆ ನೈವೇದ್ಯ ಸಲ್ಲಿಸಿದ ಬಳಿಕ ಬಂದ ಯಾತ್ರಿಕರಿಗೆ ಊಟ ದೊರೆಯಲಿ ಎಂಬ ಕಾರಣಕ್ಕಾಗಿ ಯಾವುದೇ ಹೋಟೆಲ್‌ಗಳು ತೆರೆದಿರ ಲಿಲ್ಲ. ಅಲ್ಲಿಯವರೆಗೆ ಜನರು ಹಸಿವೆಯಿಂದ ಪರದಾಡಿದರು. ರಸ್ತೆ ಬದಿಯ ಹೋಟೆಲ್‌ಗಳಲ್ಲಿ ಚಹಾ ಮತ್ತು ಬಿಸ್ಕತ್ತು ಹೊರತುಪಡಿಸಿದರೆ ಬೇರೇನೂ ಲಭ್ಯವಿರಲಿಲ್ಲ. ಪ್ರಾಣ ಪ್ರತಿಷ್ಠಾಪನೆ ಮುಗಿದ ನಂತರವೇ ಹೋಟೆಲ್‌ಗಳ ಬಾಗಿಲು ತೆರೆದಿದ್ದು!.
Related Articles
Advertisement
ಚಳಿಗಾಲವಾದ್ದರಿಂದ ಬೆಳಗ್ಗೆ ಒಂಭತ್ತರವರೆಗೂ ಹತ್ತು ಡಿಗ್ರಿಗಿಂತ ಕಡಿಮೆ ತಾಪಮಾನ ಇದ್ದ ಕಾರಣ, ಅಂಗಡಿ ಮುಂಗಟ್ಟುಗಳ ಮುಂದೆ ಜನರಿಗಾಗಿ ಅಗ್ಗಿಷ್ಟಿಕೆಗಳ ವ್ಯವಸ್ಥೆಯನ್ನು ವ್ಯಾಪಾರಿಗಳು ಮಾಡಿದ್ದರು.
ಎಲ್ಲೆಡೆಯೂ ಕೇಸರಿ ಧ್ವಜಗಳ ಹಾರಾಟ ಕಂಡು ಬಂದಿತು. ನಗರದ ರಸ್ತೆಗಳಿಗೆ ಕೇಸರಿ ಬಟ್ಟೆಯ ತೋರಣಗಳನ್ನು ಕಟ್ಟಲಾಗಿತ್ತು. ಯಾತ್ರಿಕರು ತಮ್ಮ ಕೈಗಳಲ್ಲಿ ಶ್ರೀರಾಮ, ಹನುಮಂತನ ಚಿತ್ರಗಳಿರುವ ಧ್ವಜಗಳನ್ನು ಹಿಡಿದು ಸಾಗುತ್ತಿದ್ದರು. ಎಲ್ಲೆಡೆ ಹಬ್ಬದ ವಾತಾವರಣ ಮೂಡಿತ್ತು. ಯಾತ್ರಿಕರು ಪರಸ್ಪರ ವಾಗಿ ಜೈ ಶ್ರೀರಾಮ್ ಎಂದು ಶುಭಾಶಯಗಳ ವಿನಿಯಮ ಮಾಡಿಕೊಳ್ಳುತ್ತಿದ್ದರು. ಅಯೋಧ್ಯೆಯ ಸೀತಾ ಘಾಟ್ , ಪ್ರಮೋದವನಗಳಲ್ಲಿ ಹಿಂದೂ ಧರ್ಮದ ವಿವಿಧ ಪಂಥಗಳ ಆಶ್ರಮ, ಮಠಗಳಿದ್ದು ಅವುಗಳಲ್ಲಿ ಯಾತ್ರಿಕರಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷ ನಾನು ಅಯೋಧ್ಯೆಗೆ ಬಂದಾಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಯೋಧ್ಯೆಯ ಕಿರಿದಾದ ರಸ್ತೆಗಳ ಅಗಲೀಕರಣ ಆಗಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಏಕರೀತಿಯಲ್ಲಿ ವಿನ್ಯಾಸ ಗೊಳಿಸಿದ್ದರಿಂದ ಮುಖ್ಯರಸ್ತೆಗಳು ವಿಶೇಷ ವಾಗಿ ಕಂಡವು. ನಗರದ ರಾಮಪಥ, ಧರ್ಮಪಥ, ಹನುಮಾನ್ ಗಡಿ ತಿರಾಹ, ಲತಾ ಮಂಗೇಶ್ಕರ್ ಚೌಕ್, ತುಳಸಿ ಉದ್ಯಾನ್ ಮುಂತಾದ ಪ್ರದೇಶಗಳಲ್ಲಿ ಸಂಭ್ರಮ ಮನೆಮಾಡಿತ್ತು.
ಎಲ್ಲೆಡೆ ಸಾತ್ವಿಕ ಶಕ್ತಿಯ ಪ್ರದರ್ಶನವಿತ್ತು. ಜನರು ದೇವಾಲಯಗಳಿಗಿಂತ ಬೀದಿಗಳಲ್ಲಿ ಹೆಚ್ಚಾಗಿ ಕಂಡರು. ಜನರ ಆಸಕ್ತಿ ಜನರನ್ನು ನೋಡುವ ಸಂಭ್ರಮದಲ್ಲಿತ್ತು. ಎಲ್ಲೆಡೆ ತೃಪ್ತಿಯ ಭಾವ.. ಕಾತರದಿಂದ ನಿರೀಕ್ಷಿಸುತ್ತಿದ್ದ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಿರ್ವಿಘ್ನವಾಗಿ ನೆರವೇರಿದ್ದ ರಿಂದ ಎಲ್ಲರಲ್ಲಿಯೂ ಸಮಾಧಾನ ಮೂಡಿತ್ತು.
ಇಷ್ಟು ವರ್ಷಗಳ ಕಾಲ ಅಯೋಧ್ಯೆಯಲ್ಲಿದ್ದರೂ ಏನನ್ನೋ ಕಳೆದುಕೊಂಡ ಹಾಗಿತ್ತು. ಇಂದು ರಾಮಲಲ್ಲಾನ ಪ್ರತಿಷ್ಠಾಪನೆ ಆಗಿದೆ, ಬಾಲರಾಮನಿಗೆ ಭವ್ಯ ದೇವಾಲಯ ನಿರ್ಮಾಣವಾಗಿದೆ. ನಮ್ಮ ಜೀವನವೂ ಸುಧಾರಿಸಲಿದೆ.-ಅತುಲ್ ಶುಕ್ಲಾ ಮೊಬೈಲ್ ಫೋನ್ ಶಾಪ್ ಮಾಲಿಕ ಜನ್ಮಭೂಮಿಯ ಒಂದು ಸುಸಂಸ್ಕೃತ ಮನೆತನ ದಲ್ಲಿ ನಾನು ಜನಿಸಿದ್ದೇನೆ. ಇಲ್ಲೇ ಬೆಳೆದಿದ್ದೇನೆ. ಮಂದಿರದ ನಿರ್ಮಾಣ ನೋಡಿದ್ದೇನೆ. ನನ್ನ ಪೂರ್ವಿಕರ ಕನಸು ನನಸಾಗಿದೆ. ನಾನು ಇಲ್ಲೇ ಮರಣಿಸಬೇಕು ಅದನ್ನು ರಾಮಲಲ್ಲಾ ನನಗೆ ಕೊಡಲಿ.
-ಸುಧಾಕರ ಮಿಶ್ರಾ, ತುಳಸಿ ಮಾಲೆ ಮಾರಾಟಗಾರ ನಾನೊಬ್ಬ ಸನಾತನಿ ಹಿಂದೂ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತಿದೆ. ರಾಮಲಲ್ಲಾನ ದೇವಾಲಯದ ಲೋಕಾರ್ಪಣೆ ಆಯಿತು. ಮಥುರಾದ ಶ್ರೀಕೃಷ್ಣ ಜನ್ಮಸ್ಥಳದ ವಿಮೋಚನೆ ಯಾವಾಗ ಆಗುತ್ತದೆ ಎಂಬುದು ಕಾಡುತ್ತಿದೆ.
-ಕಾನ್ಹಾ ಪಂಡಿತ್,
ನಂದಗಾಂವ್ ಅರ್ಚಕ ನಾನು ಹನುಮಾನ್ ದೇವರ ಭಕ್ತ. ಈ ಗದೆಯನ್ನು ಎಲ್ಲಿಗೆ ಹೋದರೂ ತೆಗೆದುಕೊಂಡು ಹೋಗುತ್ತೇನೆ. ಇದು ನನ್ನ
ಹೆಮ್ಮೆಯ ವಿಷಯ. ಮಂದಿರದ ಕನಸು ನನಸಾಗಿದೆ. ಇದರಿಂದ ನನ್ನ ಉತ್ಸಾಹ ದ್ವಿಗುಣಗೊಂಡಿದೆ.
-ದಮೋಹದ ನರೇಂದ್ರ ದುಬೆ, ಮಧ್ಯಪ್ರದೇಶ ನಿವಾಸಿ -ಮುರಳೀಕೃಷ್ಣ ಮದ್ದಿಕೇರಿ