ಶೃಂಗೇರಿ: ಅಯೋಧ್ಯೆ ಶ್ರೀರಾಮಮಂದಿರದ ಜಲಪ್ರಸಾದ ತೀರ್ಥ ಶ್ರೀ ಶಾರದಾ ಪೀಠಕ್ಕೆ ತಲುಪಿದೆ. ವಾರಾಣಸಿ ಮೂಲದ ಸಪ್ತನದಿ ಜಲ ಸಂಗ್ರಹ ಕುಂಭವನ್ನು ಆಯೋಧ್ಯೆ ಯಾತ್ರೆ ಸಮಿತಿ ಪದಾಧಿ ಕಾರಿಗಳು ಶಾರದೆಯ ಸನ್ನಿ ಧಿಗೆ ತಂದರು. ಬಳಿಕ ಕಾಶ್ಮೀರದ ಗಡಿಯಲ್ಲಿರುವ ನಂದಲಾಲ್‌ಜೀ ಆಶ್ರಮದ ಗುರು ಮೋಹನ್ ಕಿಶನ್ ಮೊಂಘಾ ನೇತೃತ್ವದಲ್ಲಿ ಜಗನ್ಮಾತೆಯ ಸನ್ನಿ ಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಜಲತೀರ್ಥ ಕುಂಡವನ್ನು ಭಕ್ತರಿಗೆ ನೀಡಲು ಸಮಿತಿಯ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಮಂಜುನಾಥ ಶರ್ಮ ಅವರಿಗೆ ಮೋಹನ್ ಕಿಶನ್ ಮೊಂಘಾ ಹಸ್ತಾಂತರಿಸಿದರು. ಶ್ರೀಮಠದ ಆವರಣದಲ್ಲಿ ನೆರೆದ ಭಕ್ತರಿಗೆ ಪವಿತ್ರ ತೀರ್ಥ ವಿತರಿಸಲಾಯಿತು.
ಸಮಿತಿಯ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಮಂಜುನಾಥ ಶರ್ಮ ಮಾತನಾಡಿ, ಸನಾತನ ಹಿಂದೂ ಧರ್ಮದಲ್ಲಿ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ಹೀಗೆ ಏಳು ನದಿಗಳು ಪವಿತ್ರವಾದವು. ಇವುಗಳಲ್ಲಿ ಐದು ನದಿಗಳು ಭಾರತ ದೇಶದಲ್ಲಿ ಲಭ್ಯವಿದ್ದು, ಸರಸ್ವತಿ ಮತ್ತು ಸಿಂಧೂ ಪಾಕ್ ಅಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಹುಟ್ಟಿ ಅದೇ ಭಾಗದಲ್ಲಿ ಹರಿಯುತ್ತವೆ. ಜಲಾಭಿಷೇಕಕ್ಕೆ ಎರಡು ನದಿಗಳ ನೀರು ಪ್ರಮುಖ. ನೀಲಂ ಕಣಿವೆಯ ಶಾರದಾ ಗ್ರಾಮದಲ್ಲಿ ಲಭ್ಯವಿರುವ ಎರಡು ನದಿಗಳ ನೀರಿನ ಜತೆಗೆ ಅದೇ ಪ್ರದೇಶದ ಪಾರ್ವತಿ ಮತ್ತು ನಾರದ ಘಾಟಿಯಲ್ಲಿ ಹರಿಯುತ್ತಿರುವ ಮಧುಮತಿ, ಕಿಶನ್‌ಗಂಗಾ ನದಿಗಳನ್ನು ಸಂಗ್ರಹಿಸಲಾಗಿದೆ.
ಭಾರತ ಮೂಲದ ಶಾರದಾ ಸರ್ವಜ್ಞಪೀಠ ರಕ್ಷಣ ಸಮಿತಿ ಪಿಒಕೆಯ ಮುಸ್ಲಿಂ ಬಾಂಧವರ ಮೂಲಕ ಸಂಗ್ರಹಿಸಿ ಮುಂಬಯಿಗೆ ತರಿಸಲಾಗಿದೆ. ಕಳೆದ ತಿಂಗಳು ಶೃಂಗೇರಿ ಉಭಯ ಶ್ರೀಗಳಾದ ಭಾರತೀರ್ಥ ಮಹಾಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅನುಗ್ರಹ ಪಡೆದು ಅವರ ಆಶಯದಂತೆ ಯಾತ್ರೆ ಮೂಲಕ ಅಯೋಧ್ಯೆ ತಲುಪಿಸಿದ್ದೆವು. ಅಲ್ಲಿ ಬಳಸಿದ ಜಲವನ್ನು ಮತ್ತೆ ಸಂಗ್ರಹಿಸಿ ಶೃಂಗೇರಿಗೆ ತರಲಾಗಿದೆ ಎಂದರು.
ಕಾಶ್ಮೀರದ ನಂದಲಾಲ್‌ಜೀ ಆಶ್ರಮದ ಗುರು ಮೋಹನ್ ಕಿಶನ್ ಮೊಂಘಾ ಮಾತನಾಡಿ, ಈ ಜಲಭರಿತ ಕುಂಭವನ್ನು ಭಾರತದ ಎಲ್ಲ ಜ್ಯೋತಿರ್ಲಿಂಗ, ಶಕ್ತಿ ಪೀಠಗಳಿಗೆ ಒಯ್ಯಲಾಗುತ್ತಿದೆ. ಅಲ್ಲಿ ಬರುವ ಭಕ್ತರಿಗೆ ಶ್ರೀರಾಮತೀರ್ಥವನ್ನು ಪ್ರಸಾದ ರೂಪದಲ್ಲಿ ಎಲ್ಲ ವರ್ಗದ ಜನರಿಗೂ ವಿತರಿಸಲಾಗುತ್ತದೆ. ಕರ್ನಾಟಕದಲ್ಲಿ ಅಗಮತ್ರಯ ಅಗಮಿಕ ಅರ್ಚಕರ ಮಹಾಮಂಡಲ, ಮುಜರಾಯಿ ಇಲಾಖೆ, ಅರ್ಚಕರ ಸಂಘ ಮುಂತಾದ ಸಂಘಟನೆಗಳಿಗೆ ನೀಡುವ ಉದ್ದೇಶ ನಮ್ಮದಾಗಿದೆ ಎಂದರು.
ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷ ಚಂಪಾಲಾಲ್, ಪದಾ ಧಿಕಾರಿಗಳಾದ ರವೀಂದ್ರ ಕಣಕಟ್ಟೆ, ಆದರ್ಶ, ಸರಸ್ವತಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.