Advertisement

ಅಯೋಧ್ಯೆ: ಸದ್ಯಕ್ಕಿಲ್ಲ ಪರಿಹಾರ

08:21 AM Oct 30, 2018 | Team Udayavani |

ಹೊಸದಿಲ್ಲಿ: ಅಯೋಧ್ಯೆ ವಿವಾದ  ಸದ್ಯಕ್ಕಂತೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ವಿವಾದಕ್ಕೆ ಸಂಬಂಧಿಸಿದ 14 ದೂರುಗಳ ವಿಚಾರಣೆಯ ದಿನಾಂಕವನ್ನು ಜನವರಿಯಲ್ಲಿ ನಿಗದಿಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ಸೋಮವಾರ ಈ ಸಂಬಂಧ ನಾಲ್ಕು ನಿಮಿಷಗಳವರೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಜನವರಿ ಮೊದಲ ವಾರದಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ ಎಂದಿದೆ. ಇದರಿಂದಾಗಿ ಬಿಜೆಪಿ ಅಧ್ಯಾದೇಶದ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತದೆಯೇ ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

Advertisement

100ಕ್ಕೂ ಹೆಚ್ಚು ವರ್ಷಗಳಿಂದ ಈ ಪ್ರಕರಣ ನನೆಗುದಿಗೆ ಬಿದ್ದಿದೆ. ಹೀಗಾಗಿ ಶೀಘ್ರದಲ್ಲೇ ವಿಚಾರಣೆ ನಡೆಸಿ ಇತ್ಯರ್ಥ ಗೊಳಿಸಬೇಕು ಎಂದು ಉತ್ತರ ಪ್ರದೇಶ ಸರಕಾರದ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಆದರೆ ನಮಗೆ ಬೇರೆ ಆದ್ಯತೆಗಳೂ ಇವೆ. ಹೀಗಾಗಿ ಜನವರಿಯಲ್ಲಿ ಸೂಕ್ತ ಪೀಠ ಈ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಪಡಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಹೇಳಿದರು. ಈ ಮೂಲಕ ನ್ಯಾಯಪೀಠದಲ್ಲಿ ವಿವಾದಿತ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಮೂರ್ತಿಗಳ ಪೈಕಿ ತಾನು ಇರುವುದಿಲ್ಲ ಎಂಬ ಸುಳಿವನ್ನು ಸಿಜೆಐ ಗೊಗೋಯ್‌ ನೀಡಿದ್ದಾರೆ. ಇದೇ ವೇಳೆ, ನಾವು ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೂ ಕಾಯುತ್ತೇವೆ ಎಂದು ಅರ್ಜಿದಾರರು ಹೇಳಿದ್ದಾರೆ.

ಹಿಂದೂಗಳ ಸಹನೆ ಮೀರಿದೆ
ರಾಮಮಂದಿರ ವಿಚಾರದಲ್ಲಿ ಹಿಂದೂಗಳ ಸಹನೆ ಕಡಿಮೆಯಾಗುತ್ತಿದೆ. ಹಿಂದೂ ಗಳ ನಂಬಿಕೆಯಲ್ಲಿ  ಶ್ರೀರಾಮನೇ ಕೇಂದ್ರ ಬಿಂದು. ಅವರು ಸಹನೆಯನ್ನು ಕಳೆದು ಕೊಂಡರೆ ಏನಾಗುತ್ತದೆಯೋ ಗೊತ್ತಿಲ್ಲ. ಇದನ್ನು ಹಿಂದೂ-ಮುಸ್ಲಿಂ ವಿಷಯವನ್ನಾ ಗಿಸಿದ್ದೇ ಕಾಂಗ್ರೆಸ್‌ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ. 

ಅಧ್ಯಾದೇಶಕ್ಕೆ ಒತ್ತಾಯ
ಅಯೋಧ್ಯೆ ವಿವಾದ ಪರಿಹಾರ ಕಂಡುಕೊಳ್ಳಲು ಹಿಂದೂಗಳು ಇನ್ನೂ ದೀರ್ಘಾವಧಿ ಕಾಯಲು ಸಾಧ್ಯವಿಲ್ಲ. ರಾಮಮಂದಿರ ನಿರ್ಮಾಣಕ್ಕಾಗಿ ಸರಕಾರ ಅಧ್ಯಾದೇಶವನ್ನು ಜಾರಿಗೊಳಿಸಬೇಕು ಎಂದು ಸರಕಾರವನ್ನು ವಿಶ್ವ ಹಿಂದೂ ಪರಿಷತ್‌ ಆಗ್ರಹಿಸಿದೆ. ಚಳಿಗಾಲದ ಅಧಿವೇಶನದಲ್ಲೇ ಪ್ರಧಾನಿ ಮೋದಿ ಸರಕಾರ ಮಸೂದೆ ಮಂಡಿಸಬೇಕು ಎಂದು ವಿಎಚ್‌ಪಿ ಮುಖ್ಯಸ್ಥ ಆಲೋಕ್‌ ಕುಮಾರ್‌ ಹೇಳಿದ್ದಾರೆ. 

ಮೋದಿ ನಿಲುವು ಸ್ಪಷ್ಟಪಡಿಸಲಿ: ರಾಮಮಂದಿರ ವಿಚಾರದಲ್ಲಿ ಅಧ್ಯಾದೇಶ ಹೊರಡಿಸಬೇಕು ಎಂಬ ಬೇಡಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಆಗ್ರಹಿಸಿದ್ದಾರೆ. ಅಧ್ಯಾದೇಶ ಹೊರಡಿಸುವುದು ಸಂಸತ್ತಲ್ಲ. ಇದನ್ನು ಹೊರಡಿಸುವುದು ಆಡಳಿತ. ಹೀಗಾಗಿ ಪ್ರಧಾನಿಯೇ ಇದರ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಅವರು ಆಕ್ಷೇಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next