ಪೋರ್ಟ್ ಆಫ್ ಸ್ಪೇನ್: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಎರಡು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಏಕದಿನ ಸರಣಿಯನ್ನು ಜಯಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಆರು ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದರೆ, ಭಾರತ ತಂಡವು ಎಂಟು ವಿಕೆಟ್ ಕಳೆದುಕೊಂಡು ಇನ್ನೂ ಎರಡು ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.
ವಿಂಡೀಸ್ ಗೆ ಶಾಯ್ ಹೋಪ್ ಮತ್ತು ನಾಯಕ ನಿಕೋಲಸ್ ಪೂರನ್ ಬ್ಯಾಟಿಂಗ್ ಬಲ ತುಂಬಿದರು. ತನ್ನ ನೂರನೇ ಏಕದಿನ ಪಂದ್ಯವಾಡಿದ ಹೋಪ್ ಶತಕ ಸಿಡಿಸಿ ಮಿಂಚಿದರು. 135 ಎಸೆತ ಎದುರಿಸಿದ ಅವರು 115 ರನ್ ಗಳಿಸಿದರು. ನಾಯಕ ಪೂರನ್ 77 ಎಸೆತಗಳಲ್ಲಿ 74 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ಒಂದು ಬೌಂಡರಿ ಮತ್ತು ಆರು ಸಿಕ್ಸರ್ ಬಾರಿಸಿದರು. ಉಳಿದಂತೆ ಮೇಯರ್ಸ್ 39 ರನ್ ಮತ್ತು ಬ್ರೂಕ್ಸ್ 35 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಕಿತ್ತರೆ, ಹೂಡಾ, ಅಕ್ಷರ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು. ಪದಾರ್ಪಣೆ ಮಾಡಿದ ವೇಗಿ ಆವೇಶ್ ಖಾನ್ ಕೇವಲ ಆರು ಓವರ್ ನಲ್ಲಿ 54 ರನ್ ನೀಡಿ ದುಬಾರಿಯಾದರು.
ಇದನ್ನೂ ಓದಿ:ಹೇಗಿರುತ್ತೆ ಮರುಭೂಮಿ ಅವಳಿ ನಗರ? :ಮಿರರ್ ಲೈನ್ ಯೋಜನೆಯ ಮತ್ತಷ್ಟು ವಿವರ ಬಹಿರಂಗ
ಗುರಿ ಬೆನ್ನತ್ತಿದ ಭಾರತ ನಾಯಕ ಧವನ್ (13 ರನ್) ವಿಕೆಟ್ ಆರಂಭದಲ್ಲೇ ಕಳೆದುಕೊಂಡಿತು. ನಂತರ ಗಿಲ್ 43 ರನ್ ಮತ್ತು ಶ್ರೇಯಸ್ ಅಯ್ಯರ್ 63 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 54 ರನ್ ಬಾರಿಸಿದರು. ಅಯ್ಯರ್ ಮತ್ತು ಸಂಜು 99 ರನ್ ಜೊತೆಯಾಟವಾಡಿದರು. ಆದರೆ ಕೊನೆಯಲ್ಲಿ ಬಿರುಸಿನ ಆಟಕ್ಕೆ ನಿಂತ ಅಕ್ಷರ್ ಪಟೇಲ್ ಕೇವಲ 35 ಎಸೆತಗಳಲ್ಲಿ ಅಜೇಯ 64 ರನ್ ಬಾರಿಸಿದರು. ಅಕ್ಷರ್ ಈ ಇನ್ನಿಂಗ್ಸ್ ನಲ್ಲಿ ಐದು ಸಿಕ್ಸರ್ ಸಿಡಿಸಿದರು.
ಭಾರತ ತಂಡ ಕೊನೆಯ ಹತ್ತು ಓವರ್ ಗಳಲ್ಲಿ 100 ರನ್ ಕಲೆಹಾಕಿತು. ಅಕ್ಷರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಮೂಲಕ ಭಾರತ ತಂಡ ವಿಂಡೀಸ್ ವಿರುದ್ಧ ಏಕದಿನ ಸರಣಿ ಗೆಲುವಿನ ಅಭಿಯಾನವನ್ನು ಮುಂದುವರಿಸಿತು. ವಿಂಡೀಸ್ ವಿರುದ್ಧ ಸತತ 12 ನೇ ಏಕದಿನ ಸರಣಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ವಿಶ್ವದಾಖಲೆ ಬರೆಯಿತು.