ಮಂಡ್ಯ: ಶುಚಿತ್ವ, ನೈರ್ಮಲ್ಯ ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋ ಚಿತ್ರ ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಜಿಪಂ ಸಿಇಒ ಎಸ್. ಎಂ.ಜುಲ್‌ಫಿಖಾರ್ ಉಲ್ಲಾ ತಿಳಿಸಿದರು.
ಬೆಂಗಳೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಂಡ್ಯ ಜಿಲ್ಲಾ ಪಂಚಾಯತ್, ಜಲಜೀವನ್ ಮಿಷನ್ ಹಾಗೂ ಕರ್ಡ್ಸ್ ವತಿಯಿಂದ ಗ್ರಾಮಿಣ ಸಮುದಾಯಗಳಿಗೆ ನೀರು ನಿರ್ವಹಣೆ, ನೈರ್ಮಲ್ಯ ಜಲಮೂಲಗಳ ಸಂರಕ್ಷಣೆ ಮತ್ತು ಘನ, ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಕಿರುಚಿತ್ರ ಪ್ರದರ್ಶನ ವಾಹನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು.
ಪ್ರತೀ ಮನೆಗೆ ನಲ್ಲಿ ಸಂಪರ್ಕ: ಪ್ರತೀ ಮನೆಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸುವುದು ಜಲ ಜೀವನ ಮಿಷನ್ ಯೋಜನೆಯ ಪ್ರಮುಖ ಉದ್ದೇಶ. ಯೋಜನೆಗೆ ಕೇಂದ್ರ ಸರ್ಕಾರ ಶೇ.37.5ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.37.5ರಷ್ಟು ಅನುದಾನ ನೀಡುತ್ತದೆ. ಉಳಿದ ಶೇ.25ರಷ್ಟು ಅನುದಾನದಲ್ಲಿ ಶೇ.15ರಷ್ಟು ಅನುದಾನವನ್ನು ಗ್ರಾಮ ಪಂಚಾಯಿತಿ ಗಳು ತಮ್ಮ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಆಯೋಗದ ಅನುದಾನದಡಿ ಪಾವತಿಸಬೇಕು. ಉಳಿದ ಶೇ.10ರಷ್ಟು ಅನುದಾನವನ್ನು ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಗ್ರಾಮದ ಸಾರ್ವಜನಿಕರು ವಂತಿಗೆಯಾಗಿ ನೀಡಬೇಕಾಗುತ್ತದೆ ಎಂದರು.
ಕರ್ಡ್ಸ್ ಸಂಸ್ಥೆ ಆಯ್ಕೆ: ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 2020-21ನೇ ಸಾಲಿಗೆ 608 ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಲ ಜೀವನ ಮಿಷನ್ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕರ್ಡ್ಸ್ ಸಂಸ್ಥೆಯು ಅನುಷ್ಠಾನ ಬೆಂಬಲ ಸಂಸ್ಥೆಯಾಗಿ ಆಯ್ಕೆಯಾಗಿದೆ ಎಂದು ಹೇಳಿದರು.
ಯೋಜನೆಗೆ ಪೂರಕವಾದ ಕಾರ್ಯ: ಈ ಸಂಸ್ಥೆಯು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಎಲ್ಲ ಗ್ರಾಮಗಳಿಗೂ ತೆರಳಿ ಗ್ರಾಮ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು. ಬೀದಿ ನಾಟಕಗಳ ಮೂಲಕಅರಿವು ಮೂಡಿಸುವುದು. ಸ್ವ-ಸಹಾಯ ಸಂಘಗಳ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ವಿಡಿಯೋ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸುವುದು ಹಾಗೂ ಸಮುದಾಯ ವಂತಿಗೆಯನ್ನು ಸಂಗ್ರಹಿಸಲು ಗ್ರಾಮ ಪಂಚಾಯತ್‌ಗಳಿಗೆ ಸಹಕರಿಸುವ ಕಾರ್ಯವನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ 130 ಗ್ರಾಮಗಳಲ್ಲಿ ಚಿತ್ರ ಪ್ರದರ್ಶನ ವಾಹನದ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಮತ್ತು ಕರ್ಡ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.
ಶುಚಿತ್ವ, ನೈರ್ಮಲ್ಯ ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋ ಚಿತ್ರ ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾ ಗುತ್ತಿದೆ. ಸಾರ್ವಜನಿಕರು ಇದರ ಬಗ್ಗೆ ಅರಿವು ಪಡೆದುಕೊಳ್ಳುವ ಮೂಲಕ ಶುಚಿತ್ವ ಹಾಗೂ ನೈರ್ಮಲ್ಯದ ಜತೆಗೆ ನೀರಿಗೂ ಮಹತ್ವ ನೀಡಬೇಕು.
–ಎಸ್.ಎಂ.ಜುಲ್‌ಫಿಖಾರ್ ಉಲ್ಲಾ, ಸಿಇಒ, ಜಿಪಂ