Advertisement

ತಂಬಾಕು ವಿರುದ್ಧ ಆದಿವಾಸಿ ಮಕ್ಕಳ ಜಾಗೃತಿ ಕೂಗು

01:41 PM Jun 01, 2023 | Team Udayavani |

ಚಾಮರಾಜನಗರ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬಿಳಿಗಿರಿ ರಂಗನ ಬೆಟ್ಟದ ಸುತ್ತಮುತ್ತಲ ಪೋಡುಗಳಲ್ಲಿ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಸ್ಥಳೀಯ ಶಾಲೆಗಳ ಮಕ್ಕಳಿಂದ ಮನೆ ಮನೆ ಜಾಗೃತಿ ಜಾಥಾ ನಡೆಯಿತು.

Advertisement

ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಂಬಾಕಿನ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಎರಕನಗದ್ದೆ, ಮುತ್ತುಗದ ಗದ್ದೆ ಹಾಗೂ ಹೊಸಪೋಡಿನ ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಕರಪತ್ರ ಹಂಚಿದರು. ಸೆಂಟರ್‌ ಫಾರ್‌ ಟ್ರೈನಿಂಗ್‌ ರೀಸರ್ಚ್‌ ಆ್ಯಂಡ್‌ ಇನ್ನೋವೇಶನ್‌ ಇನ್‌ ಟ್ರೈಬಲ್‌ ಹೆಲ್ತ್‌ ಯೋಜನೆಯಡಿ ಇನ್ಸ್‌ಟಿಟ್ಯೂಟ್‌ ಆಫ್ ಪಬ್ಲಿಕ್‌ ಹೆಲ್ತ್‌ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಹಾಗೂ ಯಳಂದೂರು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಬಿಳಿಗಿರಿರಂಗನಬೆಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರಂಗಸ್ವಾಮಿ ಚಾಲನೆ ನೀಡಿ ಮಾತನಾಡಿದರು.

ಜಾಗೃತಿ: ಮಕ್ಕಳು ಸಮಾಜದ ಭವಿಷ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹದಿಹರೆಯದ ಮಕ್ಕಳು ತಂಬಾಕಿನ ದಾಸರಾಗುತ್ತಿದ್ದಾರೆ. ಈ ತಂಬಾಕಿನ ಚಟ ಜೀವನವನ್ನೇ ಹಾಳು ಮಾಡುತ್ತದೆ. ಇದರಿಂದ ಕ್ಯಾನ್ಸರ್‌ ಸೇರಿ ಅನೇಕ ರೀತಿಯ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಯಾವುದೇ ಕಾರಣಕ್ಕೂ ಮಕ್ಕಳು ಈ ಚಟದ ದಾಸರಾಗಬಾರದು, ತಂಬಾಕಿನ ಸೇವನೆ ದುಷ್ಪರಿಣಾಮದ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಅಲ್ಲದೇ, ನಿರಂತರವಾಗಿ ಮಕ್ಕಳಿಗೆ ಪ್ರತಿದಿನ ತಂಬಾಕಿನ ದುಷ್ಪರಿಣಾಮದ ಕುರಿತು ಬೆಳಗಿನ ಪ್ರಾರ್ಥನಾ ಸಭೆಯಲ್ಲೇ 2 ನಿಮಿಷ ಜಾಗೃತಿ ಮೂಡಿಸಲಾಗುವುದೆಂದರು.

ಅಚಲ ಮನೋಬಲವಿರಲಿ: ಪಬ್ಲಿಕ್‌ ಹೆಲ್ತ್‌ ಸಂಸ್ಥೆಯ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರಶಾಂತ್‌ ಮಾತನಾಡಿ, ಚಟದಿಂದ ಮುಕ್ತಿ ಪಡೆಯ ಬಯಸುವ ಸ್ಥಳೀಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬೆಟ್ಟದ ವಿ.ಜಿ.ಕೆ.ಕೆ ಆಸ್ಪತ್ರೆಯಲ್ಲಿ ಪ್ರತಿ ಶುಕ್ರವಾರ ಹೊಸ ಜೀವನ ಎಂಬ ಹೆಸರಿನಡಿಯಲ್ಲಿ ತಂಬಾಕು ಸೇವನೆ ವ್ಯಸನ ಮುಕ್ತ ಕೇಂದ್ರ ವನ್ನು ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೇ, ನಿಮ್ಹಾನ್ಸ್‌ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಚಿತ ಸಹಾಯವಾಣಿ ಸಂಖ್ಯೆ 1800 112356 ಕರೆ ಮಾಡಿ ಕನ್ನಡದಲ್ಲೇ ತಂಬಾಕು ಸೇವನೆಯಿಂದ ವಿಮುಕ್ತಿ ಹೊಂದಲು ಅಗತ್ಯ ಸಲಹೆ ಹಾಗೂ ಆಪ್ತ ಸಮಾಲೋಚನೆ ಸೇವೆ ಪಡೆಯಬಹುದು ಎಂದು ತಿಳಿಸಿದರು.

Advertisement

ಜಾಗೃತಿ ನಡಿಗೆಯಲ್ಲಿ, ಸೆಂಟರ್‌ ಫಾರ್‌ ಟ್ರೈನಿಂಗ್‌ ರೀಸರ್ಚ್‌ ಆ್ಯಂಡ್‌ ಇನ್ನೋವೇಶನ್‌ ಇನ್‌ ಟ್ರೈಬಲ್‌ ಹೆಲ್ತ್‌ ಯೋಜನೆಯ ಸಿಬ್ಬಂದಿ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲೆ, ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು, ಯರಕನ ಗದ್ದೆ, ಮುತ್ತುಗದಗದ್ದೆ ಅಂಗನವಾಡಿ ಶಿಕ್ಷಕರು, ಸ್ಥಳೀಯ ಆದಿವಾಸಿ ಸಮುದಾಯದ ಮುಖಂಡರು, ವಿಜಿಕೆಕೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಸಮಾಲೋಚನೆ ಪಡೆದು ತಂಬಾಕು ಸೇವನೆ ಬಿಡಿ: ಯುವಕರು ಸಿನಿಮಾಗಳಲ್ಲಿ ತಂಬಾಕು ಸೇವನೆ ನೋಡಿ, ಕುಟುಂಬದಲ್ಲಿನ ಹಿರಿಯರು ಸೇವನೆ ಮಾಡುವುದನ್ನು ನೋಡಿ ಅಥವಾ ಗೆಳೆಯರು ಬಳಸುವುದನ್ನು ನೋಡಿ ಹೆಚ್ಚಿನ ಸಂಖ್ಯೆಯ ಹದಿಯರೆಯದ ಮಕ್ಕಳು ತಂಬಾಕಿನ ಸೇವನೆಯನ್ನು ಆರಂಭ ಮಾಡುತ್ತಾರೆ. ಒಮ್ಮೆ ಆರಂಭವಾದ ಈ ಚಟವನ್ನು ಬಿಡುವುದು ಬಹಳ ಕಷ್ಟ. ಆದರೆ, ಸೂಕ್ತ ಸಮಾಲೋಚನೆ, ಸರಿಯಾದ ವೈದ್ಯಕೀಯ ಸಲಹೆ ಹಾಗೂ ತಂಬಾಕು ಸೇವನೆ ನಿಲ್ಲಿಸಬೇಕೆಂಬ ಅಚಲ ಮನೋಬಲವಿದ್ದರೆ ಈ ಚಟದಿಂದ ಹೊರಬರಲು ಸಾಧ್ಯವಿದೆ ಎಂದು ಪಬ್ಲಿಕ್‌ ಹೆಲ್ತ್‌ ಸಂಸ್ಥೆಯ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರಶಾಂತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next