Advertisement

ಶಾಸನ ಓದುವುದನ್ನು ಕಲಿತಾಗಲೇ ಇತಿಹಾಸದ ಅರಿವು

06:03 PM Mar 26, 2022 | Team Udayavani |

ಧಾರವಾಡ: ಇಂದಿನ ಯುವ ಪೀಳಿಗೆಗೆ ನಮ್ಮ ಕಲೆ, ಸಂಸ್ಕೃತಿ, ಪರಂಪರೆ ತಿಳಿಯಲು ಇತಿಹಾಸ ಅತ್ಯಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇತಿಹಾಸ, ಶಾಸನಗಳು ಹಾಗೂ ಲಿಪಿಗಳ ಕುರಿತು ಅಭ್ಯಸಿಸಬೇಕು ಎಂದು ಹಿರಿಯ ಸಾಹಿತಿ ಡಾ|ಗುರುಲಿಂಗ ಕಾಪಸೆ ಹೇಳಿದರು.

Advertisement

ಕವಿವಿಯ ಮಾನಸೋಲ್ಲಾಸ ಸಭಾಂಗಣದಲ್ಲಿ ಕವಿವಿ ಕನ್ನಡ ಸಂಶೋಧನ ಸಂಸ್ಥೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಧಾರವಾಡ ವಲಯ, ಕರ್ನಾಟಕ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕರ್ನಾಟಕದ ಸಾಮಂತ ಅರಸರು’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸನ, ಲಿಪಿಗಳನ್ನು ಓದುವುದು ತುಂಬಾ ಕಷ್ಟ. ಹೀಗಾಗಿ ಶಾಸನಶಾಸ್ತ್ರ ಓದುವುದು, ಬರೆಯುವುದನ್ನು ಕಲಿಯುವುದು ಬಹುಮುಖ್ಯ. ಆಗ ಮಾತ್ರ ನಾವು ಇತಿಹಾಸವನ್ನು ಅರಿಯಲು ಸಾಧ್ಯವಾಗುತ್ತದೆ.ಇಲ್ಲದಿದ್ದರೆ ಇತಿಹಾಸ ತಿಳಿದುಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಗುರು ಭಕ್ತಿಯೊಂದಿಗೆ ಇವುಗಳ ಅಧ್ಯಯನ ಮಾಡಬೇಕಿದೆ. ಇದಲ್ಲದೇ ರಾಜ್ಯದಲ್ಲಿ ಸಾಕಷ್ಟು ಶಾಸನಗಳು ಲಭ್ಯ ಇದ್ದು, ಅವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಅವುಗಳನ್ನು ಅರಿಯಬೇಕಾದರೆ ಶಾಸನಶಾಸ್ತ್ರ ಅಧ್ಯಯನ ಬಹುಮುಖ್ಯವಾಗಿದೆ ಎಂದರು.

ಕವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ| ಎಚ್‌. ನಾಗರಾಜ್‌ ಮಾತನಾಡಿ, ಇತಿಹಾಸ ಮರಳಿ ನೋಡಬೇಕಾದರೆ ಅದರ ಪುನರ್ಜನ್ಮದ ಅವಶ್ಯವಿದೆ. ಪುನರ್ಜನ್ಮ ಎಂದರೆ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡುವುದರ ಜತೆಗೆ ಹೆಚ್ಚು ಸಂಶೋಧನೆ ಮಾಡುವ ಅಗತ್ಯತೆ ಇದೆ. ಅಂದಾಗ ಮಾತ್ರ ಇತಿಹಾಸವನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇತಿಹಾಸದ ಸಂಶೋಧನೆಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದರು.

ಶಾಸನ ತಜ್ಞೆ ಹನುಮಾಕ್ಷಿ ಗೂಗಿ ಸರ್ವಾಧ್ಯಕ್ಷತೆ ವಹಿಸಿದ್ದರೆ ವಿಶ್ರಾಂತ ಕುಲಸಚಿವ ಡಾ|ಎಸ್‌. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎಸ್‌.ಸಿ. ಪಾಟೀಲ ಅವರು ಡಾ| ಎಚ್‌.ಬಸವರಾಜಪ್ಪ ಅವರು ಬರೆದ “ಚಿತ್ರದುರ್ಗ ಪ್ರದೇಶದ ಸಾಂಸ್ಕೃತಿಕ ಅಧ್ಯಯನ’ ಪುಸ್ತಕ ಬಿಡುಗಡೆಗೊಳಿಸಿದರು.

Advertisement

ಇದಲ್ಲದೇ ಭಾರತಿಯ ಪುರಾತತ್ವ ಸರ್ವೇಕ್ಷಣಾ ವಲಯದ ವತಿಯಿಂದ ಪ್ರಾಚೀನ ಸ್ಮಾರಕಗಳ ಛಾಯಾಚಿತ್ರ ಮತ್ತು ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿಯಿಂದ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ ಜರುಗಿತು. ಡಾ|ಎಸ್‌.ಕೆ. ಮೇಲಕಾರ, ಡಾ| ಆರ್‌.ಎಂ. ಷಡಕ್ಷರಯ್ಯ, ಡಾ|ರೇಷ್ಮಾ ಸಾವಂತ, ಡಾ|ಶೇಜೇಶ್ವರ, ಜಿ.ಎನ್‌. ಪಾಟೀಲ, ಸುಧೀಂದ್ರ ದೇಶಪಾಂಡೆ, ಡಾ|ಕಲ್ಮೇಶ ಹಾವೇರಿಪೇಟ, ರವಿ ಮಾಳಿಗೇರ, ಪ್ರೊ|ಎಸ್‌.ಬಿ. ಹಿರೇಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next