ಸಿಂದಗಿ: ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಅಗತ್ಯ. ಆದ್ದರಿಂದ ನಾವು ಜಾಗೃತರಾಗಿ ಕೋವಿಡ್ ಸೋಂಕಿನ ವಿರುದ್ಧ ಹೋರಾಡೋಣ ಎಂದು ಮನಗೂಳಿ ಆಸ್ಪತ್ರೆಯ ಟಿಎಸ್‌ಪಿ ಮಂಡಳಿಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಅಧ್ಯಕ್ಷ, ಪುರಸಭೆ ಸದಸ್ಯ ಡಾ| ಶಾಂತವೀರ ಮನಗೂಳಿ ಹೇಳಿದರು.
ಪಟ್ಟಣದ ಅರ್ಬನ್ ಬ್ಯಾಂಕ್‌ನಲ್ಲಿ ಹಾಗೂ ವಾರ್ಡ್‌ಗಳಲ್ಲಿ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು. ಕೋವಿಡ್ ಸೋಂಕಿನ ಬಗ್ಗೆ ಅತಿ ಭಯ ಪಡುವ ಅಗತ್ಯವಿಲ್ಲ. ಜಾಗೃತರಾಗಿದ್ದರೆ ಯಾವ ಸೋಂಕು ನಮಗೆ ತಗಲುವುದಿಲ್ಲ. ಅನವಶ್ಯಕವಾಗಿ ಹೊರಗೆ ಬರದೆ ಅಗತ್ಯ ಬಿದ್ದಾಗ ಹೊರಗೆ ಬರಬೇಕು. ಹೊರಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಯಾವುದೇ ಮುಜುಗರ ಪಡದೆ, ಜನತೆ ನಮ್ಮಿಂದ ದೂರವಾಗುತ್ತಾರೆ ಎಂಬ ಮನೋಭಾವನೆ ಹೊಂದದೆ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಸೋಂಕಿತರು ಯಾವುದೇ ಖನ್ನತೆಗೆ ಒಳಗಾಗಬೇಡಿ. ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ದಾಖಲಾದರೂ ತಡವಾಗಿರುವ ಕಾರಣ ಚಿಕಿತ್ಸೆ ಫಲಿಸದೇ ಇರಬಹುದು. ಆದ್ದರಿಂದ ಜನತೆ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಶರಣಪ್ಪ ವಾರದ ಮಾತನಾಡಿ, ಇಂದಿನ ಸ್ಥಿತಿ ಗತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಕೋವಿಡ್ ಸೋಂಕಿನ ವಿರುದ್ದ ನಾವೆಲ್ಲ ಹೋರಾಡಬೇಕು. ಈ ನಿಟ್ಟಿನಲ್ಲಿ ಟಿಎಸ್‌ಪಿ ಮಂಡಳಿಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ, ಪುರಸಭೆ ಸದಸ್ಯ ಡಾ| ಶಾಂತವೀರ ಮನಗೂಳಿ ಹಾಗೂ ಅವರ ಪತ್ನಿ ಡಾ| ಸಂಧ್ಯಾ ಮನಗೂಳಿ ಅವರು ಒಂದು ಹೆಜ್ಜೆ ಮುಂದೆ ಇಟ್ಟು ಸ್ವತಃ ತಮ್ಮ ಖರ್ಚಿನಿಂದ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್‌ನ್ನು ವಿತರಿಸಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಎಪಿಎಂಸಿ ನಿರ್ದೇಶಕ ಉಮೇಶ ಜೋಗುರ ಮಾತನಾಡಿ, ಡಾ| ಶಾಂತವೀರ ಮನಗೂಳಿ ಹಾಗೂ ಡಾ| ಸಂಧ್ಯಾ ಮನಗೂಳಿ ದಂಪತಿ ಕೋವಿಡ್ ಸೋಂಕಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ನಡೆದ ತಾಲೂಕಿನ 12 ಪರೀಕ್ಷಾ ಕೇಂದ್ರದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ನ್ನು ಶಿಕ್ಷಣ ಇಲಾಖೆ ಮೂಲಕ ಉಚಿತವಾಗಿ ವಿತರಿಸಿದ್ದಾರೆ. ಅವರ ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.