ಚಿಕ್ಕಬಳ್ಳಾಪುರ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬರಮುಕ್ತ ಕರ್ನಾಟಕ ಅಂದೋಲನ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಸಹಯೋಗದೊಂದಿಗೆ ಜು.21ಕ್ಕೆ ಬೆಳಗಾವಿಯಲ್ಲಿ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟರವಣಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬರಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಲು ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ವೈಫಲ್ಯ ಹಾಗೂ ವಿರೋಧ ಪಕ್ಷದ ದಿವಾಳಿತನವನ್ನು ಬಯಲಿಗೆಳೆಯಲು ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ವರ್ಷಗಳಿಂದಲೂ ಸತತವಾಗಿ ಬರ ಅವರಿಸಿದೆ. ಈ ವರ್ಷವು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಕೈ ಕೊಟ್ಟು ರೈತರು ತೀವ್ರ ಆತಂಕದಲ್ಲಿದ್ದಾರೆ. ಅವರು, ರಾಜ್ಯದ 26 ಜಿಲ್ಲೆಗಳನ್ನು ಈಗಾಗಲೇ ಬರಪೀಡಿತ ಜಿಲ್ಲೆಗಳೆಂದು ಸರ್ಕಾರ ಘೊಷಣೆ ಮಾಡಿದೆ.
ಜಲಾಶಯಗಳು, ಕೆರೆ, ಕಟ್ಟೆಗಳು ಬರಿದಾಗಿದ್ದು, ಅಂತರ್ಜಲ ಪರಿಸ್ಥಿತಿ ಶೇ.85 ರಷ್ಟು ಭಾಗ ಕುಸಿತವಾಗಿದೆ. ಇದರಿಂದ ಕುಡಿಯುವ ನೀರಿಗೆ ಮಾತ್ರವಲ್ಲದೇ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಆದರೆ ರಾಜ್ಯದ ಮೈತ್ರಿ ಸರ್ಕಾರ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿ ರಾಜಕೀಯ ದಿವಾಳಿತನ ಪ್ರದರ್ಶಿಸುತ್ತಿದೆಯೆಂದರು ಟೀಕಿಸಿದರು.
ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಅನುಷ್ಠಾನಗೊಳಿಸಬೇಕು. ಬರ ಪರಿಹಾರ ಕಾಮಗಾರಿಗಳನ್ನು ಸಮಾರೋಪಾದಿಯಲ್ಲಿ ನಡೆಸಬೇಕು. ಬಾಕಿ ಇರುವ ಬೆಳೆ ವಿಮೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಮಟ್ಟದ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದು, ಜಿಲ್ಲೆಯಿಂದ 1.500 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ರೈತ ಸಂಗೂ ಹಸಿರು ಸೇನೆಯ ಶಿವಕುಮಾರ್, ಲಕ್ಷ್ಮಯ್ಯ, ಕಚೇರಿ ಕಾರ್ಯದರ್ಶಿ ವಾಣಿ, ಅಶ್ವತ್ಥ್, ಮುನಿರತ್ನಮ್ಮ, ಗಂಗಾಧರ್, ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..
ರೈತರ ಬೃಹತ್ ಮೆರವಣಿಗೆ: 39ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೆ.ಎಸ್.ಪುಟ್ಟಣಯ್ಯ ಬಣ ರೈತರ ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಪ್ರತಿ ವರ್ಷ ರೈತರ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷ 39ನೇ ವರ್ಷದ ರೈತರ ಹುತಾತ್ಮ ದಿನಾಚರಣೆಯನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಿಂದ ಗಾಂಧಿಭವನದ ವರೆಗೂ ರೈತರ ಬೃಹತ್ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟರವಣಪ್ಪ ತಿಳಿಸಿದರು.