ಮಹಾನಗರ: ಪ್ರತಿನಿತ್ಯದ ವ್ಯವಹಾರಗಳಲ್ಲಿ ನಾವು ನಮಗರಿವಿಲ್ಲದೆಯೇ ಮೋಸ ಹೋಗುತ್ತಿದ್ದೇವೆ. ವ್ಯಾವಹಾರಿಕ ಜ್ಞಾನದ ಕೊರತೆಯಿಂದ ಇಂತಹ ಮೋಸಗಳು ನಡೆಯುತ್ತಿದ್ದು, ಈ ಬಗ್ಗೆ ಶಾಲಾ ಹಂತದಲ್ಲಿಯೇ ಅರಿವು ಮೂಡಿಸಬೇಕಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ರವಿ ಹೇಳಿದರು.
ನಗರದ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಗ್ರಾಹಕ ದಿನಾಚರಣೆಯನ್ನು ಉದ್ಘಾಟಿಸಿ, ಹೈಸ್ಕೂಲ್ ಮತ್ತು ಪಿಯುಸಿ ಪಠ್ಯರಚನೆಯ ಅವಕಾಶವನ್ನು ಶಿಕ್ಷಣ ಇಲಾಖೆ ಹೊಂದಿದ್ದು, ಗ್ರಾಹಕ ಹಕ್ಕನ್ನು ಪಠ್ಯವಾಗಿಸುವ ಬಗ್ಗೆ ಅದರ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ ಗೌಡ, ಟೆಕ್ನಾಲಜಿಯ ಎಂಬಿಎ ಪ್ರೋಗ್ರಾಂನ ಪ್ರೊಫೆಸರ್ ಡೈರೆಕ್ಟರ್ ಡಾ| ಶೇಖರ್ ಎಸ್. ಅಯ್ಯರ್, ಸುರತ್ಕಲ್ ಗೋವಿಂದ ದಾಸ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಮುರಳೀಧರ ರಾವ್, ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಯು. ತಾರಾ ರಾವ್, ಮೂಡಬಿದಿರೆ ಧವಳ ಕಾಲೇಜಿನ ಪ್ರಾಂಶುಪಾಲ ರವೀಶ್ ಕುಮಾರ್ ಎಂ. ಉಪಸ್ಥಿತರಿದ್ದರು.
ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ.ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಚೇರಿ ಮುಖ್ಯಸ್ಥ ಸುನಂದಾ ಸ್ವಾಗತಿಸಿದರು. ಬೈಕಂಪಾಡಿಯ ಬರ್ಟಂಡ್ ರಸ್ಸೆಲ್ ಶಾಲೆಯಿಂದ ತಯಾರಿಸಲಾದ ಗ್ರಾಹಕ ಹಕ್ಕುಗಳ ಬಗೆಗಿನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಯುವ ಘಟಕಕ್ಕೆ ಚಾಲನೆ
ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಗ್ರಾಹಕ ಸಂಘಟನೆಗಳ ಯುವ ಕೌನ್ಸಿಲ್‌ಗೆ ಇದೇ ವೇಳೆ ಚಾಲನೆ ನೀಡಲಾಯಿತು. ಜಿಲ್ಲೆಯ ಎಂಟು ಪದವಿ ಕಾಲೇಜುಗಳಲ್ಲಿ ಗ್ರಾಹಕ ಹಕ್ಕುಗಳ ಕುರಿತಂತೆ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪದಕ ನೀಡಲಾಯಿತು.