ಕಲಬುರಗಿ: ವಿದ್ಯಾರ್ಥಿಗಳು ಕನ್ನಡ ಕಟ್ಟುವ ಕಣ್ಮಣಿಗಳಾಗಿದ್ದರಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮೆರೆದವರನ್ನು ವಿಶ್ವಜ್ಯೋತಿ ಪ್ರತಿಷ್ಠಾನ ಸನ್ಮಾನಿಸಿ ಮಾದರಿಯಾದ ಕೆಲಸ ಮಾಡಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.
ವಿಶ್ವಜ್ಯೋತಿ ಪ್ರತಿಷ್ಠಾನ ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಬುರಗಿ, ಯಾದಗಿರಿ ಮತ್ತು ಬೀದರ ಭಾಗದ ವಿದ್ಯಾರ್ಥಿಗಳಿಗೆ ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಸ್ವಾರ್ಥ, ಅಧಿಕಾರ, ಹಣದ ಹಿಂದೆ ಬಿದ್ದಿರುವ ಇಂದಿನ ಮನುಷ್ಯ ತನ್ನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಪ್ರತಿಭಾವಂತರಾದ ಇಂದಿನ ಮಕ್ಕಳಿಗೆ ಇಂತಹ ಸನ್ಮಾನದ ಕಾರ್ಯಕ್ರಮಗಳು ಮಾತೃ ಭಾಷಾಭಿಮಾನ ಮೂಡಿಸುತ್ತದೆ ಎಂದರು.
ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಸ್ವಾಮಿರಾವ್ ಕುಲಕರ್ಣಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ, ಡಾ| ಎಸ್.ಎಸ್.ಗುಬ್ಬಿ, ಶಾರದಾಮಣಿ ಮಹಾದೇವ ಪಾಟೀಲ ನಿಪ್ಪಾಣಿ, ಮಲ್ಲಿನಾಥ ಪಾಟೀಲ ಕಾಳಗಿ, ರಾಜಶೇಖರ ಯಂಕಂಚಿ, ವಿದ್ಯಾಸಾಗರ ದೇಶಮುಖ, ಕೆ.ಗಿರಿಮಲ್ಲ, ಚನ್ನವೀರಪ್ಪ ಹೂಗಾರ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಬಸಂತಬಾಯಿ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಪರಮೇಶ್ವರ ಶಟಕಾರ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಶಂಕರ ಬಿರಾದಾರ ಮರಗೋಳ, ರವೀಂದ್ರ ಶಾಬಾದಿ, ಮಹಾದೇವಿ ಪಾಟೀಲ, ಡಾ| ನಾಗರತ್ನಾ ದೇಶಮಾನ್ಯೆ, ಶಿವರಾಜ ಅಂಡಗಿ, ಸುಭಾಷ ಚಕ್ರವರ್ತಿ, ರೇಣುಕಾ ಡಾಂಗೆ ಭಾಗವಹಿಸಿದ್ದರು. ಸುಮಾರು 150ಕ್ಕೂ ಹೆಚ್ಚು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.