Advertisement
ಒಂದು ಕೇಳಿದರೆ ಲಕ್ಷ ಲಕ್ಷ ವಸ್ತುಗಳನ್ನು ಎತ್ತಿ ತೋರಿಸುವ ಅಮೆಜಾನ್ ವೆಬ್‌ಸೈಟ್‌ನಲ್ಲಿ ನಾನೊಂದು ಸಣ್ಣ ಮೂಗುತಿ ಆರಿಸುತ್ತಿದ್ದೆ. ಮೂಗು ಚುಚ್ಚಿಸಿಕೊಳ್ಳುವ ಎರಡು ವರ್ಷದ ಹಿಂದಿನ ಕನಸು ಈಡೇರಿದ್ದು ಮೊನ್ನೆ ಮೊನ್ನೆಯಷ್ಟೇ. ಅದೂ ಅಮ್ಮ, ಅತ್ತೆ, ಅತ್ತಿಗೆ, ಅಕ್ಕ, ಫ್ರೆಂಡ್ಸ್ ಗಳನ್ನೆಲ್ಲ ಕೇಳಿ, ಅವರು “ನಿಂಗೆ ಮೂಗುತಿ ಚೆನ್ನಾಗಿ ಕಾಣುತ್ತೆ’ ಅಂತ ಹೇಳಿದ ಮೇಲೆ. ಸ್ವಲ್ಪ ದಿನಗಳ ನಂತರ ಆ ಮೂಗುತಿಯನ್ನು ಬದಲಿಸಿ, ಬೇರೊಂದು ರೀತಿಯದ್ದನ್ನು ಧರಿಸುವ ಆಸೆಯಾಯ್ತು. ಒಂದಕ್ಕಿಂತ ಒಂದು ಚಂದ ಅನ್ನಿಸುವ ಸಾವಿರಾರು ಮೂಗುತಿಗಳಲ್ಲಿ ಯಾವುದನ್ನು ಖರೀದಿಸುವುದು ಅಂತ ಗೊಂದಲವಾಗಿ, ಎಲ್ಲ ಮೂಗುತಿಗಳೂ ಒಂದೊಂದಾಗಿ ನನ್ನ ಮೂಗಿನ ಮೇಲೆ ಬಂದು ಕೂತಂತೆ ಕಲ್ಪಿಸಿಕೊಂಡೆ. ಯಾವುದರಲ್ಲಿ ಹೇಗೆ ಕಾಣಿಸುತ್ತೇನೆ ಅಂತ ಮನಸ್ಸಿನೊಳಗೇ ಲೆಕ್ಕಾಚಾರ ಹಾಕತೊಡಗಿದೆ. ತಗೊಂಡಾದ ಮೇಲೆ ಯಾರಾದ್ರೂ, ಚೆನ್ನಾಗಿಲ್ಲ ಅಂದುಬಿಟ್ಟರೆ ಅಂತ, ಮನೆಯಲ್ಲಿ ಎಲ್ಲರನ್ನೂ ಕೇಳಿಕೊಂಡು ಬಂದೆ. ನನ್ನ ಈ ಪಡಿಪಾಟಲನ್ನು ನೋಡಿದ ಯಜಮಾನರು, “ಹೆಣ್ಮಕ್ಕಳಿಗೆ ಬೇರೆ ಕಸುಬಿಲ್ವಾ? ಇಷ್ಟು ಸಣ್ಣ ಸಣ್ಣ ವಿಷಯಕ್ಕೆಲ್ಲ ಅಷ್ಟೊಂದು ಸಮೀಕ್ಷೆ, ಲೆಕ್ಕಾಚಾರ ಹಾಕೋ ಅಗತ್ಯ ಇದ್ಯಾ?’ ಎಂದು ಕಿಚಾಯಿಸಿದರು. “ಹೌದು ಮತ್ತೆ. ಮೂಗುತಿ ಸೆಲೆಕ್ಟ್ ಮಾಡೋದು ಅಂದ್ರೆ ಕಮ್ಮೀನಾ? ಎಲ್ಲರ ಅಭಿಪ್ರಾಯ ಕೇಳಿ, ಲೆಕ್ಕಾಚಾರ ಹಾಕಿದ ಮೇಲೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯ’ ಅಂತ ಅವರ ಬಾಯಿ ಮುಚ್ಚಿಸಿದೆ.
Related Articles
Advertisement
ನಾನು ಬದುಕಿನ ಲೆಕ್ಕಾಚಾರಗಳನ್ನು ಕಲಿತಿದ್ದು ನನ್ನಮ್ಮನಿಂದಲೇ. ಎಲ್ಲ ವಿಷಯದಲ್ಲೂ ಅಮ್ಮನದ್ದು ಪರ್ಫೆಕ್ಟ್ ಲೆಕ್ಕಾಚಾರ. ಯಾವ ಅಂಗಡಿಯಲ್ಲಿ ಯಾವ ತರಕಾರಿ ಚೆನ್ನಾಗಿರುತ್ತದೆ ಅಂತ ಅಮ್ಮನಿಗೆ ಗೊತ್ತು. ಅಲ್ಲಿಂದಲೇ ತರಕಾರಿ ತರುವಂತೆ ಅಪ್ಪನಿಗೆ ಹೇಳುತ್ತಾಳೆ. ಅದರಲ್ಲೇನಾದರೂ ಮಿಸ್ ಆದ್ರೆ, ಅಮ್ಮನಿಗೆ ತಕ್ಷಣ ಗೊತ್ತಾಗಿ ಬಿಡುತ್ತದೆ. ದಿನಸಿ ಸಾಮಗ್ರಿಗಳನ್ನು ಕಣ್ಣಿನಲ್ಲಿ ನೋಡಿಯೇ, ಅವುಗಳ ಗುಣಮಟ್ಟ ಹೇಳಬಲ್ಲ ಅಮ್ಮ ಕೆಲವೊಂದು ಕಂಪನಿಗಳ ಬೇಳೆಕಾಳು, ಎಣ್ಣೆಯನ್ನು ಖರೀದಿಸುವುದೇ ಇಲ್ಲ. ಇನ್ನು, ಅಮ್ಮನ ಅಡುಗೆಯೂ ಅಷ್ಟೇ ಕ್ರಮಬದ್ಧವಾಗಿರುತ್ತದೆ. ಈ ವಾರದಲ್ಲಿ ಯಾವ ದಿನ, ಯಾವ ಅಡುಗೆ ಮಾಡಬೇಕು ಅಂತ ಮೊದಲೇ ತಯಾರಿ ಮಾಡಿಟ್ಟುಕೊಂಡಿರುತ್ತಾಳೆ. ತೋಟದ ಕೆಲಸ ನಡೆಯುವಾಗ, ಜಾಸ್ತಿ ಜನ ಕೆಲಸದವರು ಬಂದರೆ ರೊಟ್ಟಿ, ಚಪಾತಿಯಂಥ ಸಮಯ ಹಿಡಿಯುವ ತಿಂಡಿ ಮಾಡುವುದಿಲ್ಲ. ಹೊಟ್ಟೆ ತುಂಬುವ, ನೀರಡಿಕೆಯಾಗದಂಥ ತಿಂಡಿಗಳಿಗೆ ಆ ದಿನ ಹೆಚ್ಚು ಪ್ರಾಶಸ್ತ್ಯ. ಉಳಿದ ದಿನಗಳಲ್ಲಿ ಮನೆಯಲ್ಲಿ ಯಾರಿಗೆ, ಯಾವ ಅಡುಗೆ ಇಷ್ಟ ಅಂತ ಅರಿತುಕೊಂಡು, ಆ ಪ್ರಕಾರ ಅಡುಗೆ ಮಾಡುತ್ತಾಳೆ. ಮಕ್ಕಳು ಮುಂದಿನ ವಾರ ಊರಿಗೆ ಬರುತ್ತಾರೆ ಅಂತಾದರೆ, ಆ ದಿನದಿಂದಲೇ ವಿಶೇಷ ಅಡುಗೆಗೆ ತಯಾರಿ ಶುರುವಾಗುತ್ತದೆ.
ಮಾಡಿದ ಅಡುಗೆಯೇನಾದ್ರೂ ಮನೆಯವರಿಗೆ ಇಷ್ಟವಾಗದಿದ್ದರೆ, ಯಾಕೆ ಹಾಗಾಯ್ತು ಅಂತ ತಲೆಗೆ ಹುಳ ಬಿಟ್ಟುಕೊಂಡು, ಅದಕ್ಕೆ ಕಾರಣ ಹುಡುಕುವುದು ಅಮ್ಮನ ಜಾಯಮಾನ. ಅಡುಗೆ ರುಚಿಗೆಡಲು, ಹದ ಮೀರಿ ಹಾಕಿದ ನೀರು ಕಾರಣವೋ, ಹೆಚ್ಚು ಕುದಿಸಿದ್ದು ಕಾರಣವೋ ಅನ್ನೋ ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಕೆಗೆ ರಾತ್ರಿ ನಿದ್ದೆ ಬರುವುದಿಲ್ಲ. ಮತ್ತೂಮ್ಮೆ ಅದೇ ಅಡುಗೆಯನ್ನು ಮಾಡಿ, “ಇವತ್ತು ಹೇಗಾಗಿದೆ?’ ಅಂತ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಾಳೆ. ಸಮೀಕ್ಷೆಯಲ್ಲಿ ಜಾಸ್ತಿ ವೋಟು ಆಕೆಯ ಪರವಾಗಿ ಬೀಳಲೇಬೇಕು! ಇನ್ನು ಹೊಸರುಚಿ ಟ್ರೈ ಮಾಡಿದಾಗ, ನಾವ್ಯಾರೂ ಅದನ್ನು ತಿಂದು ಸುಮ್ಮನೆ ಕೂರುವಂತಿಲ್ಲ. ಅಡುಗೆ ಬಗ್ಗೆ ಲೈಕ್, ಕಮೆಂಟ್ ಮಾಡಲೇಬೇಕು. ಎಲ್ಲರ ಕಮೆಂಟ್‌ಗಳನ್ನು ಪರಿಗಣಿಸಿದ ಮೇಲೆ ಹೊಸ ರುಚಿಯನ್ನು ಇನ್ನೂ ಹೊಸದಾಗಿ ಟ್ರೈ ಮಾಡುತ್ತಾಳೆ. ಇನ್ನು, ಇಷ್ಟು ಅಡುಗೆಗೆ ಇಷ್ಟು ಉಪ್ಪು, ಇಷ್ಟು ಜನರಿಗೆ ಇಷ್ಟು ಪಾವು ಅನ್ನ ಅನ್ನೋ ಅಮ್ಮಂದಿರ ಲೆಕ್ಕಾಚಾರ ಎಂದಾದರೂ ತಪ್ಪುವುದುಂಟೇ?
ಶಿವನಿಗೆ ಮೂರನೇ ಕಣ್ಣು ಇರುವಂತೆ, ಹೆಣ್ಮಕ್ಕಳಿಗೆ “ದೂರದೃಷ್ಟಿ’ ಅನ್ನೋ ಒಂದು ಎಕ್ಸ್‌ಟ್ರಾ ಕಣ್ಣಿದೆ. ಬೇಕು- ಬೇಡಗಳ ತಕ್ಕಡಿಯನ್ನು ಬ್ಯಾಲೆನ್ಸ್ ಮಾಡುತ್ತಾ, ಏನು ಮಾಡಿದರೆ ಏನಾಗುತ್ತದೆ ಅಂತ ಅಳೆದು, ತೂಗಿ ನೋಡುವುದು ಅದರ ಕೆಲಸ. ಗಂಡಸರು ಒಂದು ವಿಷಯವನ್ನು ಎರಡು ಕಣ್ಣುಗಳಿಂದ ನೋಡಿದರೆ, ನಾವು ಅದನ್ನು ಮೂರನೇ ಕಣ್ಣಿನಿಂದ ನೋಡು ತ್ತೇವೆ. ಈಗ ಗೊತ್ತಾಯ್ತಲ್ಲ, ಹೆಂಗಸರ್ಯಾಕೆ ಹೀಗೆ ಅಂತ.
ಸ್ಲೀಪಿಂಗ್ ಬ್ಯೂಟಿಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕ, ದುಗುಡ ಏಳುತ್ತದೆ. ಆದರೆ ಅಮೆರಿಕದ ರೋಡಾ ಎಂಬ ಕಾಲೇಜು ತರುಣಿಗೆ ಮಾತ್ರ ಪರೀಕ್ಷೆ ಎಂದರೆ ಒಂದಿನಿತೂ ಭಯವೇ ಇಲ್ಲ. ಪರೀಕ್ಷೆಗೆ ತಿಂಗಳಿರುವಂತೆಯೇ ನಿದ್ದೆ ಊಟ ಬಿಟ್ಟು ಎಲ್ಲರೂ ಓದುವುದರಲ್ಲಿ ಮುಳುಗುತ್ತಾರೆ. ಆದರೆ ಪರೀಕ್ಷೆಯ ದಿನವೇ ರೋಡಾ ಗಡದ್ದಾಗಿ ನಿದ್ದೆ ಮಾಡಿದ್ದಳು. ನಿಜ ಹೇಳಬೇಕೆಂದರೆ ಕಳೆದ 22 ಗಂಟೆಗಳಿಂದಲೂ ರೋಡಾ ನಿದ್ದೆ ಮಾಡುತ್ತಿದ್ದಳು. ನೋಡ ನೋಡುತ್ತಿದ್ದಂತೆಯೇ ಪರೀಕ್ಷೆಯ ಸಮಯವೂ ಆಗಿ ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆ ಬರೆದೂ ಮುಗಿಸಿ ವಾಪಸ್ಸಾದರು. ಆದರೆ ರೋಡಾ ಮಾತ್ರ ಇನ್ನೂ ನಿದ್ದೆ ಮಾಡುತ್ತಲೇ ಇದ್ದಳು. ಅಲ್ಲಿಯ ತನಕ ಹಾಸ್ಟೆಲ್‌ನ ಅವಳ ಕೋಣೆಯತ್ತ ಸುಳಿಯದ ಗೆಳತಿಯರು ಆತಂಕದಿಂದ ಬಂದಾಗಲೂ ಆಕೆ ನಿದ್ದೆ ಮಾಡುತ್ತಿದ್ದಳು. ಭಯಗೊಂಡು ವೈದ್ಯರ ಬಳಿ ಕರೆದೊಯ್ದಾಗ ಗೊತ್ತಾಗಿದ್ದು ಆಕೆಗೆ “ಹೈಪರ್ ಇನ್‌ಸೋಮ್ನಿಯಾ’ ಇದೆ ಎಂದು. ಎಲ್ಲೆಂದರಲ್ಲಿ ದಿನಗಟ್ಟಲೆ ನಿದ್ದೆ ಹೋಗುವ ಕಾಯಿಲೆ ಅದು. ಆಕೆಯನ್ನು “ಸ್ಲೀಪಿಂಗ್ ಬ್ಯೂಟಿ’ ಎಂದು ಕರೆಯಬಹುದೋ ಅಥವಾ ಪರೀಕ್ಷೆ ಸ್ಕಿಪ್ ಮಾಡಿದ್ದಕ್ಕೆ “ಸ್ಕಿಪ್ಪಿಂಗ್ ಬ್ಯೂಟಿ’ ಎಂದು ಕರೆಯಬಹುದೋ, ನೀವೇ ನಿರ್ಧರಿಸಿ! — ಕಾವ್ಯ ಎಂ.ಎಸ್.