Advertisement

“ಇ-ಬುಕ್‌’ವ್ಯವಸ್ಥೆಗೆ ಮೊರೆ ಹೋದ ಪ್ರಾಧಿಕಾರ

06:12 AM Mar 02, 2019 | |

ಬೆಂಗಳೂರು: ಇ-ಓದುಗರಿಗೆ ಈಗ ಸುಗ್ಗಿಕಾಲ. ದೇಶ-ವಿದೇಶದ ಯಾವುದೇ ಮೂಲೆಗಳಲ್ಲಿ ಓದುಗರಿದ್ದರೂ ಅವರನ್ನು ಕ್ಷಣ ಮಾತ್ರದಲ್ಲಿ ತಲುಪುವ ಸಾಮರ್ಥಯ ಇ-ಪುಸ್ತಕಗಳಿಗಿದೆ. ಇದನ್ನು ಮನಗಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಮತ್ತು ತನ್ನ ವ್ಯಾಪ್ತಿಯ ಕೆಲವು ಪ್ರಾಧಿಕಾರಗಳು “ಇ-ಬುಕ್‌’ ವ್ಯವಸ್ಥೆಯನ್ನು ಕನ್ನಡ ಸಾಹಿತ್ಯವಲಯದಲ್ಲೂ ಜಾಗೃತಗೊಳಿಸಲು ಮುಂದಾಗಿದೆ. 

Advertisement

ಇದೀಗ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೂಡ ಅದೇ ದಾರಿಯಲ್ಲಿ ಸಾಗಲು ನಿರ್ಧರಿಸಿದೆ. ಪ್ರಾಧಿಕಾರ ಕನ್ನಡದ ಉತ್ತಮ ಕೃತಿಗಳನ್ನು ತೆಲಗು, ತಮಿಳು, ಬಂಗಾಳಿ, ಮಲೆಯಾಳಂ, ಕೊಂಕಣಿ, ಹಿಂದಿ ಮತ್ತು ಇಂಗ್ಲಿಷ್‌ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ.

ಆದರೆ ಅಂಥ ಪುಸ್ತಕಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ  ರೂಪುಗೊಂಡಿಲ್ಲ. ಆ ಹಿನ್ನೆಲೆಯಲ್ಲಿಯೇ “ಇ -ಬುಕ್‌’ ರೂಪದಲ್ಲಿ ಪುಸ್ತಕಗಳನ್ನು ನೀಡಿದರೆ ವಿಶ್ವವ್ಯಾಪಿ ಸಹೃದಯರನ್ನು ತಲುಪುವ ಮತ್ತು ಆ ಮೂಲಕ ಆನ್‌ಲೈನ್‌ನಲ್ಲಿ ಪ್ರಾಧಿಕಾರ ಜಾಗೃತವಾಗಲು ಮನಸ್ಸು ಮಾಡಿದಂತಿದೆ.

 25 ವಿವಿಧ ಶೀರ್ಷಿಕೆಯ 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗದೇ ಪ್ರಾಧಿಕಾರದ ಮಳಿಗೆಯಲ್ಲಿ ಉಳಿದಿವೆ.  ಇದನ್ನು ಈ ಹಿಂದೆ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದರು. ಆದರೆ  ಪ್ರಯೋಜನವಾಗಿರಲಿಲ್ಲ. ಆ ಹಿನ್ನೆಲೆಯಲ್ಲಿಯೇ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗ ಓದುಗರನ್ನು ಸೆಳೆಯಲು ವಿನೂತನ ಪ್ರಯತ್ನಕ್ಕೆ ಸಜ್ಜಾಗಿದೆ.

ಹೊಸ ವೆಬ್‌ ಸೈಟ್‌: ಇ-ಪುಸ್ತಕಕ್ಕಾಗಿಯೇ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊಸ ವೆಬ್‌ಸೈಟ್‌ ವಿನ್ಯಾಸಗೊಳಿಸಿದೆ. ಅಲ್ಲಿ ಹಲವು ಭಾಷೆಯ ಕೃತಿಗಳು ಇರಲಿದ್ದು, ಆಯಾ ಭಾಷೆಯ ಸಾಹಿತ್ಯಾಸಕ್ತರು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮಗೆ ಬೇಕಾದ ಪುಸ್ತಕ ಓದುವುದರ ಜತೆಗೆ ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಹೀಗೆ ಮಾಡುವುದರಿಂದ ಪುಸ್ತಕಗಳ ಮಾರಾಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯ.

Advertisement

ಶೀಘ್ರದಲ್ಲಿ ಸಮಿತಿ ರಚನೆ: ಹೊಸ ವೆಬ್‌ಸೈಟ್‌ ರಚನೆ ಸಂಬಂಧ ಶೀಘ್ರದಲ್ಲಿ ಸಮಿತಿಯೊಂದು ರಚನೆಯಾಗಲಿದೆ. ಈಗಾಗಲೇ ನಾಲ್ಕೈದು ಕಂಪನಿಗಳು ವೆಬ್‌ಸೈಟ್‌ ವಿನ್ಯಾಸಕ್ಕೆ ಮುಂದೆ ಬಂದಿದ್ದು, ತಾಂತ್ರಿಕ ನಿಪುಣರನ್ನೊಳಗೊಂಡ ಸಮಿತಿ, ಕಂಪನಿಯನ್ನು ಆಯ್ಕೆ ಮಾಡಲಿದೆ.

ಈ ಕಾರ್ಯಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 4 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದು, ಕೆಲವೇ ತಿಂಗಳಲ್ಲಿ ಹೊಸ ವೆಬ್‌ಸೈಟ್‌ ಹೊರತರಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ಧಪ್ಪ ಹೇಳಿದ್ದಾರೆ. “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಕಥೆ, ಕಾದಂಬರಿ, ಕವಿತೆ, ನಾಟಕ ಸೇರಿದಂತೆ ಎಲ್ಲ ಕೃತಿಗಳನ್ನು ಇ-ಪುಸ್ತಕ ರೂಪದಲ್ಲಿ ತರುವ ಆಲೋಚನೆ ಇದೆ. ಓದುಗರ ಪ್ರತಿಕ್ರಿಯೆ ನೋಡಿ ಮತ್ತಷ್ಟು ಪುಸ್ತಕಗಳನ್ನು ಸೇರಿಸುವುದಾಗಿ ತಿಳಿಸಿದರು.

“ಇಂದಿರಾಬಾಯಿ’ ಇ-ಬುಕ್‌: ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುಲ್ವಾಡಿ ವೆಂಕಟರಾವ್‌ ಅವರ “ಇಂದಿರಾಬಾಯಿ’ ಕಾದಂಬರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಈಗಾಗಲೇ ಇ-ಬುಕ್‌ ರೂಪ ನೀಡಿದೆ. ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಇ-ಬುಕ್‌ ರೂಪ ನೀಡಿದ್ದು ಓದುಗರಿಂದ ಮೆಚ್ಚುಗೆ ಪಡೆದಿದೆ. ಆ ಹಿನ್ನೆಲೆಯಲ್ಲಿಯೇ ಮತ್ತಷ್ಟು ಪುಸ್ತಕಗಳಿಗೆ ಇ-ಬುಕ್‌ ರೂಪ ನೀಡುವ ಆಲೋಚನೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ.

ಓದುಗರನ್ನು ತಲುಪಬೇಕು ಎಂಬ ಉದ್ದೇಶದಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಉತ್ತಮ ಹೆಜ್ಜೆ ಇರಿಸಿದೆ.
-ಕುಂ.ವೀರಭದ್ರಪ್ಪ, ಕಾದಂಬರಿಕಾರ.

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next