ಮುಂಬಯಿ: ಸಾಹಿತ್ಯ ಬಳಗ ಮುಂಬಯಿ ಪ್ರಕಟನೆಯ ಭೂತಾರಾಧನೆಯ ಅಣಿ ವೈವಿಧ್ಯ- ಬಣ್ಣಗಾರಿಕೆಯ ವಿಶೇಷತೆಗಳನ್ನು ಹೊಂದಿರುವ “ಅಣಿ ಅರದಳ-ಸಿರಿ ಸಿಂಗಾರ’ ಬೃಹತ್ ಕೃತಿಗೆ ಕರ್ನಾಟಕ ಪುಸ್ತಕ ಪ್ರಾಧಿಕಾರದ 2017ನೇ ಸಾಲಿನ “ಪುಸ್ತಕ ಸೊಗಸು’ ಪ್ರಶಸ್ತಿ ಲಭಿಸಿದೆ.
ಮುಂಬಯಿಯ ಸಂಘಟಕ, ಸಾಹಿತಿ ಎಚ್. ಬಿ. ಎಲ್. ರಾವ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ವಿದ್ವಾಂಸ, ಸಾಹಿತಿ ಕೆ.ಎಲ್. ಕುಂಡತಾಯ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಈ ಕೃತಿಯು ಈಗಾಗಲೆ ಒಳ ಮತ್ತು ಹೊರನಾಡಿನಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ.
“ದೈವಾರಾಧನೆ ಎಷ್ಟು ಪ್ರಬಲ ಶಕ್ತಿಯಾಗಿದೆ ಎಂದರೆ ಒಂದು ಸಮಾಜವನ್ನು ತಾರತಮ್ಯವಿಲ್ಲದೆ, ಆದರೆ ಸಾಮಾಜಿಕವಾದ ರೀತಿ-ನೀತಿಯನ್ನು ಅನುಸರಿಸಿಕೊಂಡು ಕಟ್ಟಿ ಬಿಡುತ್ತದೆ. ಯಾವ ವ್ಯಕ್ತಿ ಅಥವಾ ರಾಜಕೀಯ ಶಕ್ತಿಯಿಂದ ಆಗದೆ ಇರುವ ಕೆಲಸವು ದೈವ ಪ್ರಜ್ಞೆಯಿಂದ ಸುಲಭವಾಗಿ ಸಾಧ್ಯವಾಗುತ್ತದೆ. ದೈವಾರಾಧನಾ ವ್ಯವಸ್ಥೆಯಲ್ಲಿ ಸಮಾಜದ ಸರ್ವರೂ ಸಹಭಾಗಿಗಳಾಗುತ್ತಾರೆ. ಗ್ರಾಮವನ್ನು ರಕ್ಷಿಸುವ ದೈವ ತನ್ನ ರಾಜ್ಯ ಎಂದೇ ನುಡಿಯುತ್ತದೆ. ತಾಯಿಯಾಗಿ, ತಂದೆಯಾಗಿ, ಮಾವನಾಗಿ ಪಾಲಿಸಿ ಬುದ್ಧಿ ಹೇಳಿ ಬೆರಿಸಾಯ ಕೊಡುತ್ತೇನೆ ಎಂಬ ಅಭಯ ನೀಡುತ್ತದೆ. ಇಂತಹ ಕಲಾ ಸಮ್ಮಿಳಿದ ಆರಾಧನಾ ವಿಭಾಗವನ್ನು ಶ್ರದ್ಧೆಯಿಂದ, ಭಕ್ತಿಯಿಂದ ನೋಡಿ ಕಲೆಯ ಅಂಶವನ್ನು ಉಳಿಸುವ ಕೆಲಸವನ್ನು ಈ ಕೃತಿಯಲ್ಲಿ ಮಾಡಲಾಗಿದೆ’ ಎಂದು ಸಾಹಿತಿ ಏರ್ಯ ಲಕ್ಷಿ¾à ನಾರಾಯಣ ಶೆಟ್ಟಿ ಅವರು ಕೃತಿಯ ಬೆನ್ನುಡಿಯಲ್ಲಿ ತಿಳಿಸಿರುವುದು ಕೃತಿಗೆ ಕಲಶವಿಟ್ಟಂತಾಗಿದೆ. ಅವಲೋಕನ, ಮುಂಬಯಿ ತುಳು-ಕನ್ನಡಿಗರ ಸಿದ್ಧಿ-ಸಾಧನೆ, ಹನ್ನೆರಡು ಅಭಿನಂದನ ಗ್ರಂಥಗಳು, ತುಳು ಪರ್ಬ ನಡೆದು ಬಂದ ದಾರಿ ಇತ್ಯಾದಿ ಕೃತಿಗಳು ಲೋಕಾರ್ಪಣೆಗೊಂಡಿವೆ. ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ನಡೆಸುವ ಸಂಗೀತ-ನೃತ್ಯ ಮತ್ತು ತಾಳವಾದ್ಯಗಳು ಮುಂಬಯಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಮುಂಬಯಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ, ನವಿಮುಂಬಯಿಯಲ್ಲಿ ಕನ್ನಡ ಭವನ ಸ್ಥಾಪನೆ ಇತ್ಯಾದಿ ಮಹತ್ತರ ಸಾಧನೆಗಳನ್ನು ಎಚ್. ಬಿ. ಎಲ್. ರಾವ್ ಅವರು ಮಾಡಿದ್ದಾರೆ.
ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿಗಳು, ವಿವಿಧ ಸಂಘಟನೆಗಳಿಂದ ಮಾನ-ಸಮ್ಮಾನಗಳು ಲಭಿಸಿವೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡಿರುವ ಇವರ “ಅಣಿ ಅರದಳ-ಸಿರಿ ಸಿಂಗಾರ’ ದೈವಾರಾಧನೆಗೆ ಸಂಬಂಧಿಸಿದ ಬೃಹತ್ ಗ್ರಂಥಕ್ಕೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ.