Advertisement
1877ರ ಮಾರ್ಚ್ 15ರಂದು ಮೆಲ್ಬರ್ನ್ನಲ್ಲಿ ಆತಿಥೇಯ ಆಸ್ಟ್ರೇಲಿಯ ಮತ್ತು ಕ್ರಿಕೆಟ್ ಜನಕರಾದ ಇಂಗ್ಲೆಂಡ್ ನಡುವೆ ಈ “ಟೈಮ್‌ಲೆಸ್ ಟೆಸ್ಟ್’ ಆರಂಭವಾಗಿತ್ತು. ಸ್ಪಷ್ಟ ಫಲಿತಾಂಶ ಲಭಿಸುವ ತನಕ ಈ ಪಂದ್ಯ ನಡೆಯಲು ಉದ್ದೇಶಿಸಲಾಗಿತ್ತು. ಆದರೆ ಐದೇ ದಿನಗಳಲ್ಲಿ ಟೆಸ್ಟ್ ಇತಿಹಾಸದ ಮೊದಲ ಪಂದ್ಯ ಮುಗಿಯಿತು. ಆಸ್ಟ್ರೇಲಿಯ ಇದನ್ನು 45 ರನ್ನುಗಳಿಂದ ಜಯಿಸಿತ್ತು.
ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿತು. ಇಂಗ್ಲೆಂಡಿನ ಮಧ್ಯಮ ವೇಗಿ ಅಲ್ಫೆ†ಡ್ ಶಾ ಆಸೀಸ್ ಆರಂಭಕಾರ ಚಾರ್ಲ್ಸ್ ಬ್ಯಾನರ್ಮನ್ ಅವರಿಗೆ ಮೊದಲ ಎಸೆತವನ್ನಿಕ್ಕುವ ಮೂಲಕ ಟೆಸ್ಟ್ ಕ್ರಿಕೆಟ್ ಅಧಿಕೃತವಾಗಿ ಚಾಲನೆ ಪಡೆಯಿತು. ಟೆಸ್ಟ್ ಇತಿಹಾಸದ ಮೊದಲ ರನ್, ಮೊದಲ ಬೌಂಡರಿ ಹಾಗೂ ಮೊದಲ ಶತಕಕ್ಕೆ ಬ್ಯಾನರ್ಮನ್ ಸಾಕ್ಷಿಯಾದರು.
Related Articles
Advertisement
ಮತ್ತೂಬ್ಬ ಆರಂಭಕಾರ ನ್ಯಾಟ್ ಥಾಮ್ಸನ್ ಅವರನ್ನು ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡಿನ ಅಲನ್ ಹಿಲ್ ಮೊದಲ ಟೆಸ್ಟ್ ವಿಕೆಟ್ ಉರುಳಿಸಿದ ಹಿರಿಮೆಗೆ ಪಾತ್ರರಾದರು.
ಜವಾಬಿತ್ತ ಇಂಗ್ಲೆಂಡ್ 136.1 ಓವರ್‌ಗಳಲ್ಲಿ 196ಕ್ಕೆ ಆಲೌಟ್ ಆಯಿತು. ವಿಲಿಯಂ ಮಿಡ್‌ವಿಂಟರ್ 5 ವಿಕೆಟ್ ಉರುಳಿಸಿದ ಮೊದಲ ಬೌಲರ್ ಎನಿಸಿದರು (78ಕ್ಕೆ 5).
ಅಲ್ಫೆ†ಡ್ ಶಾ ದಾಳಿಗೆ (38ಕ್ಕೆ 5) ತತ್ತರಿಸಿದ ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌ನಲ್ಲಿ 104ಕ್ಕೆ ಕುಸಿಯಿತು. ಇಲ್ಲಿ ಬ್ಯಾನರ್ಮನ್ ಗಳಿಕೆ ಕೇವಲ 4 ರನ್. ಗೆಲುವಿಗೆ 154 ರನ್ ಗುರಿ ಪಡೆದ ಇಂಗ್ಲೆಂಡ್ ಟಾಮ್ ಕೆಂಡಾಲ್ ಅವರ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ 108ಕ್ಕೆ ಆಲೌಟ್ ಆಯಿತು. ಕೆಂಡಾಲ್ ಸಾಧನೆ 55ಕ್ಕೆ 7 ವಿಕೆಟ್.
ಮೊದಲ ಟೆಸ್ಟ್ ಅಂತ್ಯಕ್ಕೆ ಬ್ಯಾನರ್ಮನ್ ಮತ್ತು ಕೆಂಡಾಲ್ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ವಿಶ್ವದಾಖಲೆಯ ಹೀರೋ ಎನಿಸಿದರು. ಇದರಲ್ಲಿ ಯಾವುದೇ ಸಿಕ್ಸರ್ ದಾಖಲಾಗಲಿಲ್ಲ.
ಇಲ್ಲೇ ನಡೆದ ಸರಣಿಯ ದ್ವಿತೀಯ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದ ಇಂಗ್ಲೆಂಡ್ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಯಿತು.
ಭಾರತ ಫಾಲೋಆನ್ ಟೆಸ್ಟ್ ಗೆದ್ದ ದಿನವೂ ಹೌದು…ಮಾರ್ಚ್ 15 ಭಾರತದ ಟೆಸ್ಟ್ ಇತಿಹಾಸದಲ್ಲೂ ಸ್ಮರಣೀಯ ದಿನವಾಗಿತ್ತು. ಇದೇ ದಿನ ಭಾರತ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್
ನಲ್ಲಿ “ಫಾಲೋಆನ್ ಟೆಸ್ಟ್’ ಗೆದ್ದು ಇತಿಹಾಸ ನಿರ್ಮಿಸಿತ್ತು. ಫಾಲೋಆನ್‌ಗೆ ತುತ್ತಾದ ಬಳಿಕವೂ ಟೆಸ್ಟ್ ಗೆದ್ದ ಕೇವಲ 3ನೇ ನಿದರ್ಶನ ಇದಾಗಿತ್ತು. ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಮತ್ತು ಹರ್ಭಜನ್ ಸಿಂಗ್ ಈ ಗೆಲುವಿನ ರೂವಾರಿಗಳಾಗಿದ್ದರು. ಮುಂಬಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದ ಸ್ಟೀವ್ ವೋ ಪಡೆ ಕೋಲ್ಕತಾದಲ್ಲೂ ಮೇಲುಗೈ ಸಾಧಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಪೇರಿಸಿತ್ತು. ಜವಾಬಿತ್ತ ಗಂಗೂಲಿ ಪಡೆ 171ಕ್ಕೆ ಕುಸಿದು ಫಾಲೋಆನ್‌ಗೆ ಸಿಲುಕಿತ್ತು. ಇನ್ನೊಂದು ಸೋಲಿನ ಕಾರ್ಮೋಡ ಭಾರತದ ಮೇಲೆ ಆವರಿಸಿತ್ತು. ಲಕ್ಷ್ಮಣ್-ದ್ರಾವಿಡ್ ಮೆರೆದಾಟ
ಆದರೆ ಮುಂದಿನದ್ದೆಲ್ಲ ಪವಾಡ. ಫಾಲೋಆನ್ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಭಾರತ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 254 ರನ್ ಗಳಿಸಿತ್ತು. 4ನೇ ದಿನದ ಕೊನೆಯಲ್ಲಿ ಸ್ಕೋರ್ 589ಕ್ಕೆ ಏರಿತ್ತು. ವನ್‌ಡೌನ್‌ನಲ್ಲಿ ಬಂದಿದ್ದ ಲಕ್ಷ್ಮಣ್ 275 ಮತ್ತು 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ದ್ರಾವಿಡ್ 155 ರನ್ ಮಾಡಿ ದಿನವಿಡೀ ಬ್ಯಾಟಿಂಗ್ ನಡೆಸಿ ಕಾಂಗರೂಗಳನ್ನು ಗೋಳುಹೊಯ್ದಿದ್ದರು. ಅಂತಿಮವಾಗಿ ಈ ಜೋಡಿಯಿಂದ 5ನೇ ವಿಕೆಟಿಗೆ 376 ರನ್ ಹರಿದು ಬಂತು. ಲಕ್ಷ್ಮಣ್ 281, ದ್ರಾವಿಡ್ 180 ರನ್ ಬಾರಿಸಿದ್ದರು. ಹರ್ಭಜನ್ 13 ವಿಕೆಟ್ ಸಾಧನೆ
ಅಂತಿಮ ದಿನ ಭಾರತ 7ಕ್ಕೆ 657 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಪಂದ್ಯ ಡ್ರಾಗೊಳ್ಳುತ್ತದೆಂದೇ ಎಲ್ಲ ಭಾವಿಸಿದ್ದರು. ಆದರೆ ಹರ್ಭಜನ್ ಮತ್ತೆ ಆಸೀಸ್ ಪಡೆಯ ಮೇಲೆ ಘಾತಕವಾಗಿ ಎರಗಿದರು (73ಕ್ಕೆ 6). 212ಕ್ಕೆ ಆಲೌಟ್ ಆದ ಆಸ್ಟ್ರೇಲಿಯ 171 ರನ್ನುಗಳ ಹೀನಾಯ ಸೋಲಿಗೆ ಸಿಲುಕಿತು. ಮೊದಲ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸಹಿತ 7 ವಿಕೆಟ್ ಕಿತ್ತ ಭಜ್ಜಿ, ಒಟ್ಟು 196 ರನ್ ವೆಚ್ಚದಲ್ಲಿ 13 ವಿಕೆಟ್ ಉಡಾಯಿಸಿ ಮೆರೆದರು.